ಗುರ್ಗಾಂವ್: ಇಲ್ಲಿನ ಆರ್ಯನ್ ಇಂಟರ್‍ನ್ಯಾಷನಲ್ ಸ್ಕೂಲ್‍ನಲ್ಲಿ ನಡೆದ 2ನೇ ಕ್ಲಾಸ್ ಬಾಲಕನ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ ಪ್ರಮುಖ ಆರೋಪಿಯಾದ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಈ ಕೃತ್ಯವೆಸಗಿರುವ ಬಗ್ಗೆ ಬಲವಾದ ಪುರಾವೆಗಳಿವೆ ಎಂದು ಗುರ್ಗಾಂವ್ ಪೊಲೀಸರು ಹೇಳಿದ್ದಾರೆ.
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು ಆತ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಕೊಲೆ ಮಾಡಿದ್ದಾಗಿ ಆರೋಪಿ ಅಶೋಕ್ ಒಪ್ಪಿಕೊಂಡಿದ್ದ. ಆದ್ರೆ ಈಗ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಬಾಲಕನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿರುವ ಗುರುತುಗಳಿಲ್ಲ ಎಂದು ವೈದ್ಯರು ಹೇಳಿದ್ದಾರೆ.
Advertisement
Advertisement
ಸೆಪ್ಟೆಂಬರ್ 8ರಂದು ಶಾಲೆಯ ಟಾಯ್ಲೆಟ್‍ನಲ್ಲಿ 7 ವರ್ಷದ ಬಾಲಕ ಪ್ರದ್ಯುಮನ್ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಇನ್ನೂ ಜೀವಂತವಾಗಿದ್ದ ಎಂದು ಶಾಲೆಯವರು ಹೇಳಿಕೆ ನೀಡಿದ್ದರು. ಆದ್ರೆ ಆತ ದಾಳಿ ನಡೆದ 2 ನಿಮಿಷದಲ್ಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಪ್ರದ್ಯುಮನ್‍ನ ಕತ್ತಿಗೆ ಎರಡು ಬಾರಿ ಇರಿಯಲಾಗಿದೆ. ಇದರಿಂದ ಬಾಲಕನ ಶ್ವಾಸನಾಳ ಕಟ್ ಆಗಿದ್ದು, ಆತ ಸಹಾಯಕ್ಕಾಗಿ ಕಿರುಚಲು ಸಾಧ್ಯವಾಗಿಲ್ಲ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ. ಬಾಲಕ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆಂದು ವೈದ್ಯರು ಹೇಳಿದ್ದಾರೆ.
Advertisement
Advertisement
ಟಾಯ್ಲೆಟ್‍ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆತನನ್ನು ಕಾರಿನವರೆಗೆ ಕೊಂಡೊಯ್ಯಲು ಆರೋಪಿ ಅಶೋಕ್‍ಗೆ ಇಬ್ಬರು ಶಿಕ್ಷಕರು ಹೇಳಿದ್ರು ಎಂದು ಸಾಕ್ಷಿಗಳು ಹೇಳಿದ್ದಾರೆ. ಪೊಲೀಸರು ವಿಚಾರಣೆ ಶುರು ಮಾಡಿದ ಕೆಲವೇ ನಿಮಿಷಗಳಲ್ಲಿ ಅಶೋಕ್ ಕುಮಾರ್ ತಾನೇ ಕೊಲೆ ಮಾಡಿದ್ದೇನೆಂದು ಒಪ್ಪಿಕೊಂಡಿದ್ದ. ಆದ್ರೆ ಅಶೋಕ್‍ನನ್ನು ಈ ಪ್ರಕರಣದಲ್ಲಿ ಬಲಿಪಶು ಮಾಡಲಾಗಿದೆ ಎಂದು ಬಸ್ ಡ್ರೈವರ್ ಸೌರಭ್ ರಾಘವ್ ಹೇಳಿದ್ದಾರೆ.
ಕೊಲೆಯಲ್ಲಿ ಮತ್ತೋರ್ವ ವ್ಯಕ್ತಿ ಭಾಗಿಯಾಗಿರಬಹುದು ಎಂದು ಪೊಲೀಸರು ಈ ಮೊದಲು ಶಂಕಿಸಿದ್ದರು. ಆದ್ರೆ ಮಂಗಳವಾರದಂದು ಹಿರಿಯ ಪೊಲೀಸ್ ಅಧಿಕಾರಿ ಬೈರನ್ ಸಿಂಗ್ ಹೇಳಿಕೆ ನೀಡಿದ್ದು, ಪ್ರದ್ಯುಮನ್‍ನನ್ನು ಅಶೋಕ್ ಮಾತ್ರ ಕೊಲೆ ಮಾಡಿದ್ದಾನೆ. ಬೇರೆ ಯಾವುದೇ ವ್ಯಕ್ತಿ ಇದರಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಹರ್ಯಾಣದಿಂದ ಹೊರಗೆ ನಡೆಸಬೇಕು ಎಂದು ಆರ್ಯನ್ ಶಾಲೆಯ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಸೋಮವಾರದಂದು ಸುಪ್ರೀಂ ಕೋರ್ಟ್ ಇದರ ವಿಚಾರಣೆ ಕೈಗೆತ್ತಿಕೊಳ್ಳಲಿದೆ.