ತಿರುವನಂತಪುರಂ: ಜೈಸ್ವಾಲ್, ಗಾಯಕ್‌ವಾಡ್, ಕಿಶಾನ್ ಆಕರ್ಷಕ ಫಿಫ್ಟಿ ಹಾಗೂ ಸಂಘಟಿತ ಬೌಲಿಂಗ್ ನೆರವಿನಿಂದ ಆಸೀಸ್ ವಿರುದ್ಧ ಭಾರತ 44 ರನ್‌ಗಳ ಜಯ ಸಾಧಿಸಿದೆ.
ಭಾರತದ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು. 236 ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 191 ರನ್‌ಗಳಿಸಿ ಸೋಲೊಪ್ಪಿಕೊಂಡಿತು.
Advertisement
ಉತ್ತಮ ಇನ್ನಿಂಗ್ಸ್ ಕಟ್ಟಿದ ಆಸೀಸ್ ತಂಡ ಗೆಲುವಿನ ಭರವಸೆ ಮೂಡಿಸಿತ್ತು. ಸ್ಮಿತ್ ಹಾಗೂ ಶಾರ್ಟ್ ಕೇವಲ 17 ಬಾಲ್‌ಗೆ 35 ರನ್‌ಗಳ ಜೊತೆಯಾಟವಾಡಿದ್ದರು. ಆದರೆ ಮ್ಯಾಥಿವ್ ಶಾರ್ಟ್ ಕೇವಲ 19 ರನ್ ಗಳಿಸಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ಬ್ಯಾಟರ್‌ಗಳು ಒಬ್ಬೊಬ್ಬರಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಜೋಶ್ ಇಂಗ್ಲಿಷ್ 2, ಗ್ಲೆನ್ ಮ್ಯಾಕ್ಸ್‌ವೆಲ್ 12 ರನ್‌ಗಳಿಸಿ ಔಟಾದರು. ಇದರಿಂದ ಆಸೀಸ್ ಗೆಲುವಿನ ಭರವಸೆ ಕುಸಿದಂತಾಯಿತು. ನಿಧಾನಗತಿಯಲ್ಲಿ ಆಟ ಆಡುತ್ತಿದ್ದ ಸ್ಮಿತ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. 19 ರನ್ ಗಳಿಸಿ ಕ್ಯಾಚ್ ನೀಡಿ ಸ್ಮಿತ್ ಔಟಾದರು.
Advertisement
ಆರಂಭಿಕ ಬ್ಯಾಟರ್‌ಗಳಿಂದ ಆಘಾತ ಅನುಭವಿಸಿದ್ದ ಆಸೀಸ್‌ಗೆ ಮಾರ್ಕಸ್ ಸ್ಟೊಯಿನಿಸ್ ಮತ್ತು ಟಿಮ್ ಡೇವಿಡ್ ಜೊತೆಯಾಟ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. 38 ಬಾಲ್‌ಗೆ 81 ರನ್‌ಗಳ ಇವರಿಬ್ಬರ ಜೊತೆಯಾಟ ಗೆಲುವಿನ ಭರವಸೆ ಮತ್ತೆ ಚಿಗುರುವಂತೆ ಮಾಡಿತು. ಸ್ಟೊಯಿನಿಸ್ 25 ಬಾಲ್‌ಗೆ 45 ರನ್‌ಗಳ (4 ಸಿಕ್ಸ್, 2 ಫೋರ್) ಅಬ್ಬರ ಬ್ಯಾಟಿಂಗ್ ನಡೆಸಿದರು. ಸ್ಟೊಯಿನಿಸ್‌ಗೆ ಸಾಥ್ ನೀಡಿದ್ದ ಡೇವಿಡ್ (37 ರನ್) ಬೌಂಡರಿಗೆ ಬಾಲ್ ಅಟ್ಟಲು ಮುಂದಾಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇವರ ಬೆನ್ನಲ್ಲೇ ಸ್ಟೊಯಿನಿಸ್ ಕೂಡ ಪೆವಿಲಿಯನ್ ಸೇರಿದರು.
Advertisement
ಈ ವೇಳೆ ಕ್ಯಾಪ್ಟನ್ ಮ್ಯಾಥ್ಯೂ ವೇಡ್ ತಂಡವನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟವರಂತೆ ಕೊನೆವರೆಗೂ ಹೋರಾಟ ನಡೆಸಿದರು. ಆದರೂ ಇವರಿಗೆ ಇತರೆ ಬ್ಯಾಟರ್‌ಗಳು ಸಾಥ್ ನೀಡುವಲ್ಲಿ ವಿಫಲರಾದರು. ಭಾರತದ ಬೌಲರ್‌ಗಳ ಎದುರು ಆಸೀಸ್ ಆಟಗಾರರು ಮಂಡಿಯೂರಿದರು. ಸೀನ್ ಅಬಾಟ್, ನಾಥನ್ ಎಲ್ಲಿಸ್, ಆಡಮ್ ಝಂಪಾ ತಲಾ ಒಂದು ರನ್‌ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ತನ್ವೀರ್ ಸಂಘ 2 ಹಾಗೂ ವೇಡ್ 23 ಬಾಲ್‌ಗೆ 42 ರನ್ ಗಳಿಸಿ (4 ಸಿಕ್ಸ್, 1 ಫೋರ್) ಔಟಾಗದೇ ಉಳಿದರು. ಆ ಮೂಲಕ ಆಸೀಸ್ 20 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 191 ರನ್‌ಗಳಿಸಿ ಸೋಲೊಪ್ಪಿಕೊಂಡಿತು.
Advertisement
ಪ್ರಸಿದ್ಧ ಕೃಷ್ಣ ಹಾಗೂ ರವಿ ಬಿಷ್ಣೋಯ್ ತಲಾ 3 ವಿಕೆಟ್ ಕಿತ್ತು ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾದರು. ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್ ಹಾಗೂ ಮುಖೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಇಂಡಿಯಾ ಬ್ಯಾಟರ್‌ಗಳ ಅಬ್ಬರ
ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್‌ವಾಡ್, ಇಶಾನ್ ಕಿಶಾನ್ ಆಕರ್ಷಕ ಅರ್ಧಶತಕ ಟಿ20 ಎರಡನೇ ಪಂದ್ಯದಲ್ಲಿ ಭಾರತದ ಗೆಲುವಿಗೆ ನೆರವಾಯಿತು. ಗಾಯಕ್‌ವಾಡ್ 58, ಜೈಸ್ವಾಲ್ 53, ಕಿಶನ್ 52, ಯಾದವ್ 19, ರಿಂಕು ಸಿಂಗ್ ಔಟಾಗದೇ 31, ತಿಲಕ್ ವರ್ಮಾ ಔಟಾಗದೇ 7 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ನಥಾನ್ ಎಲ್ಲಿಸ್ 3, ಮಾರ್ಕಸ್ ಸ್ಟೊಯಿನಿಸ್ 1 ವಿಕೆಟ್ ಪಡೆದರು.