ಗುರ್ಗಾಂವ್: ಇಲ್ಲಿನ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ 2ನೇ ಕ್ಲಾಸ್ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಅರೆಸ್ಟ್ ಆಗಿರುವ 11ನೇ ತರಗತಿ ವಿದ್ಯಾರ್ಥಿ ಮೇಲೆ ಸಿಬಿಐಗೆ ಸೆಪ್ಟೆಂಬರ್‍ನಿಂದಲೇ ಅನುಮಾನವಿತ್ತು ಎಂದು ವರದಿಯಾಗಿದೆ.
ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡಾಗಿನಿಂದ ಈ ವಿದ್ಯಾರ್ಥಿಯೇ ಪ್ರಮುಖ ಶಂಕಿತ ಆರೋಪಿಯಾಗಿದ್ದ. ಪ್ರಕರಣ ದಾಖಲಿಸಿದ 6 ದಿನಗಳ ನಂತರ ಸಿಬಿಐ ವಿದ್ಯಾರ್ಥಿಯ ಮನೆಯಲ್ಲಿ ತಪಾಸಣೆ ಮಾಡಿ ಕೆಲವು ವಸ್ತುಗಳನ್ನ ವಶಪಡಿಸಿಕೊಂಡಿತ್ತು.
Advertisement
Advertisement
ಗುರ್ಗಾಂವ್ ಪೊಲೀಸರು ಸೆಪ್ಟೆಂಬರ್ 22ರಂದು ಸಿಬಿಐಗೆ ಈ ಪ್ರಕರಣವನ್ನು ಹಸ್ತಾಂತರಿಸುವುದಕ್ಕೂ ಮೊದಲೇ ವಿದ್ಯಾರ್ಥಿಯ ಮೇಲೆ ಸಂಶಯ ಪಡುವುದಕ್ಕೆ ಕಾರಣವಿದೆ ಎಂದು ಮೂಲಗಳು ತಿಳಿಸಿವೆ. ವಿಜ್ಞಾನಿಕ ವಿಮರ್ಶೆಗಾಗಿ ಕಳಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಪ್ರದ್ಯುಮನ್ ಕೊಲೆಯಾದ ನಂತರ ಟಾಯ್ಲೆಟ್‍ನಿಂದ ಹೊರಬಂದ ಕೊನೆಯ ವ್ಯಕ್ತಿ ಈ ವಿದ್ಯಾರ್ಥಿಯೇ ಆಗಿದ್ದಾನೆ. ಈತ ಶಿಕ್ಷಕರೊಬ್ಬರ ಬಳಿ ಬಂದು ಪ್ರದ್ಯುಮನ್ ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದ.
Advertisement
Advertisement
ಅಲ್ಲದೆ ಈತನ ಜೊತೆ ಸೇರಿ ಮತ್ತೊಬ್ಬ ವಿದ್ಯಾರ್ಥಿ ಶಾಲೆಯ ತೋಟದ ಮಾಲಿಗೆ ಪ್ರದ್ಯುಮನ್ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಗ್ಗೆ ಮೊದಲು ಮಾಹಿತಿ ನೀಡಿದ್ದರು. ಹೀಗಾಗಿ ಇವರಿಬ್ಬರು ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದರು. ಆದ್ರೆ ಇದೀಗ ವಿಟ್‍ನೆಸ್ ಆಗಿದ್ದ ವಿದ್ಯಾರ್ಥಿಯೇ ಆರೋಪಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಈಗ ಮತ್ತೊಬ್ಬ ವಿದ್ಯಾರ್ಥಿಯನ್ನೂ ವಿಚಾರಣೆ ಮಾಡಲಾಗ್ತಿದೆ. ಎರಡನೇ ವಿದ್ಯಾರ್ಥಿಗೆ ಈ ವಿಷಯ ತಿಳಿದಿದ್ದು ಹೇಗೆ ಎಂಬ ಬಗ್ಗೆ ಸಿಬಿಐ ತನಿಖೆ ಮಾಡುತ್ತಿದೆ. ಮತ್ತೊಂದು ಕಡೆ ಸದ್ಯ ಅರೆಸ್ಟ್ ಮಾಡಲಾಗಿರುವ ವಿದ್ಯಾರ್ಥಿಯ ವಿರುದ್ಧ ದೃಢವಾದ ಸಾಕ್ಷಿಗಳಿಲ್ಲ ಎಂದು ಮೂಲಗಳು ತಿಳಿಸಿವೆ.
ವಿದ್ಯಾರ್ಥಿ ಚಾಕು ತೆಗೆದುಕೊಂಡು ಶಾಲೆಗೆ ಬರುತ್ತಿದ್ದ ಎಂದು ಇತರೆ ವಿದ್ಯಾರ್ಥಿಗಳು ಹೇಳಿಕೆ ನೀಡಿದ ಬಳಿಕ, ಆರೋಪಿ ವಿದ್ಯಾರ್ಥಿಯನ್ನು ಚಾಕು ಅಂಗಡಿಗಳಿಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಆತ ಚಾಕು ಖರೀದಿಸಿದ ಅಂಗಡಿ ಮಾಲೀಕ ವಿದ್ಯಾರ್ಥಿಯನ್ನು ಗುರುತು ಹಿಡಿಯುವಲ್ಲಿ ವಿಫಲರಾಗಿದ್ದಾರೆ. ನಾನು ಯಾರಿಗೆ ಈ ಚಾಕುವನ್ನು ಮಾರಿದ್ದೆ ಎಂಬುದು ನೆನಪಿಲ್ಲ ಎಂದು ಹೇಳಿದ್ದಾರೆ. ಪ್ರದ್ಯುಮನ್ ಕೊಲೆಯ ದಿನ ನಡೆದ ಘಟನೆಯನ್ನು ಮರುಸೃಷ್ಟಿ ಮಾಡಲು ಆರೋಪಿ ವಿದ್ಯಾರ್ಥಿಯನ್ನು ಶಾಲೆಯ ಬಳಿಯೂ ಕರೆದುಕೊಂಡು ಹೋಗಲಾಗುತ್ತದೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಹರಿಯಾಣ ಪೊಲೀಸರು ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಬಂಧಿಸಿದ್ದರು. ಆದ್ರೆ ಮಂಗಳವಾರದಂದು 11ನೇ ಕ್ಲಾಸ್ ಬಾಲಕನನ್ನು ಸಿಬಿಐ ವಶಕ್ಕೆ ಪಡೆದು, ಈತ ಪರೀಕ್ಷೆ ಮುಂದೂಡಲು ಬಾಲಕನನ್ನು ಕೊಲೆ ಮಾಡಿದ್ದಾನೆ ಎಂದು ಹೇಳಿದೆ.
ಸೆಪ್ಟೆಂಬರ್ 8ರಂದು ಶಾಲೆಯ ಟಾಯ್ಲೆಟ್‍ನಲ್ಲಿ ಬಾಲಕ ಪ್ರದ್ಯುಮನ್‍ನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು.