ಉಕ್ರೇನ್‌ ಯುದ್ಧ – ಭಾರತದಿಂದ ಈಜಿಪ್ಟ್‌ಗೆ ರಫ್ತು ಆಗಲಿದೆ ಗೋಧಿ

Public TV
3 Min Read
Wheat 1

ನವದೆಹಲಿ: ಭಾರತದಿಂದ ಗೋಧಿಯನ್ನು ಖರೀದಿಸಲು ಈಜಿಪ್ಟ್‌ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈಜಿಪ್ಟ್‌ ರಷ್ಯಾ ಮತ್ತು ಉಕ್ರೇನ್‌ನಿಂದ ಗೋಧಿಯನ್ನು ಆಮದು ಮಾಡುತ್ತಿತ್ತು. ಆದರೆ ಯುದ್ಧದಿಂದಾಗಿ ಈಜಿಪ್ಟ್‌ ಈಗ ಭಾರತದಿಂದ 3 ಮಿಲಿಯನ್‌ ಟನ್‌ ಗೋಧಿ ಖರೀದಿಸಲು ಮುಂದಾಗಿದೆ.

ಈಜಿಪ್ಟ್‌ ದೇಶದ ಕೃಷಿ ಅಧಿಕಾರಿಗಳು ಭಾರತದ ವಿವಿಧ ಸಂಸ್ಕರಣಾ ಘಟಕ, ಬಂದರುಗಳಿಗೆ ಭೇಟಿ ನೀಡಿದ್ದರು. ಜೊತೆಗೆ ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್‌ನ ಕೃಷಿ ಭೂಮಿಗಳನ್ನು ವೀಕ್ಷಣೆ ಮಾಡಿದ್ದರು. ಈಗ ಈಜಿಪ್ಟ್‌ಗೆ ಉತ್ತಮ ಗುಣಮಟ್ಟದ ಗೋಧಿಯನ್ನು ರಫ್ತು ಮಾಡಲಿದ್ದೇವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌ ತಿಳಿಸಿದ್ದಾರೆ.  ಇದನ್ನೂ ಓದಿ: ಸ್ಥಳೀಯ ಉತ್ಪನ್ನ ಮಾತ್ರ ಖರೀದಿಸಲು ಜನರನ್ನು ಪ್ರೇರೇಪಿಸಿ: ಸ್ವಾಮೀಜಿಗಳಿಗೆ ಮೋದಿ ಮನವಿ

ರಷ್ಯಾ ಮತ್ತು ಉಕ್ರೇನ್‌ ಯುದ್ಧದ ಹಿನ್ನೆಯಲ್ಲಿ ಗೋಧಿ ಆಮದಿಗಾಗಿ ಈಜಿಪ್ಟ್‌ ಅಧಿಕಾರಿಗಳು ಬೇರೆ ಬೇರೆ ದೇಶಗಳನ್ನು ಸಂಪರ್ಕಿಸಿತ್ತು. ಕಳೆದ ತಿಂಗಳು ದುಬೈನಲ್ಲಿ ಪಿಯೂಶ್‌ ಗೋಯಲ್‌ ಈಜಿಪ್ಟ್‌ ಸರ್ಕಾರದ ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ಸಚಿವ ಡಾ. ಹಾಲಾ ಎಲ್-ಸೈದ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಈಜಿಪ್ಟ್‌ನ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಗೋಧಿಯನ್ನು ಪೂರೈಸಲು ಭಾರತದ ಸಿದ್ಧವಾಗಿದೆ ಎಂದು ತಿಳಿಸಿದ್ದರು.

2021 ರಲ್ಲಿ ಈಜಿಪ್ಟ್ 6.1 ದಶಲಕ್ಷ ಟನ್ (mt) ಗೋಧಿಯನ್ನು ಆಮದು ಮಾಡಿಕೊಂಡಿದೆ. ಭಾರತವು ಈಜಿಪ್ಟ್‌ಗೆ ಗೋಧಿಯನ್ನು ರಫ್ತು ಮಾಡಬಹುದಾದ ಮಾನ್ಯತೆ ಪಡೆದ ದೇಶಗಳ ಪಟ್ಟಿಯಲ್ಲಿ ಇಲ್ಲಿಯವರೆಗೆ ಸ್ಥಾನ ಪಡೆದಿರಲಿಲ್ಲ.

Wheat 2

ರಷ್ಯಾ ಮತ್ತು ಉಕ್ರೇನ್‌ನಿಂದ ಈಜಿಪ್ಟ್‌ ಶೇ.80ರಷ್ಟು ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದು 2021ರಲ್ಲಿ ಅಂದಾಜು 2 ಶತಕೋಟಿ ಡಾಲರ್‌ ಮೌಲ್ಯದ ಗೋಧಿಯನ್ನು ಆಮದು ಮಾಡಿಕೊಂಡಿದೆ.

ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಶ್ರೀಲಂಕಾ, ಓಮನ್ ಮತ್ತು ಮಲೇಷ್ಯಾದಂತಹ ದೇಶಗಳಲ್ಲಿ ಗೋಧಿಗೆ ಹೆಚ್ಚಿನ ಬೇಡಿಕೆಯಿದ್ದು ಭಾರತ ರಫ್ತು ಮಾಡುತ್ತಿದೆ. ಅಷ್ಟೇ ಅಲ್ಲದೇ ಯೆಮೆನ್, ಅಫ್ಘಾನಿಸ್ತಾನ ಮತ್ತು ಇಂಡೋನೇಷ್ಯಾ ಸೇರಿದಂತೆ ಇತರ ದೇಶಗಳಿಗೆ ಗೋಧಿ ರಫ್ತು ಹೆಚ್ಚಿಸಲು ಭಾರತ ಪ್ರಯತ್ನಗಳನ್ನು ಮಾಡುತ್ತಿದೆ. ದನ್ನೂ ಓದಿ: ತಾಯ್ನಾಡಲ್ಲಿ 108 ಅಡಿ ಎತ್ತರದ ಹನುಮ ಮೂರ್ತಿಯನ್ನು ಅನಾವರಣಗೊಳಿಸಿದ ಮೋದಿ

2020-21ರವರೆಗೆ ಜಾಗತಿಕ ಗೋಧಿ ವ್ಯಾಪಾರದಲ್ಲಿ ಭಾರತದ ರಫ್ತು ಪ್ರಮಾಣ ಕಡಿಮೆ ಇದೆ. ಭಾರತವು 2019-20 ಮತ್ತು 2020-21 ರಲ್ಲಿ ಕ್ರಮವಾಗಿ ಸುಮಾರು 0.2 ಮತ್ತು 2 ಮಿಲಿಯನ್ ಟನ್ ಗೋಧಿಯನ್ನು ಮಾತ್ರ ರಫ್ತು ಮಾಡಿದೆ.

cargo ship india imports exports Port 2

2021-22ರ ಹಣಕಾಸು ವರ್ಷದಲ್ಲಿ ಭಾರತ 418 ಕೋಟಿ ಡಾಲರ್‌( ಅಂದಾಜು 31.4 ಲಕ್ಷ ಕೋಟಿ ರೂ.) ದಾಖಲೆ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಈಗ ಗೋಧಿ ರಫ್ತಿನಿಂದಾಗಿ ರೈತರಿಗೂ ಅನುಕೂಲಕರವಾಗಲಿದೆ.

ಭಾರತದಿಂದ ಆಹಾರ ಉತ್ಪನ್ನಗಳು ರಫ್ತು ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗ ಆಹಾರ ಪರೀಕ್ಷೆ ಮಾಡುವ ಲ್ಯಾಬ್‌ಗಳ ಗುಣಮಟ್ಟವನ್ನು ಹೆಚ್ಚಿಸುತ್ತಿದೆ. ರೈಲ್ವೇ ಮತ್ತು ವಾಣಿಜ್ಯ ಸಚಿವಾಲಯ ಹೆಚ್ಚುವರಿ ಬೋಗಿಗಳನ್ನು ಸೇರಿಸಿ ವೇಗವಾಗಿ ಸರಕು ಬಂದರು ತಲುಪವಂತೆ ಮಾಡಲು ಈಗ ಕೆಲಸ ಮಾಡುತ್ತಿದೆ. ಗೋಧಿಯನ್ನು ತ್ವರಿತವಾಗಿ ರಫ್ತು ಮಾಡಲು ಬಂದರು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಆಹಾರ ಸಚಿವಾಲಯ ಅಧಿಕಾರಿಗಳ ಪ್ರಕಾರ ಜಗತ್ತಿನ ಬೇಡಿಕೆಗೆ ಅನುಗುಣವಾಗಿ ಭಾರತ ವಾರ್ಷಿಕ 10 ದಶಲಕ್ಷ ಟನ್‌ ಗೋಧಿ  ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

cargo ship india imports exports Port 4

ಮೋದಿ ಹೇಳಿದ್ದೇನು?
ಗುಜರಾತ್‌ನ ಅದಾಲಾಜ್‌ನಲ್ಲಿರುವ ಅನ್ನಪೂರ್ಣ ಧಾಮದ ಬಾಲಕರ ವಿದ್ಯಾರ್ಥಿನಿಲಯ ಮತ್ತು ಶೈಕ್ಷಣಿಕ ಕಾಂಪ್ಲೆಕ್ಸ್‌ ಉದ್ಘಾಟನೆ ಮಾಡಿದ ಭಾಷಣ ಮಾಡಿದ್ದ ಮೋದಿ, ವಿಶ್ವ ವ್ಯಾಪಾರ ಸಂಸ್ಥೆ ಒಪ್ಪಿಗೆ ನೀಡಿದರೆ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಮಾಡಲು ಭಾರತ ಸಿದ್ಧವಾಗಿದೆ ಎಂದು ತಿಳಿಸಿದ್ದರು.

ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಭಾರತ ಸುಮಾರು 80 ಕೋಟಿ ಜನರಿಗೆ 2 ವರ್ಷಗಳ ಕಾಲ ಉಚಿತವಾಗಿ ಆಹಾರ ಧಾನ್ಯ ಪೂರೈಕೆ ಮಾಡಿದೆ. ಇದನ್ನು ನೋಡಿ ಇಡೀ ವಿಶ್ವವೇ ಬೆರಗಾಗಿದೆ. ಈಗ ಉಕ್ರೇನ್‌-ರಷ್ಯಾ ಯುದ್ಧ ನಡೆಯುತ್ತಿರುವುದರಿಂದ ಜಗತ್ತು ಆಹಾರದ ಅಭಾವವನ್ನು ಎದುರಿಸುತ್ತಿದೆ. ಹಾಗಾಗಿ ವಿಶ್ವ ವ್ಯಾಪಾರ ಸಂಸ್ಥೆ ಅನುಮತಿ ನೀಡಿದರೆ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಮಾಡಲು ಭಾರತ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಜೊತೆಗಿನ ಮಾತುಕತೆಯ ವೇಳೆ ತಿಳಿಸಿದ್ದೇನೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *