ಕೋಲಾರ: ಚುನಾವಣೆ ನಾಮಪತ್ರ ಸಲ್ಲಿಸುವ ಮುನ್ನ ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರನ್ನು ವರ್ಗಾವಣೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಕೆ.ಎಚ್.ಮುನಿಯಪ್ಪ ಉತ್ತರ ನೀಡಬೇಕು ಎಂದು ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ ಆಗ್ರಹಿಸಿದ್ದಾರೆ.
ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಮಾತನಾಡಿದ ಅವರು, ಡಿಕೆ ರವಿ ವರ್ಗಾವಣೆಯ ಕಾರಣವನ್ನು ಮುನಿಯಪ್ಪ ಬಹಿರಂಗ ಪಡಿಸಬೇಕು. ಡಿ.ಕೆ.ರವಿ ಅವರು ಜಿಲ್ಲೆಯಿಂದ ವರ್ಗಾವಣೆ ಆಗದಿದ್ದರೆ ಮೃತಪಡುತ್ತಿರಲಿಲ್ಲ ಎಂದು ಹೇಳಿದರು.
Advertisement
ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಅಭಿವೃದ್ಧಿ ಮಾಡದಂತೆ, ನಂಬಿದವರನ್ನು ತುಳಿಯುವಂತೆ ಜ್ಯೋತಿಷಿಯೊಬ್ಬರು ಹೇಳಿದ್ದರು. ಹೀಗಾಗಿ ಅವರು ಕೋಲಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ಕೃಷ್ಣಯ್ಯಶೆಟ್ಟಿ ವ್ಯಂಗ್ಯವಾಡಿದರು.
Advertisement
Advertisement
ಅಭಿವೃದ್ಧಿ ಮಾಡಿದ್ದೇನೆಂದು ಹೇಳಿಕೊಳ್ಳುವ ಸಂಸದರು ಸುಳ್ಳು ಹೇಳುತ್ತಿದ್ದಾರೆ. ಒಂದು ವೇಳೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎನ್ನುವುದಾದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮುಂದೆ ತಮ್ಮ ಕಾರ್ಯಗಳ ಪಟ್ಟಿ ಬಿಡುಗಡೆ ಮಾಡಲಿ ಎಂದು ಸವಾಲು ಎಸೆದರು.
Advertisement
ಕೋಲಾರ ಕ್ಷೇತ್ರದ ಪ್ರತಿ ಮನೆಯಲ್ಲಿಯೂ ಕೆ.ಎಚ್.ಮುನಿಯಪ್ಪ ಆಯ್ಕೆ ಆಗಬಾರದು ಎನ್ನುವ ಮಾತು ಕೇಳಿಬರುತ್ತಿದೆ. ಸ್ವತಃ ಸಂಸದರ ಮನೆಯಲ್ಲಿಯೇ ಇಂತಹ ಅಭಿಪ್ರಾಯ ಕೇಳಿ ಬಂದಿದೆ. ಇದು ಸಂಸದರು ನೀಡಿದ ಅಪಾರ ಅಭಿವೃದ್ಧಿಯ ಫಲವಾಗಿದೆ ಎಂದು ಕಿಚಾಯಿಸಿದರು.
ಕೆ.ಎಚ್.ಮುನಿಯಪ್ಪ ಅವರ ಅಭಿವೃದ್ಧಿ ಶೂನ್ಯ. ಬೇರೆಯವರು ಮಾಡಿದ್ದ ಕೆಲಸವನ್ನು ತಮ್ಮದೆಂದು ಹೇಳಿಕೊಳ್ಳುವ ಸಂಸದರು ಈ ಬಾರಿ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಹೀಗಾಗಿ ಇದೇ ವರ್ಷ ರಾಜಕೀಯ ನಿವೃತ್ತಿ ತೆಗೆದುಕೊಂಡರೆ ಗೌರವ ಇರುತ್ತಿತ್ತು. ಕೆ.ಎಚ್.ಮುನಿಯಪ್ಪ ಅವರು ಜಯಗಳಿಸುವುದು ನಂಬಿಕೆ, ಅಭಿವೃದ್ಧಿ ಕೆಲಸ ಮೇಲಲ್ಲ. ಕೆಲವು ಹೊಂದಾಣಿಕೆಯ ಮೇಲೆ ಎರಡು ಬಾರಿ ಆಯ್ಕೆಯಾಗಿದ್ದಾರೆ. ಆದರೆ ಮೂರನೇ ಅವಧಿಗೆ ಆಯ್ಕೆಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೋಲಾರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಯಾರೇ ನಿಂತರೂ ಅವರಿಗೆ ನಾವು ಬೆಂಬಲ ನೀಡುತ್ತೇವೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.