ಚೆನ್ನೈ: ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಶನಿವಾರ ಚೆಪಾಕ್‌ನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 23 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ತನ್ನ ಖಾತೆ ತೆರೆದು ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೆ ಜಿಗಿಯಿತು. ಸಿಎಸ್‌ಕೆಗೆ ಸಿಕ್ಕ ಗೆಲುವು ಅಭಿಮಾನಿಗಳಿಗೆ ಖುಷಿ ಕೊಟ್ಟರೂ, ನಾಯಕ ರುತುರಾಜ್ ಗಾಯಕ್ವಾಡ್‌ಗೆ (Ruturaj Gaikwad) ಕಹಿ ಸುತ್ತಿಯಾಗಿದೆ.
ಏಕೆಂದ್ರೆ ನಾಯಕ ರುತುರಾಜ್‌ಗೆ ಬಿಸಿಸಿಐ (BCCI) 12 ಲಕ್ಷ ರೂ. ದಂಡ ವಿಧಿಸಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಈ ಆವೃತ್ತಿಯಲ್ಲಿ ದಂಡಕ್ಕೆ ಗುರಿಯಾದ 2ನೇ ಕ್ಯಾಪ್ಟನ್ ರುತುರಾಜ್ ಆಗಿದ್ದಾರೆ. ಈ ಮೊದಲು ಆರಂಭಿಕ 2 ಪಂದ್ಯಗಳಲ್ಲಿ ನಿಧಾನ ಗತಿ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್‌ಗೆ ಮೊದಲ ಬಾರಿ 12 ಲಕ್ಷ, 2ನೇ ಬಾರಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇನ್ನೊಂದು ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ್ರೆ, 36 ಲಕ್ಷ ರೂ. ದಂಡದೊಂದಿಗೆ 1 ಪಂದ್ಯದಿಂದ ಬ್ಯಾನ್ ಆಗಲಿದ್ದಾರೆ.

ಏನಿದು ಸ್ಲೋ ಓವರ್ ರೇಟ್?
ಕ್ರಿಕೆಟ್‌ನಲ್ಲಿ (Cricket) ನಿಗದಿತ ಸಮಯದೊಳಗೆ ಓವರ್‌ಗಳನ್ನು ಪೂರ್ಣಗೊಳಿಸದಿದ್ದರೆ ಅದನ್ನು ನಿಧಾನಗತಿ ಓವರ್ (Slow Over Rate) ಎನ್ನಲಾಗುತ್ತದೆ. ಬಿಸಿಸಿಐ (BCCI) ಅಥವಾ ಐಸಿಸಿ (ICC) ನಿಯಮಗಳ ಪ್ರಕಾರ, ನಾಯಕನಿಗೆ ದಂಡ ವಿಧಿಸಲಾಗುತ್ತದೆ.

ನಿಧಾನಗತಿ ಓವರ್ ನಿಯಮಗಳು ಮತ್ತು ಪರಿಣಾಮಗಳು:
* ದಂಡ: ನಾಯಕನಿಗೆ ಭಾರೀ ಹಣದ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿ 12 ಲಕ್ಷ, 2ನೇ ಬಾರಿ 24 ಲಕ್ಷ, 3ನೇ ಬಾರಿ 36 ಲಕ್ಷದೊಂದಿಗೆ ಒಂದು ಪಂದ್ಯದಿಂದ ಬ್ಯಾನ್ ಮಾಡಲಾಗುತ್ತದೆ.
* ಪಂದ್ಯದ ಮೇಲಿನ ಪರಿಣಾಮ: ಅಂತಿಮ ಓವರ್‌ಗಳಲ್ಲಿ 30-ಯಾರ್ಡ್ ವೃತ್ತದ ಹೊರಗೆ ಕೇವಲ 4 ಫೀಲ್ಡರ್‌ಗಳನ್ನು ಇರಿಸಲು ಅನುಮತಿ ನೀಡಲಾಗುತ್ತದೆ (5ರ ಬದಲಾಗಿ), ಇದು ಬ್ಯಾಟಿಂಗ್ ತಂಡಕ್ಕೆ ಅನುಕೂಲವಾಗಲಿದೆ.
* ಶಿಕ್ಷೆ: ಸತತವಾಗಿ ನಿಯಮ ಉಲ್ಲಂಘಿಸಿದರೆ ನಾಯಕನನ್ನು ಪಂದ್ಯದಿಂದ ನಿಷೇಧಿಸುವ ಸಾಧ್ಯತೆಯೂ ಇದೆ.
* ಇತ್ತೀಚಿನ ವಿದ್ಯಮಾನ: 2026ರ ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯರಂತಹ ನಾಯಕರಿಗೆ ಈ ಕಾರಣಕ್ಕಾಗಿ ದಂಡ ವಿಧಿಸಲಾಗಿದೆ.
* 2024ರ ಆವೃತ್ತಿಯಲ್ಲಿ ನಿರ್ಣಾಯಕ ಪಂದ್ಯದಲ್ಲೇ ರಿಷಭ್ ಪಂತ್ ಡೆಲಿ ಕ್ಯಾಪಿಟಲ್ಸ್ ತಂಡದಿಂದ ಹೊರಗುಳಿಬೇಕಾಗಿತ್ತು.

