ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವುದರಿಂದ ಇದರ ಪ್ರಭಾವ ನೇರವಾಗಿ ಜಾಗತಿಕ ಮಾರುಕಟ್ಟೆ ಮೇಲೆ ಬಿದ್ದಿದೆ. ಇದರಲ್ಲಿ ಭಾರತೀಯ ಷೇರು ಮಾರುಕಟ್ಟೆ ಕೂಡಾ ಹೊರತಾಗಿಲ್ಲ.
ಇಂದು ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಷೇರುಪೇಟೆಗಳಲ್ಲಿ ಭಾರೀ ನಷ್ಟ ಉಂಟಾಗಿದೆ. ಒಂದೇ ದಿನ 13 ಲಕ್ಷ ಕೋಟಿ ರೂ. ನಷ್ಟವಾಗಿದೆ. ಬಿಎಸ್‍ಇ ಸೂಚ್ಯಂಕದಲ್ಲಿ 2,702 ಅಂಶ, ಎನ್‍ಎಸ್‍ಇ ಸೂಚ್ಯಂಕದಲ್ಲಿ 815.30 ಅಂಶ ನಷ್ಟವಾಗಿದೆ. ಈ ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಷೇರುಪೇಟೆ ನಷ್ಟಹೋಗಿರುವುದು ಇದೇ ಮೊದಲು.
Advertisement
Advertisement
ವಿದೇಶಿ ಹೂಡಿಕೆದಾರರ ಜೊತೆ ದೇಶಿಯ ಇನ್ವೆಸ್ಟರ್‍ಗಳು ಕೂಡ ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಷೇರುಪೇಟೆಗೆ ಭಾರೀ ನಷ್ಟವಾಗಿದೆ. ಡಾಲರ್ ಎದುರು ರೂ. ಮೌಲ್ಯ 75.61 ರೂ.ಗೆ ಕುಸಿದಿದೆ. ಇನ್ನೂ ಉಕ್ರೇನ್ ಮೇಲಿನ ದಾಳಿಯಿಂದ ದೇಶದ ಮೇಲೆ ಏನೇನು ಪರಿಣಾಮ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!
Advertisement
100 ಡಾಲರ್ ದಾಟಿದ ಕಚ್ಛಾ ತೈಲ ಬೆಲೆ:
ಕಳೆದ 2-3 ದಿನಗಳಿಂದ 97.98 ಡಾಲರ್(7,429 ರೂ.) ಆಚೆ ಈಚೆ ಇದ್ದ 1 ಬ್ಯಾರಲ್ ಕಚ್ಛಾ ತೈಲದ ಬೆಲೆ ಯುದ್ಧ ಪ್ರಾರಂಭವಾಗುತ್ತಿದ್ದಂತೆ 105 ಡಾಲರ್(7,961 ರೂ.) ದಾಟಿದೆ. ಇದು 2014ರ ಬಳಿಕದ ಗರಿಷ್ಠ ಮಟ್ಟವಾಗಿದೆ.
Advertisement
ತೈಲ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಅತೀದೊಡ್ಡ ದೇಶ ರಷ್ಯಾ. ಯುರೋಪ್ ರಾಷ್ಟ್ರಗಳಿಗೆ ಶೇ.35 ರಷ್ಟು ಕಚ್ಚಾ ತೈಲ ರಷ್ಯಾದಿಂದಲೇ ಪೂರೈಕೆಯಾಗುತ್ತದೆ. ಯುದ್ಧ ನಿಲ್ಲದೇ ಹೀಗೆ ಮುಂದುವರೆದಲ್ಲಿ, ಆರ್ಥಿಕ ನಿರ್ಬಂಧಗಳ ಹೇರಿಕೆ ಹೆಚ್ಚಳವಾದಲ್ಲಿ ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲಾಗದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.
ಪಂಚರಾಜ್ಯ ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕನಿಷ್ಟ 7-8 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.
