ಬೆಂಗಳೂರು: ಸದಾ ಕ್ರೀಯಾಶೀಲವಾಗಿ ಕೆಲಸ ಮಾಡುವ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಟಿಬೇಟಿಯನ್ ಶಾಲೆಗಳಿಗೆ ಕನ್ನಡ ಪಠ್ಯ ವಿನಾಯ್ತಿ ನೀಡಲು ನಿರ್ಧಾರ ಮಾಡಿದ್ದು, ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಸಚಿವ ಸುರೇಶ್ ಕುಮಾರ್ ನಿರ್ಧಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ವಿರೋಧ ಮಾಡಿದೆ.
ಕನ್ನಡ ಭಾಷಾ ಕಲಿಕಾ ಅಧಿನಿಯಮ 2015ರ ಅನ್ವಯ ಕರ್ನಾಟಕದ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಕನ್ನಡ ಭಾಷೆಯನ್ನ ಮೊದಲ ಭಾಷೆ ಅಥವಾ ಎರಡನೇ ಭಾಷೆಯಾಗಿ ಕಲಿಸಲೇಬೇಕು. ಒಂದು ವೇಳೆ ಕಲಿಸದೇ ಹೋಗದ ಶಾಲೆಗಳ ಮೇಲೆ ಕ್ರಮ ತೆಗೆದುಕೊಳ್ಳುವ ನಿಯಮ ಇದೆ. ಆದರೆ ಟಿಬೇಟಿಯನ್ ಶಾಲೆಗಳಲ್ಲಿ ಕನ್ನಡ ಕಲಿಸುವುದಕ್ಕೆ ನಿರಾಕರಣೆ ಮಾಡಿದ್ದಾರೆ.
ಸಚಿವ ಸುರೇಶ್ ಕುಮಾರ್ ಅವರನ್ನ ಟಿಬೇಟಿಯನ್ ಶಿಕ್ಷಣ ಮಂತ್ರಿಗಳ ನಿಯೋಗವು ಇತ್ತೀಚೆಗೆ ಭೇಟಿಯಾಗಿತ್ತು. ಈ ವೇಳೆ ಕನ್ನಡ ಕಡ್ಡಾಯ ಕಲಿಕೆ ನಿಯಮದಿಂದ ನಮ್ಮ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಕಡ್ಡಾಯ ಕನ್ನಡ ಕಲಿಕಾ ನಿಯಮದಿಂದ ವಿನಾಯ್ತಿ ನೀಡಬೇಕು ಎಂದು ಮನವಿ ಮಾಡಿದ್ದರು. ನಿಯೋಗದ ಮನವಿಗೆ ಸ್ಪಂಧಿಸಿರುವ ಸಚಿವರು, ರಾಜ್ಯದ ಟಿಬೇಟಿಯನ್ ಶಾಲೆಗಳಿಗೆ ಕನ್ನಡ ಕಲಿಕೆ ವಿನಾಯ್ತಿ ನೀಡುವಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಚಿವ ಈ ನಿರ್ಧಾರದಿಂದ ರಾಜ್ಯದಲ್ಲಿ ಇರುವ 12 ಟಿಬೇಟಿಯನ್ ಶಾಲೆಗಳಲ್ಲಿ ಕನ್ನಡ ಪಠ್ಯ ಕೈ ಬಿಡುವ ಸಾಧ್ಯತೆ ಇದೆ.
ಟಿಬೇಟಿಯನ್ ಶಾಲೆಗಳಲ್ಲಿ ಈಗಾಗಲೇ ಪ್ರಥಮ ಭಾಷೆಯಾಗಿ ಟಿಬೇಟಿಯನ್, ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಕಲಿಸಲಾಗುತ್ತಿದೆ. ಆದರೆ ನಿಯಮದ ಪ್ರಕಾರ ಕನ್ನಡ ಭಾಷೆ ಕಲಿಸಬೇಕು. ಈಗ ಅದನ್ನು ಕಲಿಸಲಾಗದೆ ಸಚಿವರಿಗೆ ಮನವಿ ಮಾಡಿ ವಿನಾಯ್ತಿ ಪಡೆಯಲು ಟಿಬೇಟಿಯನ್ ಶಾಲೆಗಳು ಮುಂದಾಗಿವೆ. ಸಚಿವ ಸುರೇಶ್ ಕುಮಾರ್ ನಿರ್ಧಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕನ್ನಡ ಕಲಿಕೆ ನಿಯಮ ಪಾಲನೆ ಆಗಬೇಕು. ಎಲ್ಲಾ ಶಾಲೆಗಳು ನಿಯಮ ಪಾಲನೆ ಮಾಡಬೇಕು. ಟಿಬೇಟಿಯನ್ ಶಾಲೆಗಳು ಕನ್ನಡ ಒಂದು ಭಾಷೆಯಾಗಿ ಕಲಿಯಬೇಕು. ಒಂದು ವೇಳೆ ಇವರಿಗೆ ವಿನಾಯ್ತಿ ಕೊಟ್ಟರೆ ನಾವೇ ಮಾಡಿದ ನಿಯಮ ಉಲ್ಲಂಘನೆ ಆಗುತ್ತೆ. ಮುಂದೆ ಬೇರೆ ಶಾಲೆಗಳು ಇದೇ ಮಾರ್ಗ ಹಿಡಿಯುತ್ತವೆ ಎಂದು ಅಸಮಾಧಾನ ಹೊರ ಹಾಕಿದೆ.
ಸಚಿವರ ನಿರ್ಧಾರ ವಿವಾದವಾದ ಕೂಡಲೇ ಸಚಿವ ಸುರೇಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿದ್ದಾರೆ. ನಾನು ಆ ರೀತಿ ಯಾವುದೇ ಚಿಂತನೆ ನಡೆಸಿಲ್ಲ. ಟಿಬೇಟಿಯನ್ ವಲಸೆ ಸರ್ಕಾರದ ಶಿಕ್ಷಣ ಸಚಿವೆ ನನ್ನನ್ನು ಭೇಟಿ ಮಾಡಿ ವಿನಾಯಿತಿ ಕೋರಿ ಒಂದು ಪತ್ರ ನೀಡಿದ್ದರು. ಆಗಲೇ ಅವರಿಗೆ ಸ್ಪಷ್ಟವಾಗಿ ಕರ್ನಾಟಕದಲ್ಲಿರುವ ಎಲ್ಲಾ ಶಾಲೆಗಳಲ್ಲಿಯೂ ಕನ್ನಡ ಭಾಷೆ ಕಲಿಸಬೇಕೆಂಬುದು ಈ ನೆಲದ ಕಾನೂನು” ಎಂದು ತಿಳಿಸಿದ್ದೇನೆ. ಅವರ ಪತ್ರಕ್ಕೆ ಲಿಖಿತವಾಗಿಯೂ ಸೂಕ್ತ ಉತ್ತರ ನೀಡಲಾಗುವುದು ಎಂದು ಫೇಸ್‍ಬುಕ್‍ನಲ್ಲಿ ಸ್ಪಷ್ಟನೆ ನೀಡಿದ್ದಾರೆ.