ಬೆಂಗಳೂರು: ಕೋಗಿಲು ಅಕ್ರಮ ಗುಡಿಸಲು, ಮನೆ ತೆರವು ಪ್ರಕರಣದಲ್ಲಿ ಹೊರದೇಶದವರಿಗೆ ಮನೆ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಇದರ ವಿರುದ್ಧ ಮಾನ್ಯ ರಾಜ್ಯಪಾಲರಿಗೆ ಮನವಿ ನೀಡುತ್ತೇವೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ (SR Vishwanath) ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು ವೇಳೆ ಮನೆ ನೀಡಿದರೆ ನ್ಯಾಯಾಲಯಕ್ಕೆ ಹೋಗಿ ಪ್ರಶ್ನೆ ಮಾಡುವುದಲ್ಲದೇ, ಮಾನ್ಯ ರಾಜ್ಯಪಾಲರಿಗೆ ಇದರ ಬಗ್ಗೆ ಮನವಿ ಕೊಡುತ್ತೇವೆ. ನಾಳೆಯೇ ಮನೆಗಳ ಹಂಚಿಕೆ ಮಾಡಲು ಪ್ಲಾನ್ ಮಾಡ್ಕೊಂಡಿದ್ದೀರಾ? ಅದು ಸಾಧ್ಯ ಇಲ್ಲ. ಸುಮ್ಮನೇ ಅವರು ಹೇಳಿರಬಹುದು ಅಷ್ಟೇ. ಇವತ್ತು ಅವರು ಇಲ್ಲಿ ವಾಸ ಆಗಿರೋದಕ್ಕೆ, ಐದು ವರ್ಷ ಇದ್ದಾರೆ ಅನ್ನೋದಕ್ಕೆ ದಾಖಲೆಗಳನ್ನು ಕೊಡಬೇಕು. 18 ದಾಖಲೆಗಳನ್ನು ಕೇಳಿದ್ದಾರೆ ಅವನ್ನು ಕೊಡಬೇಕು. ಯಾವ ವಿಶೇಷ ಪ್ರಕರಣ? ಹಾಗೆಲ್ಲ ಮಾಡಲು ಆಗೋದಿಲ್ಲ ಎಂದರು. ಇದನ್ನೂ ಓದಿ: ಕುರ್ಚಿ ಕದನಕ್ಕೆ ಟ್ವಿಸ್ಟ್ – ಹೊಸ ವರ್ಷದ ಮೊದಲ ದಿನವೇ ಸಿಎಂ ಪವರ್‌ಫುಲ್ ಸಂದೇಶ
ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ಕೇರಳದ ಮುಖ್ಯಮಂತ್ರಿ ಹೇಳಿದರು. ಪಾಕಿಸ್ತಾನದವರು ಹೇಳಿದರು. ಅಂದ ತಕ್ಷಣ ನೀವು ಕೊಡುತ್ತೀರಿ. ಪಾಕಿಸ್ತಾನ, ಬಾಂಗ್ಲಾದಿಂದ ಬಂದಿರುವ ಹಿಂದೂ ಕ್ರಿಶ್ಚಿಯನ್ ಸಿಖ್ಖರು ಸೇರಿ ಅನೇಕ ಅಲ್ಪಸಂಖ್ಯಾತರು ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಅವರಿಗೆ ಕೂಡ ಯಾವ ಸರ್ಕಾರಗಳು ಇಲ್ಲಿವರೆಗೂ ಮನೆ ಕೊಟ್ಟಿಲ್ಲ. ಅವರಿಗೆ ಪೌರತ್ವ ಕೊಡಬೇಕು ಅಂದರೆ ಇದೇ ಕಾಂಗ್ರೆಸ್ ನವರು, ಇದೇ ಕಮ್ಯುನಿಸ್ಟ್ ಪಕ್ಷದವರು ದೊಡ್ಡ ಹೋರಾಟ ಮಾಡುತ್ತಾರೆ. ಆದರೆ ಇವತ್ತು ಬೇರೆ ದೇಶದಿಂದ ಬಂದಿರುವವರಿಗೆ ತುರ್ತು ಏನಿದೆ ಎಂದು ಕೇಳಿದರು.
ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಇವತ್ತು ನಿಜವಾದ ಫಲಾನುಭವಿ 10.5 ಲಕ್ಷ ರೂ. ದುಡ್ಡು ಕಟ್ಟಬೇಕಾಗುತ್ತದೆ. ಬ್ಯಾಂಕ್ ಸಾಲ, ಇಲ್ಲವೇ ಸ್ವಂತ ಪ್ರಯತ್ನದಿಂದ ಇದನ್ನು ಕಟ್ಟಬೇಕು. ಇವನಿಗೆ ಬಿಬಿಎಂಪಿಯಿಂದ 5 ಲಕ್ಷ ರೂ., ಅಲ್ಪಸಂಖ್ಯಾತ ಇಲಾಖೆಯಿಂದ 2.5 ಲಕ್ಷ ರೂ., ಇವೆಲ್ಲವನ್ನು ಕೊಟ್ಟು ಕೇವಲ 2.5 ಲಕ್ಷ ರೂ.ಯಲ್ಲಿ ಮನೆ ಕೊಡ್ತೀವಿ ಅಂದರೆ, ಈಗ ಒಂದು ಲಕ್ಷ ಮನೆಗಳನ್ನ ಕಟ್ಟುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತಲು 45 ಸಾವಿರ ಮನೆಗಳು ಆಗುತ್ತಿವೆ. ಅವರು ಯಾರು ಕೂಡ ದುಡ್ಡು ಕಟ್ಟಲ್ಲ. ಅವರೆಲ್ಲ 2.5 ಲಕ್ಷ ರೂ.ಗೆ ಸ್ಟಿಕ್ ಆನ್ ಆಗುತ್ತಾರೆ. ಇದು ಸರ್ಕಾರಕ್ಕೆ ದೊಡ್ಡ ಮುಜುಗರ ಆಗಲಿದೆ. ದೊಡ್ಡ ಹೊಡೆತ ಕೊಡಲಿದೆ. ಇದಕ್ಕೂ ಮೀರಿ ಏನಾದ್ರೂ ಮನೆಗಳನ್ನು ಕೊಟ್ಟರೆ ನ್ಯಾಯಾಲಯಕ್ಕೆ ಹೋಗುತ್ತೇವೆ. ಈಗಾಗಲೇ ದಾಖಲೆಗಳನ್ನು ಕೂಡ ಸಂಗ್ರಹ ಮಾಡುತ್ತಿದ್ದಾರೆ ಎಂದರು.ಇದನ್ನೂ ಓದಿ: ಎಲ್ಲರಂತೆ ನನಗೂ ಆಕಾಂಕ್ಷೆ ಇದೆ – ಹೊಸ ವರ್ಷದ ಮೊದಲ ದಿನವೇ ಸಿಎಂ ಆಗುವ ಆಸೆ ಬಿಚ್ಚಿಟ್ಟ ಪರಮೇಶ್ವರ್
ಇದು ಅಲ್ಪಸಂಖ್ಯಾತರ ವೋಟಿನ ತುಷ್ಟೀಕರಣದ ಮುಂದುವರೆದ ಭಾಗ. ಈಗೇನು ಕೇರಳ ಎಲೆಕ್ಷನ್ ನಡೀತಿದೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಸರ್ಕಾರಗಳಿಗೆ ಅಲ್ಪಸಂಖ್ಯಾತರ ವೋಟ್ ಪಡೆಯುವುದಕ್ಕೆ ಇಲ್ಲಿ ನಮ್ಮ ಕರ್ನಾಟಕವನ್ನು ಬಲಿ ಕೊಡುವ ಕೆಲಸ ಮಾಡಿದ್ದಾರೆ. ಇದರ ವಿರುದ್ಧ ನಾವು ನ್ಯಾಯಾಲಯದಲ್ಲೂ ಹೋರಾಟ ಮಾಡುತ್ತೇವೆ. ರಾಜ್ಯಪಾಲರ ಬಳಿ ಹೋಗುತ್ತೇವೆ. ಸ್ಥಳೀಯವಾಗಿ ಕೂಡ ಏನು ಹೋರಾಟ ಮಾಡಬೇಕೋ ಮಾಡುತ್ತೇವೆ ಎಂದು ತಿಳಿಸಿದರು.
ಗ್ರಾಮದ ಪಕ್ಕದಲ್ಲಿ ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಕಳೆದ ಎರಡು ವರ್ಷಗಳಿಂದ ಹಂತಹಂತವಾಗಿ ಅಕ್ರಮವಾಗಿ ಮನೆ-ಗುಡಿಸಲು ಕಟ್ಟಿಕೊಂಡಿದ್ದಾರೆ. ಬೇರೆ ದೇಶದಿಂದ ಬಂದ ವಲಸಿಗರು ಮತ್ತು ಸ್ಥಳೀಯರಿಂದ ಅಲ್ಲಿ ಕಾಂಗ್ರೆಸ್ಸಿನ ಸ್ಥಳೀಯ ಅಲ್ಪಸಂಖ್ಯಾತರ ಮುಖಂಡರು ನಾವು ಮನೆ ಕೊಡಿಸ್ತೀವಿ ಅಂತ ಹೇಳಿ ಅವರ ಹತ್ತಿರ ಎಲ್ಲ ಕೂಡ ದುಡ್ಡನ್ನು ವಸೂಲಿ ಮಾಡಿದ್ದಾರೆ. ಅವರು ಅಲ್ಲಿ ಮನೆಗಳನ್ನು ಕಟ್ಟಿಸಿ ಅದನ್ನ ಬಾಡಿಗೆಗೆ ಕೊಟ್ಟು ಪ್ರತಿ ತಿಂಗಳು ಬಾಡಿಗೆ ವಸೂಲಿ ಮಾಡಿದ್ದಾಗಿ ಆರೋಪಿಸಿದರು. ಅವರು ಯಾರು ಕೂಡನು ಅಲ್ಲಿ ಸ್ವಂತ ಸೂರಿಗೋಸ್ಕರ ಕೊಟ್ಟಿದ್ದಲ್ಲ; ಬೇರೆಯವರು ಮನೆ ಕಟ್ಟಿ ಬಾಡಿಗೆ ಕೊಟ್ಟು ದುಡ್ಡು ವಸೂಲಿ ಮಾಡ್ತಾ ಇದ್ರು ಎಂದರು.
