ಹಾಸನ: ಜಿಲ್ಲೆಯಲ್ಲಿ ಚುನಾವಣೆಗೂ ಮುನ್ನವೇ ವಿವಿಧ ರಾಜಕೀಯ ಪಕ್ಷಗಳಿಂದ ಮತದಾರರ ಓಲೈಕೆ ರಾಜಕೀಯ ಜೋರಾಗಿಯೇ ನಡೆಯುತ್ತಿದೆ.
ಸಕಲೇಶಪುರದ ಪಟ್ಟಣದ ಓಂ ಮಂದಿರದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಮಹಿಳೆಯರಿಗೆ ಬಹಿರಂಗವಾಗಿಯೇ ಸೀರೆ ಹಂಚಿದ ಘಟನೆ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಹಿಳಾ ಕಾರ್ಯಕ್ರಮವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮ ಮುಗಿದ ಬಳಿಕ ಭಾಗಿಯಾಗಿದ್ದ ಮಹಿಳೆಯರಿಗೆ ಅರಶಿನ ಕುಂಕುಮ ಜೊತೆಗೆ ಬಾಗಿನ ನೆಪದಲ್ಲಿ ಸಾರ್ವಜನಿಕವಾಗಿಯೇ ಸೀರೆ ವಿತರಣೆ ಮಾಡಲಾಯಿತು. ಮುಂದಿನ ಚುನಾವಣೆಯಲ್ಲಿ ಮತ ಉದ್ದೇಶದಿಂದಲೇ ಸೀರೆ ಹಂಚಲಾಗಿದೆ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ.
ಸಭೆಗೆ ಬಂದರೆ ಸೀರೆ ಕೊಡುವುದಾಗಿ ಮೊದಲೇ ಹೇಳಿದ್ದರು. ಅದಕ್ಕಾಗಿ ಬಂದೆವು ಅಂತ ಸೀರೆ ಪಡೆದ ಮಹಿಳೆಯೊಬ್ಬರು ಹೇಳಿದ್ದಾರೆ. ರಾಷ್ಟ್ರೀಯ ಪಕ್ಷವೊಂದರ ಮಹಿಳಾ ಮಣಿಗಳು ಸೀರೆ ಹಂಚಿದ ಕ್ರಮಕ್ಕೆ ಇದೀಗ ವ್ಯಾಪಕ ಟೀಕೆ ಕೇಳಿ ಬಂದಿದೆ.