– ನಾವೂ ನೊಂದಿದ್ದೇವೆ ಆದ್ರೆ ಮುಂಬೈಗೆ ಹೋಗಿಲ್ಲ
– ನನ್ನದು ತಪ್ಪಿದ್ದರೆ ಜನತೆಯ ಕ್ಷಮೆಯಾಚಿಸ್ತೇನೆ
– ಪಕ್ಷಕ್ಕೆ ಕರೆತಂದು ತಪ್ಪು ಮಾಡಿದ್ದೇನೆ
ಮೈಸೂರು: ಸೋಮವಾರ ಸದನಕ್ಕೆ ಬಂದು ನೀವು ಕಳಂಕರಹಿತ ಎಂದು ಬಹಿರಂಗ ಪಡಿಸಿ, ಆಗ ನಾನು ರಾಜ್ಯದ ಮುಂದೆ ಕ್ಷಮೆ ಕೇಳುತ್ತೇನೆ ಎಂದು ಸಚಿವ ಸಾ.ರಾ.ಮಹೇಶ್ ಅವರು ಶಾಸಕ ಎಚ್.ವಿಶ್ವನಾಥ್ ಅವರಿಗೆ ಬಹಿರಂಗವಾಗಿ ಸವಾಲು ಹಾಕಿದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾ.ರಾ.ಮಹೇಶ್, ಎಚ್ ವಿಶ್ವನಾಥ್ ಅವರು ಸದನದಿಂದ ಹೊರತುಪಡಿಸಿರುವ ವ್ಯಕ್ತಿಯಲ್ಲ. ಅವರು ಸದನದ ಸದಸ್ಯರಾಗಿದ್ದಾರೆ. ಆದ್ದರಿಂದ ನಿಮಗೆ ಆತ್ಮಸಾಕ್ಷಿ, ಮನಸಾಕ್ಷಿ ಇದ್ದರೆ ಸೋಮವಾರ ಸದನಕ್ಕೆ ಬನ್ನಿ. ನಾನು ಹೇಳಿರುವ ಮಾತಿನಲ್ಲಿ ತಪ್ಪಿದ್ದರೆ ರಾಜ್ಯದ ಜನತೆಯ ಮುಂದೆ ಕ್ಷಮೆ ಕೇಳುತ್ತೇನೆ. ಈಗಾಗಲೇ ನಾನು ಇನ್ಮುಂದೆ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದೇನೆ. ಅದೇ ಮಾತಿಗೆ ಬದ್ಧನಿದ್ದೇನೆ ಎಂದು ಹೇಳಿದರು.
Advertisement
Advertisement
ನೀವು ಸದನಕ್ಕೆ ಬರುವ ಅಧಿಕಾರವನ್ನು ಕಳೆದುಕೊಂಡಿದ್ದೀರಿ. ನೀವು ಕಳಂಕರಹಿತ ಎಂದು ಹೇಳಲು ಇರುವ ಕೊನೆಯ ದಿನಾಂಕ ಸೋಮವಾರ. ಹೀಗಾಗಿ ಅಂದು ಬನ್ನಿ ಬಹಿರಂಗವಾಗಿ ಹೇಳಿ ನಾನು ಒಪ್ಪಿಕೊಳ್ಳುತ್ತೇನೆ. ಜೊತೆಗೆ ಎಲ್ಲ ಷರತ್ತುಗಳನ್ನು ನಾನು ಪಾಲಿಸುತ್ತೇನೆ. ಅಲ್ಲೇ ನಾನು ಸ್ಪೀಕರ್‍ಗೆ ರಾಜೀನಾಮೆ ಕೊಟ್ಟು ನನ್ನ ಜೀವಿತಾವಧಿಯಲ್ಲಿ ಯಾವುದೇ ರಾಜಕೀಯ ಹುದ್ದೆ, ಚುನಾವಣೆಯನ್ನು ಸಾರ್ವಜನಿಕ ಜೀವನದಲ್ಲಿ ಬಯಸಲ್ಲ. ಅಷ್ಟೇ ಅಲ್ಲದೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗುತ್ತೇನೆ ಎಂದು ವಿಶ್ವನಾಥ್‍ಗೆ ಸವಾಲು ಹಾಕಿದರು.
Advertisement
ನಾವು ನೊಂದಿದ್ದೇವೆ. ಆದರೆ ಮುಂಬೈಗೆ ಹೋಗಿಲ್ಲ, ನೀವು ಮುಂಬೈನಿಂದ ಬನ್ನಿ. ನಮ್ಮ ಕರ್ನಾಟಕದಲ್ಲಿ ಪೊಲೀಸ್, ವೈದ್ಯರು ಇಲ್ವಾ? ನಮ್ಮ ಜನರು ನಿಮಗೆ ಪ್ರೀತಿ ಗೌರವವನ್ನು ಕೊಟ್ಟಿದ್ದಾರೆ. ಆದರೆ ನೀವು ಮುಂಬೈನಲ್ಲಿ ಕುಳಿತಿದ್ದೀರಿ. ಮುಂಬೈನಲ್ಲಿ ನಿಮಗೆ ಏನ್ ಸ್ವಾಮಿ ಕೆಲಸ ಎಂದು ಪ್ರಶ್ನೆ ಮಾಡಿದರು.
