– ನನ್ನ ಗೆಲುವಿಗೆ ಕಾಂಗ್ರೆಸ್ ನಾಯಕರೂ ಕಾರಣ
ಬೆಂಗಳೂರು: ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಶಾಸಕರನ್ನು ಕರೆ ತರುತ್ತೇನೆ ಅಂತ ನಾನು ಹೇಳಿಲ್ಲ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಯೂಟರ್ನ್ ಹೊಡೆದಿದ್ದಾರೆ.
ಎಸ್.ಮುನಿಸ್ವಾಮಿ ಅವರು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಬಿ.ಎಸ್.ಯಡಿಯೂರಪ್ಪ ಅವರು, ಬಹಿರಂಗವಾಗಿ ನಾಯಕರು ಯಾವುದೇ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುನಿಸ್ವಾಮಿ ತಮ್ಮ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರ ಭೇಟಿಯ ಬಳಿಕ ಮಾತನಾಡಿದ ಮುನಿಯಪ್ಪ ಅವರು, ಯಾರೋ ಕಳ್ಳರು ಸುಳ್ಳರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ಮಾಜಿ ಶಾಸಕರಾದ ಸುಧಾಕರ್, ಕೊತ್ತೂರು ಮಂಜುನಾಥ್ ಮತ್ತು ಮಂಜುನಾಥಗೌಡ ಒಳ್ಳೆಯವರು. ಅಂತಹ ನಾಯಕರು ಬಿಜೆಪಿ ಸೇರುತ್ತಾರೆ. ಕೋಲಾರದಲ್ಲಿ ನಾನು ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕರೂ ಕಾರಣ ಎಂದಷ್ಟೇ ಹೇಳಿದ್ದೇನೆ. ಆದರೆ ಅವರನ್ನೆಲ್ಲ ಬಿಜೆಪಿಗೆ ಕರೆ ತರುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪನವರಿಗೆ ಯಾವ ಭರವಸೆಯನ್ನೂ ಕೊಟ್ಟಿಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಕೋಲಾರ ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ನಡೆಯಲಿವೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲು ಜಿಲ್ಲೆಯ ಸುಮಾರು ಐದರಿಂದ ಆರು ಜನ ಶಾಸಕರನ್ನು ಕಳುಹಿಸಿಕೊಡುತ್ತೇವೆ ಎಂದು ಹೇಳಿಕೆ ನೀಡಿದ್ದರು.