ಮಾನವ ಏನೇನೆಲ್ಲಾ ಕಂಡುಹಿಡಿದರೂ ರಕ್ಕಸ ತೆರೆಗಳಿಂದ ಸಮುದ್ರದ (Sea) ತೀರವನ್ನು ರಕ್ಷಿಸುವುದು ಹೇಗೆ ಎನ್ನುವುದು ಮಾತ್ರ ಸವಾಲಿನ ವಿಷಯವಾಗಿಯೇ ಉಳಿದಿದೆ. ಪ್ರತಿವರ್ಷ ಮೀಟರುಗಟ್ಟಲೆ ತೀರಗಳು ಸಮುದ್ರದ ಪಾಲಾಗುತ್ತಿದ್ದು, ತೀರದ ನಿವಾಸಿಗಳು ನಿರ್ವಸತಿಕರಾಗುತ್ತಿದ್ದಾರೆ. ಕಡಲ್ಕೊರೆತಕ್ಕೆ ಕಾರಣಗಳು ಹಲವಾರು ಇದ್ದರೂ ನಿರ್ವಹಣೆ ಮಾತ್ರ ಸರ್ಕಾರಗಳಿಗೆ ಸವಾಲಾಗಿಯೇ ಉಳಿದಿದೆ. ಬಂಡೆಗಳು, ಕಾಂಕ್ರೀಟ್ ತಡೆಗಲ್ಲುಗಳು, ಮರಳಿನ ಚೀಲಗಳು, ಅಲೆಗಳ ಶಕ್ತಿಯನ್ನು ಕಡಿಮೆಗೊಳಿಸಲು ಹಲವಾರು ತಂತ್ರಜ್ಞಾನಗಳನ್ನೂ ಬಳಸಿದ ನಂತರವೂ ಸಮುದ್ರದ ಹಸಿವೆಯು ತೀರಗಳನ್ನು ಇಂಚಿಂಚಾಗಿ ನುಂಗುತ್ತಲೇ ಇದೆ ಇವೆಲ್ಲದುದರ ಮಧ್ಯೆ ಸಬೆಲ್ಲಾರಿಯಾ ಎಂಬ ದುಂಡುಹುಳ ಮಾತ್ರ ನಿರ್ಲಿಪ್ತವಾಗಿ ಅರಮನೆಯನ್ನು ಕಟ್ಟಿಕೊಂಡು ಇನ್ನಿತರ ಜೀವವೈವಿಧ್ಯಕ್ಕೂ ಆಸರೆಯಾಗಿದೆ.
ಸಬೆಲ್ಲಾರಿಯಾವು(Sabellaria sp.) ದುಂಡು ಹುಳಗಳ ಗುಂಪಿಗೆ ಸೇರಿದ 30-40 ಎಂಎಂ ಗಾತ್ರಕ್ಕೆ ಬೆಳೆಯುವ ಸಮುದ್ರ ಜೀವಿ. ಸಾಮಾನ್ಯವಾಗಿ ಬಂಡೆಗಳಿಗೆ ಅಂಟಿಕೊಂಡು ಅಥವಾ ಸಾಗರದಾಳದಲ್ಲಿ ಕಂಡುಬರುವ ಇವು, ಸಣ್ಣ ಗೂಡುಗಳನ್ನು ಕಟ್ಟಿಕೊಂಡು ಅದರೊಳಗೆ ವಾಸವಾಗಿರುತ್ತವೆ. ಇವುಗಳು ಒಂದೊಂದಾಗಿ ಇರದೆ, ಅಸಂಖ್ಯಾತ ಸಂಖ್ಯೆಯಲ್ಲಿ ವಿಸ್ತಾರವಾಗಿ ಹಬ್ಬಿಕೊಂಡು ಮರಳಿನ ಮನೆಗಳನ್ನು ಕಟ್ಟಿಕೊಳ್ಳುತ್ತವೆ. ದೂರದಿಂದ ನೋಡಿದರೆ, ಬಂಡೆಗಳಿಗೆ ತೆಳುವಾದ ಮರಳಿನ ಹೊದಿಕೆ ಹಾಕಿದಂತೆ ಕಂಡರೂ, ಬಳಿ ಹೋಗಿ ನೋಡಿದರೆ ಇವುಗಳ ಸಂಕೀರ್ಣ ಜೀವ ವ್ಯವಸ್ಥೆ ಕಂಡುಬರುತ್ತದೆ. ಈ ಹುಳಗಳು ವಿವಿಧ ಗಾತ್ರದ ಮರಳಿನ ಕಣಗಳನ್ನು, ಸೂಕ್ಷ್ಮ ಚಿಪ್ಪುಗಳನ್ನು ತನ್ನ ವಿಶೇಷ ಅಂಟು ಸ್ರವಿಕೆಯ ಸಹಾಯದಿಂದ ಜೋಡಿಸಿಕೊಂಡು ಕೊಳವೆಯಾಕೃತಿಯಲ್ಲಿ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ. ಪ್ರತಿಯೊಂದು ಗೂಡು ನೆರೆಯ ಗೂಡುಗಳೊಂದಿಗೆ ಗಟ್ಟಿಯಾಗಿ ಅಂಟಿಕೊಂಡು ಸಹಸ್ರಾರು ಸಂಖ್ಯೆಯಲ್ಲಿರುತ್ತವೆ. ಈ ಗೂಡುಗಳನ್ನು ಗಟ್ಟಿಯಾಗಿ ಹಿಡಿದಿಡುವ ಈ ಅಂಟು ಸ್ರವಿಕೆಯು, ಅಲೆಗಳ ಅಪ್ಪಳಿಕೆಯನ್ನು ಸಮರ್ಥವಾಗಿ ತಡೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಮರಳಿನ ದಿಬ್ಬಗಳು ಇತರೆ ಜೀವಿಗಳಿಗೂ ಆಶ್ರಯ ನೀಡಿ, ವೈವಿಧ್ಯ ಜೀವವ್ಯವಸ್ಥೆಗೆ ಆಸರೆಯಾಗಿ, ಸಹಬಾಳ್ವೆಯ ಸಂದೇಶವನ್ನೂ ನೀಡುತ್ತವೆ. ಕಡಲ ಸಸ್ಯಗಳು, ಮೀನಿನ ಮರಿಗಳು, ಸ್ಪಂಜು ಪ್ರಾಣಿಗಳು, ಕುಟುಕು ಕಣವಂತಗಳು, ಮೃದ್ವಂಗಿಗಳಂತಹ ಅನೇಕ ಅಕಶೇರುಕಗಳಿಗೂ ಈ ಗೂಡುಗಳು ಆಧಾರವಾಗಿರುತ್ತವೆ.
