ವಾಷಿಂಗ್ಟನ್: ಉಕ್ರೇನ್- ರಷ್ಯಾ ಯುದ್ಧ ಕೊನೆಗೊಳಿಸಲು ಪ್ರಯತ್ನ ನಡೆಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ವ್ಲಾದಿಮಿರ್ ಪುಟಿನ್ ಮತ್ತು ಝೆಲೆನ್‌ಸ್ಕಿ ಮಾತುಕತೆಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ.
ಅಲಾಸ್ಕಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾಗಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈಗ ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ (Zelensky) ಮತ್ತು ಯೋಪಿಯನ್ ನಾಯಕರ (European Leaders) ಜೊತೆ ಸಭೆ ನಡೆಸಿದರು.
ಝೆಲೆನ್‌ಸ್ಕಿ ಭೇಟಿ ವೇಳೆ ಮಾತನಾಡಿದ ಟ್ರಂಪ್, ಯುದ್ಧ ಕೊನೆಗೊಳ್ಳಲಿದೆ. ಅದು ಯಾವಾಗ ಕೊನೆಗೊಳ್ಳುತ್ತದೆ ಎಂದು ನಾನು ನಿಮಗೆ ಹೇಳಲಾರೆ. ಆದರೆ ಈ ಯುದ್ಧ ನಿಲ್ಲಲಿದೆ. ಪುಟಿನ್ ಯುದ್ಧ ನಿಲ್ಲಿಸಲು ಬಯಸುತ್ತಿದ್ದು ಝೆಲೆನ್ಸ್ಕಿ ಕೂಡ ಒಪ್ಪಿಕೊಂಡರೆ ಶೀಘ್ರದಲ್ಲೇ ಯುದ್ಧ ನಿಲ್ಲುತ್ತದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!
ಇಡೀ ಜಗತ್ತು ಈ ಯುದ್ಧದಿಂದ ಬೇಸತ್ತಿದೆ. ನಾವು ಅದನ್ನು ಕೊನೆಗೊಳಿಸುತ್ತೇವೆ. ನಾನು 6 ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಅದರಲ್ಲಿ ಭಾರತ -ಪಾಕ್ ಯುದ್ಧವೂ ಒಂದು ಎಂದು ಟ್ರಂಪ್ ಹೇಳಿದರು.
ಟ್ರಂಪ್ ಮತ್ತು ಝೆಲೆನ್ಸ್ಕಿ ಅವರೊಂದಿಗೆ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಉಪಸ್ಥಿತರಿದ್ದರು.
ಡೊನಾಲ್ಡ್ ಟ್ರಂಪ್ ಮತ್ತು ಯುರೋಪಿಯನ್ ನಾಯಕರ ನಡುವೆ ನಡೆದ ಮಹತ್ವದ ಮಾತುಕತೆಗಳ ನಂತರ ಪುಟಿನ್ ಮತ್ತು ಝೆಲೆನ್ಸ್ಕಿ ಶಾಂತಿ ಮಾತುಕತೆಗೆ ಒಪ್ಪಿದ್ದಾರೆ ಎಂದು ವರದಿಯಾಗಿದೆ.
ಶ್ವೇತಭವನದಲ್ಲಿ ಏನಾಯ್ತು?
ಆರಂಭದಲ್ಲಿ ಉಕ್ರೇನ್ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರ ಜೊತೆ ಟ್ರಂಪ್ ಸಭೆ ನಡೆಸಿದರು. ಬಳಿಕ ಟ್ರಂಪ್ ಈ ಎಲ್ಲಾ ನಾಯಕರನ್ನು ತನ್ನ ಓವಲ್ ಕಚೇರಿಯ ಕ್ಯಾಬಿನ್‌ಗೆ ಕರೆಸಿ ರಷ್ಯಾದ ಅಧ್ಯಕ್ಷ ಪುಟಿನ್‌ಗೆ ನೇರವಾಗಿ ಕರೆ ಮಾಡಿದರು.
ಯುರೋಪಿಯನ್ ನಾಯಕರು ಮತ್ತು ಝೆಲೆನ್ಸ್ಕಿ ಅವರೊಂದಿಗಿನ ಮಾತುಕತೆಗಳ ಬಗ್ಗೆ ಟ್ರಂಪ್ ವಿವರಿಸಿದರು. ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವೆ ನೇರ ಮಾತುಕತೆಗಳನ್ನು ಮುಂದುವರಿಸಲು ಪುಟಿನ್‌ಗೆ ಕರೆ ನೀಡಿದರು. ಇಬ್ಬರು ನಾಯಕರ ಮಧ್ಯೆ ಒಟ್ಟು 40 ನಿಮಿಷಗಳ ಮಾತುಕತೆ ನಡೆಯಿತು. ಈ ವೇಳೆ ಇತ್ತೀಚಿನ ಅಲಾಸ್ಕಾ ಭೇಟಿಯ ಸಮಯದಲ್ಲಿ ಟ್ರಂಪ್ ನೀಡಿದ ಆತಿಥ್ಯ ಮತ್ತು ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯಲ್ಲಿ ಸಾಧಿಸಿದ ಪ್ರಗತಿಗೆ ಪುಟಿನ್ ಟ್ರಂಪ್‌ಗೆ ಧನ್ಯವಾದ ಹೇಳಿದರು.