ತಿರುವನಂತಪುರಂ: ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ (Sabarimala) ಸಂಭವಿಸುವ ಮಕರ ಜ್ಯೋತಿಯನ್ನು (ಮಕರವಿಳಕ್ಕು) ಕಣ್ತುಂಬಿಕೊಳ್ಳಲು ಅಯ್ಯಪ್ಪ ಭಕ್ತರು ಕಾತರರಾಗಿದ್ದಾರೆ. ಹೀಗಾಗಿ, ಶಬರಿಮಲೆಗೆ ಭಕ್ತರ ದಂಡೇ ಆಗಮಿಸುತ್ತಿದೆ. ಜನಸಂದಣಿಯನ್ನು ನಿಯಂತ್ರಿಸಲು ಶಬರಿಮಲೆ ದರ್ಶನಕ್ಕೆ ಬರುವ ಭಕ್ತರಿಗೆ ಸ್ಪಾಟ್ ಬುಕಿಂಗ್ ಅನ್ನು 5,000ಕ್ಕೆ ಮಿತಿಗೊಳಿಸಲಾಗಿದೆ.
ಮಕರ ಜ್ಯೋತಿಯನ್ನು (Makarajyothi) ಕಣ್ತುಂಬಿಕೊಳ್ಳಲು ಶಬರಿಮಲೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆಗ, ಶಬರಿಮಲೆಯಲ್ಲಿ ಭಕ್ತಾದಿಗಳ ನೂಕುನುಗ್ಗಲು ತಪ್ಪಿಸುವ ನಿಟ್ಟಿನಲ್ಲಿ ಸನ್ನಿಧಾನಂನಲ್ಲಿ ಸ್ಪಾಟ್ ಬುಕ್ಕಿಂಗ್ ಸೌಲಭ್ಯವನ್ನು ನಾಳೆಯಿಂದ (ಜ.8) ಜನವರಿ 15ರ ವರೆಗೆ ದಿನಕ್ಕೆ 5000 ಜನರಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಸನ್ ಗ್ಲಾಸ್ ಕ್ಯಾಮೆರಾ ಬಳಸಿ ರಾಮಜನ್ಮಭೂಮಿಯ ಚಿತ್ರೀಕರಣ – ಆರೋಪಿ ಅರೆಸ್ಟ್
Advertisement
Advertisement
ಶಬರಿಮಲೆಯಲ್ಲಿ ಹಬ್ಬ ಹರಿದಿನಗಳಲ್ಲಿ ಜನಸಂದಣಿ ನಿರ್ವಹಣೆಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ದೇವಸ್ವಂ ಬೋರ್ಡ್ ವೆಬ್‌ಸೈಟ್‌ನಲ್ಲಿ ಜ.12 ರಂದು 60,000, ಜ.13 ರಂದು 50,000 ಮತ್ತು ಜ.14 ರಂದು 40,000 ಎಂದು ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ಅನ್ನು ನಿಗದಿಪಡಿಸಲಾಗಿದೆ. ಮಕರ ಜ್ಯೋತಿ ದಿನ (ಜ.14) ಬೆಟ್ಟದ ಮೇಲೆ ಬಿಡಾರ ಹೂಡದಂತೆ ಭಕ್ತರಿಗೆ ಸಲಹೆ ನೀಡಲಾಗಿದೆ.
Advertisement
ಜ.10 ರಿಂದಲೇ ಪರ್ಣಶಾಲೆಗಳಲ್ಲಿ ಭಕ್ತರು ಕಾದು ಜ್ಯೋತಿ ದರ್ಶನ ಮಾಡುವುದು ವಾಡಿಕೆ. ಈ ಕಾರಣಕ್ಕಾಗಿ ಮಕರವಿಳಕ್ಕು ದಿನದಂದು ಉಂಟಾಗಬಹುದಾದ ಜನಸಂದಣಿ ತಪ್ಪಿಸಲು ಸಿದ್ಧತೆಗಳು ನಡೆಯುತ್ತಿವೆ. ಸ್ಪಾಟ್ ಬುಕ್ಕಿಂಗ್ ಅನ್ನು ಸೀಮಿತಗೊಳಿಸುವುದರ ಜೊತೆಗೆ ನಿಲಕ್ಕಲ್‌ನಲ್ಲಿ ಭಕ್ತರನ್ನು ಪಂಪಾ ನದಿಗೆ ಪ್ರವೇಶಿಸಲು ಅನುಮತಿಸುವ ಮೊದಲು ಪೊಲೀಸರು ತಪಾಸಣೆ ನಡೆಸುತ್ತಾರೆ. ಪರ್ಣಶಾಲೆಯಲ್ಲಿ ಕುಳಿತುಕೊಳ್ಳುವ ಭಕ್ತರ ಅಡುಗೆ ಮತ್ತು ಇತರ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರು ಮಾರ್ಗಸೂಚಿಗಳನ್ನು ಜಾರಿಗೆ ತರಲಿದ್ದಾರೆ. ಜ್ಯೋತಿ ದರ್ಶನಕ್ಕೆ ಸಜ್ಜಾಗಿರುವ ವಿವಿಧೆಡೆ ಭದ್ರತೆಗಾಗಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ: ಪೆನ್ನಾರ್ ನದಿ ನೀರು ವಿವಾದ, ಭದ್ರಾ ಮೇಲ್ದಂಡೆ ಯೋಜನೆ – ಕೇಂದ್ರ ಸಚಿವ ಸೋಮಣ್ಣ ಜೊತೆ ಡಿಕೆಶಿ ಚರ್ಚೆ
Advertisement
ಜ.12ರಂದು ಮಧ್ಯಾಹ್ನ 1 ಗಂಟೆಗೆ ಪಂದಳಂನ ವಲಿಯ ಕೊಯಿಕ್ಕಲ್ ದೇವಸ್ಥಾನದಿಂದ ಭಕ್ತರ ದರ್ಶನ ಹಾಗೂ ವಿವಿಧ ಕಾರ್ಯಕ್ರಮಗಳ ನಂತರ ತಿರುವಾಭರಣ ಮೆರವಣಿಗೆ ಶಬರಿಮಲೆಗೆ ತೆರಳಲಿದೆ. ವಿವಿಧ ದೇವಸ್ಥಾನಗಳನ್ನು ತಲುಪಿದ ಬಳಿಕ ದರ್ಶನ ಸೌಲಭ್ಯ ಪಡೆದು ರಾತ್ರಿ 9:30ಕ್ಕೆ ಅಯೂರು ಪುತಿಯಕಾವು ದೇವಸ್ಥಾನದಲ್ಲಿ ತಂಗಲಿದೆ. ಜ.13 ರಂದು ಮುಂಜಾನೆ 3 ಗಂಟೆಗೆ ಹೊರಡುವ ಮೆರವಣಿಗೆ ರಾತ್ರಿ 9 ಗಂಟೆಗೆ ಲಾಹಾದಲ್ಲಿ ತಂಗಲಿದೆ. 14ರಂದು ಮಕರವಿಳಕ್ಕು ದಿನ ಲಾಹದಿಂದ ಹೊರಟು ಪಂಡಿತಾವಲಂ, ಚೆರಿಯಾನವಟ್ಟಂ, ನೀಲಿಮಲ, ಅಪಾಚಿಮೇಡು ಮೂಲಕ ಸಂಜೆ 4 ಗಂಟೆಗೆ ಶಬರಿಪೀಠ ತಲುಪಲಿದೆ. ನಂತರ ಸಾರಂಕುತಿ ಮೂಲಕ ಸಂಜೆ 5.30ಕ್ಕೆ ಸನ್ನಿಧಾನಕ್ಕೆ ಬರಮಾಡಿಕೊಳ್ಳಲಾಗುವುದು. ಮೆರವಣಿಗೆ ಮಾರ್ಗಗಳಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ.
ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿರುವುದು ಪೊಲೀಸರ ಸಿದ್ಧತೆಗಳ ಯಶಸ್ಸಿಗೆ ಮತ್ತು ಸುಗಮ ಮತ್ತು ಸುರಕ್ಷಿತ ದರ್ಶನಕ್ಕೆ ಸಾಕ್ಷಿಯಾಗಿದೆ. ನ.15 ರಿಂದ ಈ ವರ್ಷ ಜ.5 ರವರೆಗೆ ತೀರ್ಥಯಾತ್ರೆ ಪ್ರಾರಂಭವಾದಾಗ ದಾಖಲೆಯ 39,02,610 ಅಯ್ಯಪ್ಪ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷ ಇದೇ ಅವಧಿಯಲ್ಲಿ 35,12,691 ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು. ಮಕರವಿಳಕ್ಕು ಆರಂಭವಾದ ಡಿ.30 ರಿಂದ ನಿನ್ನೆಯವರೆಗೆ 6,22,849 ಜನರು ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ರಾಜ್ಯ ಪೊಲೀಸ್ ಮಾಧ್ಯಮ ಕೇಂದ್ರದ ಉಪ ನಿರ್ದೇಶಕ ಎಸ್.ಆರ್.ಪ್ರವೀಣ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ್‌ಪೋಲ್ ಪೋರ್ಟಲ್ ಲೋಕಾರ್ಪಣೆ ಮಾಡಿದ ಅಮಿತ್ ಶಾ