ಚಿನ್ನದ ಬೆಲೆ ಶೇ.30 ರಷ್ಟು ಹೆಚ್ಚಳ:
ಯುದ್ಧದ ಪ್ರಭಾವ ನೇರವಾಗಿ ಬಂಗಾರದ ಮೇಲೆ ಬಿದ್ದಿದೆ. ಕೇವಲ ಒಂದೇ ದಿನದಲ್ಲಿ ಬಂಗಾರದ ಬೆಲೆ ಶೇ.30 ರಷ್ಟು ಹೆಚ್ಚಿದೆ. ಇಂದು 10 ಗ್ರಾಂ. 24 ಕ್ಯಾರೆಟ್ ಚಿನ್ನದ ಬೆಲೆ 2,500 ರೂ. ಹೆಚ್ಚಿದ್ದು, 54 ಸಾವಿರದ ಗಡಿದಾಟಿದೆ. ಆಭರಣದ ಚಿನ್ನದ ಬೆಲೆ 1,000 ರೂ. ಹೆಚ್ಚಿದ್ದು, 47ಸಾವಿರದ ಅಂಚಿನಲ್ಲಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್
ರಸಗೊಬ್ಬರ ಪೂರೈಕೆ ವ್ಯತ್ಯಯ/ಬೆಲೆ ಹೆಚ್ಚಳ ಸಾಧ್ಯತೆ:
ಭಾರತಕ್ಕೆ ಡಿಎಪಿ ಸೇರಿ ಮೂರು ಬಗೆಯ ರಸಗೊಬ್ಬರವನ್ನು ಪೂರೈಸುವ ದೇಶಗಳಲ್ಲಿ ರಷ್ಯಾ ಪ್ರಮುಖ. ಯುದ್ಧದಿಂದ ಭಾರತಕ್ಕೆ ರಸಗೊಬ್ಬರ ಆಮದು ಕಷ್ಟಕರವಾಗಿದ್ದು, ಮುಂಗಾರು ಬೆಳೆಯ ಸಿದ್ಧತೆಯಲ್ಲಿರುವ ರೈತರಿಗೆ ಸಮಸ್ಯೆಯಾಗಲಿದೆ ಜೊತೆಗೆ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ.
ಸೂರ್ಯಕಾಂತಿ ಎಣ್ಣೆ ದರ ಹೆಚ್ಚಳ:
ಉಕ್ರೇನ್‍ನಿಂದ ಭಾರತಕ್ಕೆ ಸೂರ್ಯಕಾಂತಿ ಎಣ್ಣೆ ಹೆಚ್ಚಿನ ಮಟ್ಟದಲ್ಲಿ ಆಮದು ಆಗುತ್ತದೆ. ಯುದ್ಧದಿಂದ ಆಮದು ಕಷ್ಟಸಾಧ್ಯವಾಗುವುದರಿಂದ ಸೂರ್ಯಕಾಂತಿ ಎಣ್ಣೆ ದುಬಾರಿಯಾಗುವ ಸಾಧ್ಯತೆ ಇದೆ.
ಮದ್ಯ ಪ್ರಿಯರಿಗೆ ಶಾಕ್:
ಯುದ್ಧದಿಂದ ಮದ್ಯದ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಉಕ್ರೇನ್ ವಿಶ್ವದಲ್ಲೇ ಅತೀ ಹೆಚ್ಚು ಬಾರ್ಲಿ ಪೂರೈಸುವ 5 ಪ್ರಮುಖ ದೇಶಗಳಲ್ಲಿ ಒಂದು. ಮದ್ಯ ತಯಾರಿಕೆಗೆ ಬಾರ್ಲಿ ಅಗತ್ಯ. ಯುದ್ಧದಿಂದಾಗಿ ಬಾರ್ಲಿ ಪೂರೈಕೆ ಏರುಪೇರಾಗುವುದರಿಂದ ಮದ್ಯದ ಬೆಲೆಯೂ ಹೊರೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಯುದ್ಧ ವಿಚಾರದಲ್ಲಿ ಇತರ ರಾಷ್ಟ್ರಗಳು ಮೂಗು ತೂರಿಸಬೇಡಿ – ಪುಟಿನ್ ನೇರ ಎಚ್ಚರಿಕೆ
ಮೊಬೈಲ್ ಉದ್ಯಮಕ್ಕೆ ಆಘಾತ:
ಮೊಬೈಲ್ ಬಿಡಿಭಾಗಗಳ ಪೂರೈಕೆಯಲ್ಲಿ ರಷ್ಯಾ ಮುಂದಿದೆ. ಯುದ್ಧದಿಂದ ಆಮದು-ರಫ್ತಿಗೆ ತೊಡಕಾಗುವ ಸಾಧ್ಯತೆ ಇರುವುದರಿಂದ ಮೊಬೈಲ್ ಉದ್ಯಮಕ್ಕೆ ಕಷ್ಟವಾಗಲಿದೆ.
ವಾಹನ ಉದ್ಯಮಕ್ಕೆ ಪೆಟ್ಟು:
ವಾಹನ ಎಕ್ಸಾಸ್ಟ್ ವ್ಯವಸ್ಥೆಗೆ ಪಲಾಡಿಯಂ ಲೋಹ ಅಗತ್ಯ. ಪಲಾಡಿಯಂ ಲೋಹವನ್ನು ಹೆಚ್ಚು ರಫ್ತು ಮಾಡುವ ದೇಶ ರಷ್ಯಾ. ಯುದ್ಧ ಬಿಕ್ಕಟ್ಟಿನ ಬಳಿಕ ಪಲಾಡಿಯಂ ಲೋಹದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಕೆಮಿಕಲ್ಸ್, ಕಬ್ಬಿಣ, ಉಕ್ಕು, ಪ್ಲಾಸ್ಟಿಕ್‍ಗಳೊಂದಿಗೆ ಕೈಗಾರಿಕೆಯಲ್ಲಿ ಬಳಕೆಯಾಗುವ ರಿಯಾಕ್ಟರ್ಸ್, ಬಾಯ್ಲರ್ ಯಂತ್ರ, ಮೆಕಾನಿಕಲ್ ವಸ್ತು, ಎಣ್ಣೆ ಬೀಜ ಕೂಡಾ ದುಬಾರಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಕಣ್ಣು ಯಾಕೆ? ರಷ್ಯಾಗೆ ಯಾಕೆ ಯಾರ ಭಯವಿಲ್ಲ?
ಕೇವಲ ರಷ್ಯಾ ಹಾಗೂ ಉಕ್ರೇನ್‍ನಿಂದ ಆಮದು ಆಗುವ ವಸ್ತುಗಳಿಗಷ್ಟೇ ಭಾರತದಲ್ಲಿ ಪೆಟ್ಟು ಬೀಳದೇ ರಫ್ತಿನಿಂದಲೂ ನಷ್ಟವಾಗುವ ಸಾಧ್ಯತೆ ಇದೆ. ಭಾರತದಿಂದ ಉಕ್ರೇನ್‍ಗೆ ರಫ್ತಾಗುವ ವಸ್ತುಗಳ ಪೈಕಿ ಸಿಂಹಭಾಗ ಔಷಧಿಗಳದ್ದಾಗಿದೆ. ಮೌಲ್ಯದ ಲೆಕ್ಕದಲ್ಲಿ ಉಕ್ರೇನ್‍ಗೆ ಔಷಧಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಅತೀದೊಡ್ಡ ದೇಶವಾಗಿದೆ.
ಹಣ್ಣು, ಕಾಫಿ, ಟೀ ಪುಡಿ ಉದ್ಯಮಕ್ಕೂ ಯುದ್ಧದಿಂದ ಹೊಡೆತ ಬೀಳಲಿದ್ದು, ಇವುಗಳ್ನು ಉಕ್ರೇನ್‍ಗೆ ಭಾರತ ರಫ್ತು ಮಾಡುತ್ತದೆ.