ರಾಜಕಾರಣದಲ್ಲಿ ಪ್ರಯಾಣಿಕವಾಗಿದ್ದವನು ನೇರವಾಗಿ ಮಾತನಾಡುತ್ತಾನೆ, ಅದು ದುರಂಕಾರವಲ್ಲ. ಒಬ್ಬ ಮನಷ್ಯ ವ್ಯವಹಾರ ಮಾಡುವುದು ತಪ್ಪಲ್ಲ. ಆದರೆ ರಾಜಕಾರಣವನ್ನು ವ್ಯವಹಾರ ಮಾಡುವುದು ತಪ್ಪು ಎಂದು ಮಹೇಶ್ ಗರಂ ಆದರು.
ಒಮ್ಮೆ ನಾನು ಬಿಜೆಪಿ ಮುಖಂಡರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದೆ. ಆಗ ಅವರು ಅವನು ಬಿಜೆಪಿಯ ಹಳೆ ಗಿರಾಕಿ ಎಂದು ಟೀಕಿಸಿದ್ದರು. ಆಗಲೂ ಸುಮ್ಮನೆ ಇದ್ದೆ. ನನ್ನ ಮೇಲೆ ಹಲವು ಬಾರಿ ಟೀಕಿಸಿದ್ದರೂ ಸುಮ್ನೆ ಇದ್ದೆ. ನನಗೂ ಸ್ವಾಭಿಮಾನವಿದೆ, ಹಾಗಾಗಿ ನಾನು ವಿಧಾನಸಭೆಯಲ್ಲಿ ಮಾತನಾಡಿದೆ. ಆದರೆ ಈ ಬಗ್ಗೆ ನೀವು(ವಿಶ್ವನಾಥ್) ಮಾಧ್ಯಮಗಳಲ್ಲಿ ಮಾತನಾಡಿ, ನಾನು ಪ್ರಾಮಾಣಿಕನಾಗಿದ್ದರೂ ಭ್ರಷ್ಟಾಚಾರಿ ಅಲ್ಲ, ನನ್ನನ್ನು ಮಂತ್ರಿ ಮಾಡಲು ಅವರ‍್ಯಾರು ಎಂದು ಪ್ರಶ್ನೆ ಮಾಡಿದ್ದೀರಿ ಎಂದು ವಿಶ್ವನಾಥ್ ಹೇಳಿಕೆಯನ್ನು ಸಾರಾ ಮಹೇಶ್ ಇಂದು ಪ್ರಸ್ತಾಪ ಮಾಡಿದರು.
ನಮ್ಮ ನಾಯಕರಿಗೆ ಇವತ್ತು ಈ ಸ್ಥಿತಿಗೆ ಬರಲು ಪರೋಕ್ಷವಾಗಿ ನಾನೇ ಕಾರಣ. ವಿಶ್ವನಾಥ್‍ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಜಿ.ಟಿ ದೇವೇಗೌಡ ಸೇರಿದಂತೆ ಹಲವರ ವಿರೋಧ ಇತ್ತು. ಆದರೂ ನಾನು ಪಕ್ಷಕ್ಕೆ ಒಳ್ಳೆಯಾದಾಗಲಿ ಎಂದು ಅವರನ್ನು ಕರೆ ತಂದೆ. ಆವತ್ತು ನಾನು ನಮ್ಮ ಪಕ್ಷಕ್ಕೆ ಅವರನ್ನು ಬೇಡ ಅಂದಿದ್ದರೆ, ಇವತ್ತು ನಮ್ಮ ಪಕ್ಷಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಕೋಪದಿಂದ ಹೇಳಿದರು.
ನಾನು ಜಾತಿ ವಿರೋಧಿನಾ, ನಾನು ವೃತ್ತಿಯಲ್ಲಿ ಡೆವಲಪರ್ ಆಗಿದ್ದೆ. ನನಗೆ ವ್ಯವಹಾರ ಇದೆ. ನಾನು ನಾಲ್ಕು ಚುನಾವಣೆಯನ್ನು ಎದುರಿಸಿದ್ದೇನೆ. ಜನರು ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ನೀವು ಒಂಬತ್ತು ಚುನಾವಣೆಯಲ್ಲಿ ನಿಂತಿದ್ದೀರಿ. ಆದರೆ ನಾಲ್ಕು ಬಾರಿ ಸೋತಿದ್ದೀರಿ, ನಾನು ಜಾತಿ ವಿರೋಧಿ ಮಾಡುತ್ತೀನಾ. ನಿಮಗೆ ಯಾವ ವ್ಯವಹಾರ ಇದೆ, ಹಣ ಎಲ್ಲಿಂದ ಬಂತು ಎಂದು ಮಹೇಶ್ ವ್ಯಂಗ್ಯವಾಡಿದರು.
ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೀನಿ ಎಂದು ಹೇಳಿದ್ದೀರಲ್ಲ. ಬನ್ನಿ ನಾಳೆ ಅಧಿವೇಶನಕ್ಕೆ ನನ್ನ ವಿರುದ್ಧ ಹಕ್ಕು ಚ್ಯುತಿ ತನ್ನಿ. ಇನ್ನೂ ಅನೇಕ ವಿಷಯಗಳಿವೆ, ಅವುಗಳನ್ನು ಬಹಿರಂಗ ಪಡಿಸುತ್ತೇನೆ. ಯಾವ ದೇವಸ್ಥಾನಕ್ಕೆ ಕರೆಯುತ್ತೀರಾ ಕರೆಯಿರಿ ಬರುತ್ತೇನೆ. ನಾನು ನನ್ನ ವ್ಯವಹಾರದಲ್ಲಿ ಬಿಟ್ಟು, ಬೇರೆ ಯಾರಿಂದಲೂ ಹಣ ಪಡೆದಿಲ್ಲ. ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ ಎಂದು ಮಹೇಶ್ ಸವಾಲು ಹಾಕಿದರು.