Connect with us

Latest

ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕನನ್ನು ಕೊಂದಿದ್ದು ಹೇಗೆ: ಶಾಕಿಂಗ್ ಸಂಗತಿ ಬಾಯ್ಬಿಟ್ಟ ಕಂಡಕ್ಟರ್

Published

on

ಗುರ್ಗಾವ್: ಇಲ್ಲಿನ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿ ಬಾಲಕನನ್ನು ಕತ್ತು ಸೀಳಿ ಕೊಲೆ ಮಾಡಿರೋ ಪ್ರಕರಣ ದೇಶದಾದ್ಯಂತ ಜನರನ್ನ ಬೆಚ್ಚಿ ಬೀಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಬಸ್ ಕಂಡಕ್ಟರ್‍ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಈತ ಒಂದೊಂದೇ ಶಾಕಿಂಗ್ ಸಂಗತಿಗಳನ್ನ ಬಾಯ್ಬಿಡುತ್ತಿದ್ದಾನೆ.

ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 8ರಂದು ಘಟನೆ ನಡೆದ ದಿನ ಆರೋಪಿ ಅಶೋಕ್ ಕುಮಾರ್ ಬಾಲಕ ಟಾಯ್ಲೆಟ್‍ಗೆ ಬರುವ ಮುಂಚೆಯೇ ಅಲ್ಲಿದ್ದ. ಟೇಕ್ವಾಂಡೋ ಕ್ಲಾಸ್(ಕರಾಟೆ ರೀತಿಯ ಕೊರಿಯನ್ ಮಾರ್ಷಲ್ ಆರ್ಟ್) ಗೆ ಹೋಗಲು ಬಟ್ಟೆ ಬದಲಾಯಿಸಲೆಂದು ಇನ್ನೂ ಮೂರು ವಿದ್ಯಾರ್ಥಿಗಳು ಟಾಯ್ಲೆಟ್‍ನೊಳಗೆ ಬಂದಿದ್ರು. ಓರ್ವ ತೋಟದ ಮಾಲಿ ಸಹ ಟಾಯ್ಲೆಟ್‍ನಲ್ಲಿದ್ದ. ಈ ನಾಲ್ವರೂ ಟಾಯ್ಲೆಟ್‍ನಿಂದ ಹೊರಹೋಗಲು ಆರೋಪಿ ಅಶೋಕ್ ಕಾಯ್ತಿದ್ದ. ಅವರೆಲ್ಲರೂ ಹೋದ ಬಳಿಕ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದ.

ಇದೀಗ ಆ ಮೂವರು ವಿದ್ಯಾರ್ಥಿಗಳು ಹಾಗೂ ತೋಟದ ಮಾಲಿಯನ್ನು ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಆದರೂ ಕೊಲೆಗೀಡಾದ ಬಾಲಕನ ಪೋಷಕರು ಕೊಲೆಯ ಹಿಂದೆ ಏನೋ ಆಳವಾದ ಪಿತೂರಿ ಇದೆ ಎಂದು ಆರೋಪ ಮಾಡಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸದಸ್ಯರ ಸತ್ಯಶೋಧನಾ ಸಮಿತಿ ಈಗಾಗಲೇ ಗುರ್ಗಾವ್ ಪೊಲೀಸರಿಗೆ ವರದಿ ಸಲ್ಲಿಸಿದೆ. ವರದಿಯಲ್ಲಿ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯ ಆಡಳಿತ ಮಂಡಳಿಯ ದೋಷಗಳ ಬಗ್ಗೆ ಉಲ್ಲೇಖಿಸಿದೆ. ಶಾಲೆಯ ಆವರಣದಲ್ಲಿ ಅಳವಡಿಸಲಾಗಿದ್ದ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡುತ್ತಿರಲಿಲ್ಲ. ಶಾಲೆಯ ಕಾಪೌಂಡ್ ಒಡೆದಿದ್ದು, ಹೊರಗಿನವರು ಸುಲಭವಾಗಿ ಶಾಲೆಯೊಳಗೆ ಬರಲು ಅವಕಾಶವಿತ್ತು. ಶಾಲಾ ವಿದ್ಯಾರ್ಥಿಗಳಿಗಾಗಿ ಇದ್ದ ಶೌಚಾಲಯವನ್ನೇ ಬಸ್ ಡ್ರೈವರ್ ಹಾಗೂ ಕಂಡಕ್ಟರ್‍ಗಳು ಬಳಸುತ್ತಿದ್ರು. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಬಗ್ಗೆ ಪೊಲೀಸ್ ವೆರಿಫಿಕೇಷನ್ ಆಗಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಸೆಪ್ಟೆಂಬರ್ 8ರ ಶುಕ್ರವಾರದಂದು ಬೆಳಿಗ್ಗೆ ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ಓದುತ್ತಿದ್ದ 7 ವರ್ಷದ ಬಾಲಕನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಅದೇ ದಿನ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಬಂಧಿಸಿದ್ದು, ತನ್ನ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದ.

ಭಾನುವಾರದಂದು ಹರ್ಯಾಣದ ಶಿಕ್ಷಣ್ ಸಚಿವ ರಾಮ್‍ಬಿಲಾಸ್ ಶರ್ಮಾ ಹೇಳಿಕೆ ನೀಡಿದ್ದು, ಪ್ರಕರಣದ ಶೀಘ್ರ ತನಿಖೆಯ ಭರವಸೆ ನೀಡಿದ್ರು. ಸಂತ್ರಸ್ತ ಬಾಲಕನ ಕುಟುಂಬಕ್ಕೆ ರಾಜ್ಯ ಪೊಲೀಸರ ತನಿಖೆಯಿಂದ ತೃಪ್ತಿ ಇಲ್ಲವಾದ್ರೆ ಮತ್ತೊಂದು ತನಿಖಾ ತಂಡಕ್ಕೆ ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ ಸೂಚಿಸಲಾಗುತ್ತದೆ ಎಂದು ಹೇಳಿದ್ದಾರೆ.

ಆದರೆ ಈ ಪ್ರಕರಣದಲ್ಲಿ ಬಸ್ ಕಂಡಕ್ಟರ್‍ನನ್ನು ಬೇಕಂತಲೇ ಆರೋಪಿಯನ್ನಾಗಿಸಿದ್ದಾರೆ ಎಂದು ಶಾಲೆಯಲ್ಲಿ ಓದುತ್ತಿರೋ ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಅನೇಕ ಮಂದಿ ಆರೋಪ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in