ಪತ್ತನಂತಿಟ್ಟ: ಅಯ್ಯಪ್ಪ (Ayyappa) ಸನ್ನಿಧಾನದಲ್ಲಿ ಕಳೆದ 39 ದಿನಗಳಲ್ಲಿ ಬರೋಬ್ಬರಿ 204.30 ಕೋಟಿ ರೂ. ಆದಾಯ (Revenue) ಸಂಗ್ರಹವಾಗಿದೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 18 ಕೋಟಿ ಆದಾಯ ಕಡಿಮೆಯಾಗಿದೆ ಎಂಬುದಾಗಿ ವರದಿಯಾಗಿದೆ.
ಶಬರಿಮಲೆ (Sabarimala) ದೇಗುಲದಲ್ಲಿ 41 ದಿನಗಳ ಕಾಲ ನಡೆದ ಮಂಡಲಂ-ಮಕರವಿಳಕ್ಕು (Mandalam-Makaravilakku) ಯಾತ್ರೆಯ ಮೊದಲ ಹಂತ ಇಂದು ಮುಕ್ತಾಯಗೊಳ್ಳಲಿದೆ. ಮೊದಲ 39 ದಿನಗಳ ಅಂದರೆ ಡಿಸೆಂಬರ್ 25 ರವರೆಗೆ ಬೆಟ್ಟದ ದೇಗುಲದ ಆದಾಯವು 204,30,76,704 ರೂ.ಗೆ ತಲುಪಿದೆ. ಆದಾಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾಗಿದೆ. ಆದರೆ ಮೊದಲ 39 ದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಯಾತ್ರಾರ್ಥಿಗಳ ಸಂಖ್ಯೆ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ.
ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಶಬರಿಮಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವರ್ಷ ಈ ಬಾರಿ 222,98,70,250 (222.98 ಕೋಟಿ ರೂ.) ಆದಾಯ ಬಂದಿದ್ದು, ಈ ಬಾರಿ 18,67,93, 546 ರೂ. ಇಳಿಕೆಯಾಗಿದೆ. ಇನ್ನು ನಾಣ್ಯಗಳನ್ನು ಎಣಿಸಿದ ನಂತರ ‘ಕುತಕ ಲೇಲಂ’ ಆದಾಯವನ್ನು ಸೇರಿಸಿದರೆ ಆದಾಯ ಹೆಚ್ಚಾಗಬಹುದು ಎಂದು ಅವರು ತಿಳಿಸಿದ್ದಾರೆ.
ಭಕ್ತರು ಸಲ್ಲಿಸಿರುವ ಕಾಣಿಕೆಯಿಂದ 63.89 ಕೋಟಿ ರೂ. ಸಂಗ್ರಹವಾಗಿದೆ. ಅರವಣ ಪ್ರಸಾದದಿಂದ 96.32 ಕೋಟಿ ರೂ., ಅಪ್ಪಂ ಪ್ರಸಾದ ಮಾರಾಟದಿಂದ 12.39 ಕೋಟಿ ರೂ. ಆದಾಯ ಬಂದಿದೆ. ಈ ಋತುವಿನಲ್ಲಿ 31 ಲಕ್ಷ ಯಾತ್ರಾರ್ಥಿಗಳು ಬೆಟ್ಟದ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಕಳೆದ ಋತುವಿನಲ್ಲಿ ಸುಮಾರು 30 ಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದರು. ಹಿಂದಿನ ವರ್ಷ 50 ಲಕ್ಷ ಭಕ್ತರು ಇಡೀ ತೀರ್ಥೋದ್ಭವದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ 50 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಪ್ರಶಾಂತ್ ವಿವರಿಸಿದ್ದಾರೆ.