Advertisement
ಈ ಅಂಟುದ್ರವವು ವಿಶೇಷ ಪ್ರೋಟೀನ್ ಕಿಣ್ವಗಲಿಂದ ಮಾಡಲ್ಪಟ್ಟಿದ್ದು, ಹುಳಗಳು ಅತಿ ತೆಳುವಾದ ಹೊದಿಕೆಯನ್ನು ತಮ್ಮ ಸುತ್ತಲೂ ಸ್ರವಿಸಿ, ಅದರ ಸುತ್ತಲೂ ಮರಳಿನ ಕಣಗನ್ನು ಪೋಣಿಸಿಕೊಳ್ಳುತ್ತವೆ. ಇವುಗಳು ತಮ್ಮ ಗೂಡಿನಬಳಿ ಬರುವ ಇತರೆ ಸಣ್ಣ ಜೀವಿಗಳನ್ನು ಹಿಡಿದು ತಿನ್ನುತ್ತವೆ. ಮೇಲ್ನೋಟಕ್ಕೆ ಈ ವ್ಯವಸ್ಥೆಯು, ಅಲೆಗಳ ಅಪ್ಪಳಿಕೆಯನ್ನು ತಡೆದುಕೊಳ್ಳುವ ಸಾಮರ್ಥ್ಯವಿದ್ದಂತೆ ಕಂಡುಬಂದರೂ, ಆ ಪ್ರದೇಶದ ಬಂಡೆ ಕಲ್ಲುಗಳನ್ನು ಈ ಹುಳಗಳು ಸಂಪೂರ್ಣವಾಗಿ ಆಕ್ರಮಿಸಿ, ಅಲ್ಲಿನ ಮೂಲ ಪ್ರಬೇಧಗಳಿಗೆ ಕಂಟಕಪ್ರಾಯವಾಗುತ್ತದೋ?,ಅಥವಾ, ಸುತ್ತಲಿನ ಮರಳನ್ನು ಅಸ್ಥಿರಗೊಳಿಸುತ್ತವೋ?, ಇವುಗಳ ಸ್ರವಿಕೆಯು ಒಳಗಿಂದೊಳಗೆ ಕಲ್ಲುಗಳ ಸವಕಳಿಗೆ ಕಾರಣವಾಗಿ ತಲೆನೋವಾಗಿ ಪರಿಣಮಿಸುತ್ತದೋ? ಎಂದು ತಿಳಿಯಲು ಇವುಗಳ ಮೇಲೆ ಕಣ್ಣಿಟ್ಟು, ಸೂಕ್ತ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳುವ ಅಗತ್ಯವಿದೆ.
Advertisement
ಮಂಗಳೂರಿನ ಕರಾವಳಿ ಪ್ರದೇಶಗಳಲ್ಲಿ ಈ ಹುಳಗಳು ಕಂಡುಬಂದಿದ್ದು, ಉಳ್ಳಾಲ, ಸುರತ್ಕಲ್ (Ullala, Surathkal) ತೀರಗಳ ಬಂಡೆ ಕಲ್ಲುಗಳ ಮೇಲೆ ಕಾಣಸಿಗುತ್ತವೆ. ಮಂಗಳೂರಿನ ಸಂತ ಅಲೋಶಿಯಸ್ (Mangaluru St aloysius College) ಕಾಲೇಜಿನ, ಅನ್ವಯಿಕ ಜೀವಶಾಸ್ತ್ರ ಪ್ರಯೋಗಾಲಯವು, ಸಮುದ್ರ ಸಸ್ಯಗಳ ಮೇಲೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿದ್ದು, ಈ ವಿಶಿಷ್ಟ ಹುಳಗಳು ಸಂಶೋಧಕರ ಗಮನ ಸೆಳೆದು, ಈ ನಿಟ್ಟಿನಲ್ಲಿ, ಆಧುನಿಕ ತಂತ್ರಜ್ಞಾನದ ಸಹಾಯದಿಂದ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದೆ. ಡಾ. ಲಿಯೋ ಡಿಸೋಜಾ ಹಾಗೂ ಡಾ. ಶಶಿಕಿರಣ್ ನಿವಾಸ್ ಅವರ ಮಾರ್ಗದರ್ಶನದಲ್ಲಿ, ಸುಧೀಕ್ಷಾ ಕಿರಣ್, ಸಚಿನ್ ಪಟವರ್ಧನ್, ಜೇನ್ ಜೇಮ್ಸ್, ಸುಲಕ್ಷಣಾ ಕಾರ್ಕಳ ಅವರನ್ನೊಳಗೊಂಡ ಸಂಶೋಧನಾ ತಂಡ ಈ ವಿಷಯದ ವಿವಿಧ ಆಯಾಮಗಳ ಪರಿಶೀಲನೆ ನಡೆಸುತ್ತಿದೆ.
Advertisement
– ಸಚಿನ್ ಪಟವರ್ಧನ್