ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಆಯ್ತು ಎಂದ ಸೋನು ನಿಗಮ್ (Sonu Nigam) ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ಸಾಂಗ್ ಹಾಡಿ ಎಂದು ಹೇಳಿದ್ದೆ ತಪ್ಪಾ? ಎಂದು ಸೋನು ನಿಗಮ್ ಆಡಿರುವ ಮಾತಿಗೆ ಕನ್ನಡಪರ ಹೋರಾಟಗಾರ ಸಾರಾ ಗೋವಿಂದು (Sa Ra Govindu) ಕಿಡಿಕಾರಿದ್ದಾರೆ. ಇದನ್ನೂ ಓದಿ:ಕನ್ನಡಿಗರಲ್ಲಿ ಕ್ಷಮೆಯಾಚಿಸಿ: ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಕನ್ನಡ ನಿರ್ಮಾಪಕನ ಆಕ್ರೋಶ
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸಾರಾ ಗೋವಿಂದು, ಸೋನು ನಿಗಮ್ ಅದ್ಭುತ ಗಾಯಕ ಅದರಲ್ಲಿ ಎರಡು ಮಾತಿಲ್ಲ. ಅಷ್ಟೇ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಈ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ಸಾಂಗ್ ಹಾಡಿ ಎಂದು ಹೇಳಿದ್ದೆ ತಪ್ಪಾ? ಎಂದು ಪ್ರಶ್ನಿಸಿದ್ದಾರೆ. ಪಹಲ್ಗಾಮ್ ದಾಳಿಗೆ ಯಾಕೆ ಹೋಲಿಸಿದ್ರಿ ಅನ್ನೋದು ಅರ್ಥವಾಗಲಿಲ್ಲ. ಕನ್ನಡಿಗರೇನು ಭಯೋತ್ಪಾದಕರಾ? ಇಂತಹ ಉದ್ಧಟತನದ ಮಾತುಗಳನ್ನು ಆಡೋದು ಬೇಡ. ನೀವು ಕೂಡಲೇ ಕನ್ನಡಿಗರಿಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳಲ್ಲಿ ಅಂದರೆ ಕನ್ನಡ ಚಿತ್ರರಂಗದಲ್ಲಿ ಹಾಗೂ ಕರ್ನಾಟಕದಲ್ಲಿ ಯಾವುದೇ ಕಾರ್ಯಕ್ರಮ ಮಾಡೋಕೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಚರ್ಚೆಗೆ ಗ್ರಾಸವಾಯ್ತು ಕಾರ್ತಿಕ್ ಆರ್ಯನ್, ಶ್ರೀಲೀಲಾ ಡೇಟಿಂಗ್ ವಿಚಾರ- ವಿಡಿಯೋ ವೈರಲ್
ಒಬ್ಬ ಜವಾಬ್ದಾರಿಯುತ ವ್ಯಕ್ತಿ ಹೀಗೆ ಮಾತನಾಡಿದಾಗ ಚಲನಚಿತ್ರ ವಾಣಿಜ್ಯ ಮಂಡಳಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಸೋನು ನಿಗಮ್‌ಗೆ ಯಾವುದೇ ಕನ್ನಡ ಸಿನಿಮಾಗಳಲ್ಲಿ ಹಾಡಲು ಅವಕಾಶ ನೀಡಬಾರದು. ಮೊದಲು ಅವರು ಕ್ಷಮೆಯಾಚಿಸಬೇಕು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತೇವೆ. ಅವರ ಕ್ಷಮೆಗಾಗಿ ಕಾದುನೋಡುತ್ತೇವೆ. ಇಲ್ಲಾಂದ್ರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಗಾಯಕನಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ನಿನ್ನೆ (ಮೇ.1) ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದನು. ಅದಕ್ಕೆ ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ತಮಗೆ ಕನ್ನಡ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಗೌರವದ ಬಗ್ಗೆ ಹೇಳಿಕೊಂಡರು.
ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ಆ ಪೈಕಿ ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ನೀವೆಲ್ಲ ನನ್ನನ್ನು ನಿಮ್ಮ ಕುಟುಂಬದವರಂತೆ ನೋಡಿಕೊಂಡಿದ್ದೀರಿ. ಪ್ರತಿ ಬಾರಿ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ, ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಒಂದು ಸಾಲು ಕನ್ನಡ ಹಾಡನ್ನಾದರೂ ಹಾಡಿರುತ್ತೇನೆ. ಆ ಹುಡುಗನ ವಯಸ್ಸಿಗಿಂತ ಮೊದಲಿನಿಂದಲೂ ನಾನು ಕನ್ನಡ ಹಾಡು ಹಾಡುತ್ತಿದ್ದೇನೆ. ಆದರೆ ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಆ ಹುಡುಗ ಹೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡರು.
ಸೋನು ನಿಗಮ್ ಮಾತಿಗೆ ಕನ್ನಡಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಕನ್ನಡ ಹಾಡುವಂತೆ ಹೇಳಿದ್ದಕ್ಕೂ, ಭಯೋತ್ಪಾದಕರ ದಾಳಿಗೂ ಏನು ಸಂಬಂಧ? ಎಂದು ಆಕ್ರೋಶ ಹೊರಹಾಕಿದ್ದಾರೆ. ಸೋನು ನಿಗಮ್‌ರನ್ನು ಕನ್ನಡ ಚಿತ್ರೋದ್ಯಮದಿಂದ ದೂರ ಇಡಿ ಹಾಗೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.