– ಮತ್ತಷ್ಟು ಮಹಿಳೆಯರ ಹತ್ಯೆ ಬಗ್ಗೆ ಬಾಯ್ಬಿಟ್ಟ ನರರಾಕ್ಷಸ!
ಪಣಜಿ: ಗೋವಾದಲ್ಲಿ (Goa) ಇಬ್ಬರು ಗೆಳತಿಯರನ್ನು ಕೊಂದಿದ್ದ ರಷ್ಯಾ (Russia) ಮೂಲದ ಆರೋಪಿಯ ವಿಚಾರಣೆ ವೇಳೆ ಸ್ಫೋಟಕ ಅಂಶಗಳು ಹೊರಬಿದ್ದಿವೆ. ಆರೋಪಿಯ ಮೊಬೈಲ್‌ನಲ್ಲಿ 100ಕ್ಕೂ ಹೆಚ್ಚು ಮಹಿಳೆಯರ ಫೋಟೋ ಇರುವುದು ತನಿಖೆ ವೇಳೆ ಗೊತ್ತಾಗಿದೆ. ಅಲ್ಲದೇ ಇನ್ನೂ ಕೆಲವು ಮಹಿಳೆಯರ ಕೊಂದಿದ್ದಾಗಿ ಪೊಲೀಸರ ಮುಂದೆ ಆರೋಪಿ ಒಪ್ಪಿಕೊಂಡಿದ್ದಾನೆ.
ಅಲೆಕ್ಸೆಯ್ ಲಿಯೊನೊವ್ ಎಂಬಾತ ಜ.14 ಮತ್ತು 15 ರಂದು ಎಲೆನಾ ವನೀವಾ ಮತ್ತು ಎಲೆನಾ ಕಸ್ತನೋವಾ ಎಂಬ ಇಬ್ಬರು ಸ್ನೇಹಿತೆಯರನ್ನು ಹತ್ಯೆ ಮಾಡಿದ್ದ. ಹತ್ಯೆಯಾದವರೂ ಇಬ್ಬರೂ ರಷ್ಯಾದ ಪ್ರಜೆಗಳಾಗಿದ್ದು, ಆರೋಪಿಯ ಸ್ನೇಹಿತೆಯರಾಗಿದ್ದರು. ಅವರಲ್ಲಿ ಒಬ್ಬರಾದ ಎಲೆನಾ ಕಸ್ತನೋವಾ ಡ್ಯಾನ್ಸರ್ ಆಗಿದ್ದಳು. ಈಕೆ ಆರೋಪಿಯಿಂದ ಸ್ವಲ್ಪ ಹಣ ಮತ್ತು ಡ್ಯಾನ್ಸರ್‌ಗಳು ತಮ್ಮ ತಲೆಯ ಮೇಲೆ ಬೆಂಕಿಯನ್ನು ಹಚ್ಚಿ ಬಳಸುವ ರಬ್ಬರ್ ಕಿರೀಟ ಪಡೆದಿದ್ದಳು. ಇನ್ನೊಬ್ಬ ಮಹಿಳೆ ಕೂಡ ಹಣ ಪಡೆದಿದ್ದಳು. ಈ ಇಬ್ಬರೂ ಹಣ ಮತ್ತು ಕಿರೀಟವನ್ನು ಅಲೆಕ್ಸೆಯ್‌ಗೆ ಹಿಂದಿರುಗಿಸಲು ವಿಫಲರಾಗಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೈದಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ಇಬ್ಬರು ಸ್ನೇಹಿತೆಯರ ಕಗ್ಗೊಲೆ – ಗೋವಾದಲ್ಲಿ ರಷ್ಯಾ ವ್ಯಕ್ತಿ ಸೆರೆ
ಮೂಲಗಳ ಪ್ರಕಾರ, ಕೊಲೆಗಳು ಪೂರ್ವ ಯೋಜಿತವಲ್ಲ, ಆದರೆ ಪ್ರಚೋದಿತ ಕೊಲೆಗಳು ಎಂದು ತಿಳಿದುಬಂದಿದೆ. ಆರೋಪಿ ಅತಿಯಾದ ಗೀಳನ್ನು ಹೊಂದಿದ್ದ. ಅಲ್ಲದೇ ಸುಲಭವಾಗಿ ಪ್ರಚೋದನೆಗೆ ಒಳಗಾಗುತ್ತಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ತನಿಖೆ ವೇಳೆ ಹಂತಕನ ಫೋನ್‌ನಲ್ಲಿ 100ಕ್ಕೂ ಹೆಚ್ಚು ಮಹಿಳೆಯರ ಫೋಟೋಗಳು ಪತ್ತೆಯಾಗಿವೆ. ಆರೋಪಿಯು ಮಾದಕ ದ್ರವ್ಯಗಳ ವ್ಯಸನಿಯಾಗಿದ್ದನೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಲಾವಿದೆಯಾಗಿದ್ದ ಎಲೆನಾ ವನೀವಾ ಜನವರಿ 10 ರಂದು ಗೋವಾಕ್ಕೆ ಆಗಮಿಸಿದ್ದರು. ಕಸ್ತನನೋವಾ ಕಳೆದ ವರ್ಷ ಡಿಸೆಂಬರ್ 25 ರಿಂದ ಗೋವಾದಲ್ಲಿ ಬಂಧಿತ ಆರೋಪಿಯೊಂದಿಗೆ ವಾಸಿಸುತ್ತಿದ್ದಳು. ಇಬ್ಬರೂ ದೇಶದ ಹಲವಾರು ಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು. ಆಗಾಗ ಗೋವಾಕ್ಕೆ ಭೇಟಿ ನೀಡುತ್ತಿದ್ದರು. ಅಲೆಕ್ಸೆಯ್ ಭಾರತಕ್ಕೆ ದೀರ್ಘಾವಧಿಯ ವೀಸಾವನ್ನು ಹೊಂದಿದ್ದ ಎಂದು ಮೂಲಗಳು ತಿಳಿಸಿವೆ.
ಸರಣಿ ಕೊಲೆಗಾರ?
ಗೋವಾ ಪೊಲೀಸ್ ಮೂಲಗಳು ಹೇಳುವಂತೆ ಆರೋಪಿಯು ತಾನು ಜಗಳವಾಡುತ್ತಿದ್ದ ಇನ್ನೂ ಐದು ಜನರನ್ನು ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ಅವರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ. ಆದರೆ ಪೊಲೀಸರು ಪರಿಶೀಲನೆ ನಡೆಸಿದಾಗ, ಅವನು ಉಲ್ಲೇಖಿಸಿದ ಐದು ಜನರು ಜೀವಂತವಾಗಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಮಾನಸಿಕ ಅಸ್ವಸ್ಥ ಮತ್ತು ಯಾವಾಗಲೂ ಮಾದಕ ದ್ರವ್ಯ ವ್ಯಸನಿಯಾಗಿದ್ದ ಎನ್ನಲಾಗಿದೆ. ಜ.12 ರಂದು ಗೋವಾದಲ್ಲಿ ಶವವಾಗಿ ಪತ್ತೆಯಾದ ಮಹಿಳೆ ಮೃದುಸ್ಮಿತಾ ಸೈನ್ಕಿಯಾ ಪ್ರಕರಣದಲ್ಲಿ ಆರೋಪಿಯ ಪಾತ್ರವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಲಾರಿ, ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಸವಾರ ಸಾವು

