ಮೈಸೂರು: ಸೊಂಟ ಮುರಿತಕ್ಕೊಳಗಾಗಿ ಮೈಸೂರಿನ ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ದಾಖಲಾಗಿದ್ದ ಗಾನ ಕೋಗಿಲೆ ಎಸ್. ಜಾನಕಿ ಅವರು ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗಾನ ಕೋಗಿಲೆ, ಕೆಲವು ದಿನಗಳ ಹಿಂದೆ ಮೈಸೂರಿನ ಸ್ನೇಹಿತರ ಮನೆಗೆ ಬಂದಿದ್ದೆ. ಮನೆಯಲ್ಲಿ ಹೊಸ್ತಿಲು ದಾಟುವಾಗ ಎಡವಿ ಬಿದ್ದಿದರಿಂದ ಸೊಂಟದ ಭಾಗದಲ್ಲಿ ನೋವಾಗಿತ್ತು. ಕೂಡಲೇ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೊಂಟದ ಭಾಗದಲ್ಲಿ ವೈದ್ಯರು ಏನೋ ಬದಲಾವಣೆ ಮಾಡಿದ್ದಾರೆ. ಜಾಯಿಂಟ್ ರೀಪ್ಲೇಸ್ಮೆಂಟ್ ಮಾಡಲಾಗಿದೆ ಎಂದು ತಿಳಿಸಿದರು.
ಕನ್ನಡ ನಾಡಿನ ಜನರು ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಕನ್ನಡ ನಾಡಿನ ಮಕ್ಕಳ ಆಶೀರ್ವಾದದಿಂದ ಗುಣಮುಖಳಾಗುತ್ತೇನೆ. ವೈದ್ಯರು ವಿಶ್ರಾಂತಿ ಪಡೆಯಬೇಕೆಂದು ಸೂಚಿಸಿದ್ದಾರೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದು ಗುಣಮುಖಳಾಗುತ್ತೇನೆ ಎಂದು ಆಭಿಮಾನಿಗಳಿಗೆ ಹೇಳಿದರು.
ಈ ಬಳಿಕ ಮಾತನಾಡಿದ ಆಸ್ಪತ್ರೆಯ ವೈದ್ಯ ನಿತಿನ್, ಕಾಲು ಜಾರಿ ಬಿದ್ದಿದರಿಂದ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದರು. ಜಾಯಿಂಟ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೂರು ವಾರಗಳ ಕಾಲ ಅವರು ವಿಶ್ರಾಂತಿ ಪಡೆಯಬೇಕು. ಈ ವಯಸ್ಸಿನಲ್ಲಿ ಸಹಜವಾಗಿ ಇಂತಹ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಅಭಿಮಾನಿಗಳು ಗಾಬರಿ ಪಡುವಂತದ್ದು ಏನು ಇಲ್ಲ ಎಂದು ಸ್ಪಷ್ಟಪಡಿಸಿದರು.
80 ವರ್ಷದ ಎಸ್. ಜಾನಕಿ ಅವರು ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಜಾನಕಿ ಅವರು ತನ್ನ ವೃತ್ತಿ ಜೀವನದ ಕೊನೆಯ ಹಾಡನ್ನು ಮೈಸೂರಿನಲ್ಲಿ ಹಾಡಿದ್ದರು.