ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

Public TV
2 Min Read
evm

ನವದೆಹಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್(ಇವಿಎಂ)ಗಳಲ್ಲಿ ಲೋಪವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಹೊತ್ತಲ್ಲೇ ರಷ್ಯಾ ಭಾರತದ ಇವಿಎಂ ತಂತ್ರಜ್ಞಾನವನ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಲು ಇಚ್ಛಿಸಿದೆ.

2018ರ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ರಷ್ಯಾ, ಇವಿಎಂಗಳ ಮೂಲಕ ಚುನಾವಣೆಯನ್ನು ಅನಾಯಾಸವಾಗಿ ನಡೆಸುವ ಭಾರತದ ಅನುಭವದಿಂದ ಕಲಿಯಲು ಆಸಕ್ತಿ ತೋರಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ರಷ್ಯಾದ ಚುನಾವಣಾ ಆಯೋಗದ ಉಪಾಧ್ಯಕ್ಷರಾದ ನಿಕೋಲೈ ಲೆವಿಚೆವ್ ಇವಿಎಂ ಮೂಲಕ ಓಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತೆ ಅನ್ನೋದನ್ನ ಅರ್ಥಮಾಡಿಕೊಳ್ಳಲು ಫೆಬ್ರವರಿಯಲ್ಲಿ ಉತ್ತರಾಖಂಡ್‍ಗೆ ಭೇಟಿ ನೀಡಿದ್ದರು. ಅಲ್ಲದೆ ಉತ್ತರಪ್ರದೇಶ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲೂ ಚುನಾವಣಾಯನ್ನ ವೀಕ್ಷಿಸಿದ್ದು, ಇವಿಎಂ ವ್ಯವಸ್ಥೆಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಮಾನವನ ಪಾತ್ರ ಕಡಿಮೆ ಇರೋದನ್ನ ನೋಡಿ ಪ್ರಭಾವಿತರಾಗಿದ್ದಾರೆ ಎಂದು ವರದಿಯಾಗಿದೆ.

ಲೆವಿಚೆವ್ ಅವರು ದೆಹಲಿಯಲ್ಲಿ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಿ, ಇವಿಎಂ ತಂತ್ರಜ್ಞಾನ ಹಾಗೂ ಅದರ ಬಳಕೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಮತ ಎಣಿಕೆಗೆ ಆಧುನಿಕ ಟ್ಯಾಬುಲೇಷನ್ ಪದ್ಧತಿಯನ್ನ ಅಭಿವೃದ್ಧಿಪಡಿಸಲು ಭಾರತಕ್ಕೆ ನೆರವಾಗಲಿದೆ ಎಂದು ವರದಿಯಾಗಿದೆ.

india vote election politics

ಮಿತ್ರರಾಷ್ಟ್ರಗಳು ಭಾರತದ ಚುನಾವಣಾ ಆಯೋಗದ ನೆರವು ಕೇಳ್ತಿರೋದು ಇದೇ ಮೊದಲೇನಲ್ಲ. 2014ರಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣಾ ಸಂದರ್ಭದಲ್ಲಿ ಮತದಾರರ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಬ್ಯಾಲೆಟ್ ಪೇಪರ್ ಕೊರತೆ ಉಂಟಾಗಿತ್ತು. ಆಗ ಭಾರತ ಹೆಚ್ಚುವರಿ ಬ್ಯಾಲೆಟ್ ಪೇಪರನ್ನ ಕಾಬುಲ್‍ಗೆ ಪೂರೈಕೆ ಮಾಡಿತ್ತು. ಭಾರತದಲ್ಲಿ 1999ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಎವಿಎಂ ಬಳಕೆ ಮಾಡಲಾಯ್ತು.

vvpat

ಮಧ್ಯಪ್ರದೇಶದ ಇವಿಎಂನಲ್ಲಿ ಲೋಪವಾಗಿದೆ ಎಂದು ತೋರಿಸಿ ದೇಶದೆಲ್ಲಡೆ ಸಂಚಲನಕ್ಕೆ ಕಾರಣವಾದ ವಿಡಿಯೋವೊಂದು ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ  ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ನಡೆಯಲಿರುವ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ನಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತ ಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗಡೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು.

ಇದನ್ನೂ ಓದಿ: ಇವಿಎಂ ಪರೀಕ್ಷೆ ವೇಳೆ ಎಸ್‍ಪಿಗೆ ಹಾಕಿದ ಮತ ಬಿಜೆಪಿಗೆ: ಕಾಂಗ್ರೆಸ್ ಗಂಭೀರ ಆರೋಪ

Share This Article
Leave a Comment

Leave a Reply

Your email address will not be published. Required fields are marked *