ವಾಷಿಂಗ್ಟನ್: ಉಕ್ರೇನ್ ಜೊತೆ ನಾವಿದ್ದೇವೆ ಎಂದು ಭಾಷಣ ಮೂಲಕ ಧೈರ್ಯ ತುಂಬಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ತನ್ನ ಸೈನ್ಯವನ್ನು ಯಾಕೆ ಕಳುಹಿಸಿಲ್ಲ ಎಂಬ ವಿಚಾರ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ತನ್ನ ಎದುರಾಳಿಯಿಂದ ಬೇರೊಂದು ದೇಶಕ್ಕೆ ಅಪಾಯವಾದಾಗ ಕೂಡಲೇ ಸೈನ್ಯವನ್ನು ಕಳುಹಿಸಿ ಬೆದರಿಕೆ ಹುಟ್ಟಿಸುತ್ತಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ರಷ್ಯಾ ಉಕ್ರೇನ್ ವಿಚಾರದಲ್ಲಿ ಬಹಳ ಎಚ್ಚರಿಕೆ ಹೆಜ್ಜೆಯನ್ನು ಇಡುತ್ತಿದೆ. ಆರ್ಥಿಕವಾಗಿ ರಷ್ಯಾಗೆ ದಿಗ್ಭಂದನ ಹೇರಿದ ಅಮೆರಿಕ ಇಂದು 350 ಮಿಲಿಯನ್ ಡಾಲರ್ ನೆರವನ್ನು ಉಕ್ರೇನ್‌ಗೆ ನೀಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ಉಕ್ರೇನ್‌ಗೆ 4,503 ಕೋಟಿ ರೂ. ಭದ್ರತಾ ನೆರವು ಘೋಷಿಸಿದ ಅಮೆರಿಕ
ಯಾಕೆ ಸೈನ್ಯ ಕಳುಹಿಸಲ್ಲ?
ಅಮೆರಿಕ ಏನೇ ಮಾಡಿದರೂ ಅದರಿಂದ ತನಗೇನು ಲಾಭ ಎಂದು ನೋಡುತ್ತದೆ. ಎಷ್ಟು ಬಿಸಿನೆಸ್ ಆಗುತ್ತದೆ ಎಂಬ ಲೆಕ್ಕಾಚಾರ ಹಾಕುತ್ತದೆ. ಆದರೆ ಈಗಾಗಲೇ ಹಲವು ದೇಶಗಳಲ್ಲಿ ಸೈನಿಕ ಕಾರ್ಯಾಚರಣೆಗಳನ್ನು ಮಾಡಿ ಕೈಸುಟ್ಟಿಕೊಂಡಿರುವ ಅಮೆರಿಕ ಈಗ ರಷ್ಯಾ ವಿಚಾರದಲ್ಲಿ ಬಹಳ ಆಲೋಚನೆ ಮಾಡಿ ನಿರ್ಧಾರ ಪ್ರಕಟಿಸುತ್ತದೆ.
ಉಕ್ರೇನ್‌ಗೆ ಸೇನೆ ಕಳುಹಿಸಿದರೆ ರಾಷ್ಟ್ರೀಯ ಪ್ರಯೋಜನಗಳಿಲ್ಲ. ಬೇರೆ ದೇಶದಲ್ಲಿ ಸೈನ್ಯ ಹೋರಾಡಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುವ ಪಾಠವನ್ನು ಅಮೆರಿಕ ಈಗಾಗಲೇ ಕಲಿತುಕೊಂಡಿದೆ. ಒಂದು ವೇಳೆ ತಾನು ಯುದ್ಧಕ್ಕೆ ಕೈ ಹಾಕಿದರೆ ರಷ್ಯಾ ಮತ್ತಷ್ಟು ಆಕ್ರಮಣಕಾರಿಯಾಗಬಹುದು ಎನ್ನುವುದು ಅಮೆರಿಕಕ್ಕೆ ಗೊತ್ತಿದೆ. ರಷ್ಯಾ ಬಳಿ ಇರುವ ಶಸ್ತ್ರಾಸ್ತ್ರಗಳ ಅರಿವು ಅಮೆರಿಕಕ್ಕೆ ತಿಳಿದಿದೆ. ಉಕ್ರೇನ್ ನ್ಯಾಟೋ ಸದಸ್ಯ ದೇಶವಲ್ಲ ಅಷ್ಟೇ ಅಲ್ಲದೇ ಯಾವುದೇ ಒಪ್ಪಂದಗಳು ಇಲ್ಲ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?
ತಾಲಿಬಾನ್ ಹಿಮ್ಮೆಟ್ಟಿಸುವುದಾಗಿ ಶಪಥಗೈದ ಅಮೆರಿಕ ಕೊನೆಗೆ ತಾಲಿಬಾನ್ ಜೊತೆಗೆ ಮಾತುಕತೆ ನಡೆಸಿ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಪಡೆದುಕೊಂಡಿದೆ. ಸೈನ್ಯವನ್ನು ಕಳುಹಿಸಿ ರಷ್ಯಾ ವಿರುದ್ಧ ಗೆದ್ದರೂ ಉಕ್ರೇನ್‌ನಲ್ಲಿ ಮತ್ತೆ ಅಮೆರಿಕ ಯೋಧರು ಇರಲೇಬೇಕಾಗುತ್ತದೆ. ಈಗಾಗಲೇ ಕೋವಿಡ್‌ನಿಂದಾಗಿ ಅಮೆರಿಕದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಿರುವಾಗ ಮತ್ತೆ ಸಮಸ್ಯೆ ಎದುರಿಸಲು ಅಮೆರಿಕಕ್ಕೆ ಇಷ್ಟವಿಲ್ಲ.