ಸರ್ಕಾರದ ಅಧಿಕಾರಿಗಳು ನೋಟಿಸ್ ಕೊಟ್ಟು ನಿಯಮಾನುಸಾರ ಕಾನೂನುಬದ್ಧವಾಗಿ ಮನೆಗಳನ್ನು ತೆರವು ಮಾಡಿಸಿದ್ದಾರೆ. ತೆರವು ಮಾಡಿಸಿ ಎರಡು ದಿನ ಆಗಿರಲಿಲ್ಲ. ಆದರೆ ಕೇರಳದ ಮುಖ್ಯಮಂತ್ರಿಗಳು ಒಂದು ಹೇಳಿಕೆಯನ್ನ ಕೊಟ್ರು ಎಂದ ತಕ್ಷಣನೇ ಅಲ್ಲಿನ ಕಾಂಗ್ರೆಸ್ಸಿನ ವರಿಷ್ಠರು, ರಾಷ್ಟ್ರೀಯ ನಾಯಕರು ಮತ್ತು ಬೆಂಗಳೂರಿನ ಕರ್ನಾಟಕದ ಉಸ್ತುವಾರಿಗಳು ವೇಣುಗೋಪಾಲ್ ಅವರು ಹೇಳಿಕೆ ಕೊಟ್ಟರು. ತಕ್ಷಣ ಇಲ್ಲಿನ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಎಲ್ಲಾ ಅಲ್ಪಸಂಖ್ಯಾತ ಸಚಿವರು ಪ್ರತಿಯೊಬ್ಬರು ಕೂಡ ಸ್ಥಳ ಪರಿಶೀಲನೆಯನ್ನ ಮಾಡಿ, ಅನ್ಯಾಯ ಆಗಿದೆ. ಅವರಿಗೆಲ್ಲ ಮನೆಗಳನ್ನು ಕೊಡುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳು ತುರ್ತು ಸಭೆ ಮಾಡಿದ್ದಾರೆ. ಪ್ರವಾಹ ಬಂದಾಗ ಆಗಲಿಲ್ಲ, ಭೂಕಂಪ ಬಂದಾಗ ಆಗಲಿಲ್ಲ. ಐಪಿಎಲ್ ತುಳಿತಕ್ಕೆ ಒಳಗಾದಾಗ ಕೂಡ ಇಷ್ಟು ತುರ್ತು ಸಭೆಯನ್ನು ಮಾಡಿ, ಪರಿಹಾರವನ್ನು ಘೋಷಣೆ ಮಾಡಿರಲಿಲ್ಲ. ಅವರಿಗೆಲ್ಲ ಈಗಾಗಲೇ ದಾಖಲೆಗಳನ್ನ ಸಂಗ್ರಹ ಮಾಡಿ, ಬೈಯಪ್ಪನಹಳ್ಳಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಬ್ಸಿಡಿಯಲ್ಲಿ ನಿರ್ಮಾಣ ಮಾಡಿದ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಅಥವಾ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ತರಾತುರಿಯಲ್ಲಿ ರಾಜ್ಯ ಸರ್ಕಾರ ಮನೆಗಳನ್ನು ಕೊಡಬೇಕು ಎಂದು ಹೊರಟಿದೆ ಎಂದು ಆಕ್ಷೇಪಿಸಿದರು.ಇದನ್ನೂ ಓದಿ: ಬಂಡೆ ಸ್ಫೋಟದಿಂದ 4 ಚಿರತೆ ಸಾವು, ಸ್ಥಳೀಯರಿಗೂ ತೊಂದರೆ, ಕ್ರಮ ವಹಿಸದಿದ್ದರೆ ಹೋರಾಟ – ಎಸ್.ಟಿ ಸೋಮಶೇಖರ್ ಎಚ್ಚರಿಕೆ

