– ಉಪಸಭಾಪತಿಯಾಗಿ ಧರ್ಮೇಗೌಡ ಆಯ್ಕೆ
– ಹಳೆಯದನ್ನು ನೆನೆದು ಭಾವುಕರಾದ ಸಿಎಂ ಇಬ್ರಾಹಿಂ
ಬೆಳಗಾವಿ: ವಿಧಾನ ಪರಿಷತ್ ಉಪಸಭಾಪತಿಯಾಗಿ ಎಸ್.ಎಲ್.ಧರ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು, ಧರ್ಮೇಗೌಡರ ಹೆಸರಲ್ಲಿ ಧರ್ಮ ಇದೆ. ಧರ್ಮರಾಯರ ರೀತಿ ಕೆಲಸ ನಿರ್ವಹಣೆ ಮಾಡಬೇಕು. ಸಭಾಪತಿ, ಉಪಸಭಾಪತಿ, ಸ್ಪೀಕರ್ ಹುದ್ದೆಯನ್ನು ಧರ್ಮರಾಯನ ರೀತಿ ನಿರ್ವಹಿಸಿ ಧರ್ಮ ಪಾಲನೆ ಮಾಡುವ ಕೆಲಸವಾಗಬೇಕು. ಧರ್ಮರಾಯನ ಮಾತನ್ನು ಸಭೆಯ ಎಲ್ಲರೂ ಕೇಳಬೇಕು ಎಂದು ಹೇಳಿದರು.
Advertisement
Advertisement
ಜಯಮಾಲಾ ಅವರು ಮಾತು ಮುಗಿಸುತ್ತಿದ್ದಂತೆ ಧ್ವನಿಗೂಡಿಸಿದ ಸದಸ್ಯ ಶರಣಪ್ಪ ಮಟ್ಟೂರು ಅವರು, ಪರಿಷತ್‍ನ ವಿಪಕ್ಷ ನಾಯಕ, ಸಭಾನಾಯಕಿ, ಉಪಸಭಾಪತಿ, ಸಭಾಪತಿ ಸ್ಥಾನ ಮಲೆನಾಡಿಗೆ ಹೋಗಿದೆ. ನಾವು ಈಗ ಏನೇ ಕೇಳಬೇಕಾದರೂ ಇವರನ್ನು ಕೇಳಬೇಕು ಎಂದು ನಗೆಬೀರಿದರು. ತಕ್ಷಣವೇ ಇದಕ್ಕೆ ಪ್ರತಿಕ್ರಿಯೆ ನೀಡಿದ ಜಯಮಾಲಾ, ನಾನು ಹುಟ್ಟಿದ್ದು ಮಂಗಳೂರು, ಬೆಳೆದಿದ್ದು ಚಿಕ್ಕಮಗಳೂರು. ಕೆಲಸ ಮಾಡಿದ್ದು ಬೆಂಗಳೂರು. ನಾನು ಬಾಲ್ಯದ ದಿನಗಳನ್ನು ಕಳೆದಿದ್ದು ಚಿಕ್ಕಮಗಳೂರಿನಲ್ಲಿ. ನಾವು ಕಲಾವಿದರು. ಎಲ್ಲರೂ ನಮ್ಮವರು ಅಂತ ನೋಡುತ್ತೇವೆ. ಆದರೆ ಕರ್ನಾಟಕ ಒಂದೇ ಎಂಬ ಆಸೆ ನಮ್ಮದು ಎಂದು ಹೇಳಿದರು.
Advertisement
ಈ ಚರ್ಚೆಯ ನಡುವೆ ಪ್ರವೇಶ ಮಾಡಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಭೋಜೇಗೌಡ ಇಲ್ಲೇ ಇದ್ದಾರೆ, ಅರ್ಜುನನ ರೀತಿ. ಅವರು ಧರ್ಮರಾಯನ ಮಾತು ಕೇಳೊಲ್ಲ. ಭೋಜೇಗೌಡ ಅವರನ್ನು ಕಟ್ಟಿ ಹಾಕಬೇಕು ಅಂತ ಹಾಸ್ಯ ಮಾಡಿದರು. ಇದಕ್ಕೆ ಮತ್ತಷ್ಟು ನಗೆ ಸೇರಿಸಿದ ಜಯಮಾಲ ಅವರು, ಮಹಾಭಾರತದಲ್ಲಿ ಅರ್ಜುನ ಧರ್ಮರಾಯನ ಮಾತು ಕೇಳುತ್ತಿರಲಿಲ್ಲ. ಆದರೆ ಇಲ್ಲಿ ಧರ್ಮರಾಯನ ಮಾತು ಕೇಳಬೇಕು ಅಂತ ಭೋಜೇಗೌಡರಿಗೆ ಹೇಳಿದರು.
Advertisement
ಲೆಹರ್ ಸಿಂಗ್ ಮಾತನಾಡಿ, ಧರ್ಮರಾಯನ ಮಾತು ಎಲ್ಲರೂ ಕೇಳುತ್ತಾರೆ. ಆದರೆ ದುರ್ಯೋಧನ ಕೇಳುವುದಿಲ್ಲ. ಈ ಸದನದಲ್ಲಿ ದುರ್ಯೋಧನ ಯಾರು ಮೊದಲು ಹುಡುಕಿ ಅಂತ ಹಾಸ್ಯ ಮಾಡಿದರು. ತಕ್ಷಣವೇ ಭಾವನಾತ್ಮಕರಾದ ಸಿಎಂ ಇಬ್ರಾಹಿಂ, 22 ವರ್ಷದ ಬಳಿಕ ನನಗೆ ಸಮಾಧಾನ ಆಗಿದೆ. ನಾನು ಜನತಾದಳದಲ್ಲಿ ಇದ್ದಾಗ ಧರ್ಮೇಗೌಡ ಅವರ ತಂದೆಯನ್ನು ಮಂತ್ರಿ ಮಾಡಲು ನಾನು ತುಂಬ ಪ್ರಯತ್ನ ಪಟ್ಟಿದ್ದೆ. ಆದರೆ ಅದು ಆಗಿರಲಿಲ್ಲ. ಇಂದು ನೀವು ಉಪ ಸಭಾಪತಿ ಆಗಿರುವುದು ನನಗೆ ನೆಮ್ಮದಿ. ಈ ವಿಚಾರವಾಗಿ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನರ ಪರವಾದ ಕೆಲಸ ಮಾಡಲಿ ಎಂದು ಹಳೇ ನೆನಪು ನೆನಪಿಸಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv