ಬೆಂಗಳೂರು: ಶನಿವಾರ ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ತಡರಾತ್ರಿ ಸುಮಾರು 1 ಗಂಟೆಗೆ ಬೆಂಗಳೂರಿಗೆ ಆಗಮಿಸಿದರು. ಎಸ್.ಟಿ.ಸೋಮಶೇಖರ್ ಆಗಮಿಸುತ್ತಿದ್ದಂತೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕಾಣಿಸಿಕೊಂಡರು.
ವಿಮಾನ ನಿಲ್ದಾಣದಿಂದ ಎಸ್.ಟಿ.ಸೋಮಶೇಖರ್ ಹೊರ ಬರುತ್ತಿದ್ದಂತೆ ಮಾಧ್ಯಮಗಳನ್ನು ಕಂಡ ಕೂಡಲೇ ಬಿಜೆಪಿ ಶಾಸಕರು ಅಂತರ ಕಾಯ್ದುಕೊಂಡರು. ಇತ್ತ ಸೋಮಶೇಖರ್ ಕಾರ್ ನ್ನು ಹಿಂಬಾಲಿಸಿಕೊಂಡು ಎಸ್.ಆರ್.ವಿಶ್ವನಾಥ್ ಹೋದರು. ಮಾಜಿ ಡಿಸಿಎಂ ಆರ್.ಅಶೋಕ್ ಅವರ ಸುಪರ್ದಿಯಲ್ಲಿಯೇ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಟಿ.ಸೋಮಶೇಖರ್, ನಾನು ಎಲ್ಲಿಯೂ ಹೋಗಿಲ್ಲ. ಈಗ ಬೆಂಗಳೂರಿಗೆ ಬಂದಿದ್ದೇನೆ. ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ನಲ್ಲಿಯೇ ಇದ್ದೇನೆ ಎಂದು ಹೇಳಿದರು. ಇಂದು ಕರ್ನಾಟಕ ವಸತಿ ಮಹಾಮಂಡಳಿ ಚುನಾವಣೆ ಹಿನ್ನೆಲೆ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಅತೃಪ್ತರ ಶಾಸಕರು ತಮ್ಮ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಸುಪ್ರೀಂಕೋರ್ಟ್ ಗೆ ಬುಧವಾರ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್ ಆದೇಶವನ್ನು ನೋಡಿಕೊಂಡು ಅತೃಪ್ತರು ಬೆಂಗಳೂರಿಗೆ ಬರುವ ಕುರಿತು ಪ್ಲಾನ್ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.