ನವದೆಹಲಿ: ರಷ್ಯಾ ಈಗ ತನ್ನ ಹಳೆಯ ವ್ಯಾಪಾರ ಪ್ರಸ್ತಾಪವನ್ನು ಭಾರತದ ಮುಂದಿಟ್ಟಿದೆ.
ಉಕ್ರೇನ್ ವಿರುದ್ಧ ಯುದ್ಧ ಸಾರಿದ ಬಳಿಕ ವಿಶ್ವದ ಹಲವು ರಾಷ್ಟ್ರಗಳು ರಷ್ಯಾದ ವಿರುದ್ಧ ದಿಗ್ಬಂಧನ ವಿಧಿಸಿದೆ. ಹಲವು ರಾಷ್ಟ್ರಗಳ ಕೆಂಗಣ್ಣಿಗೂ ಗುರಿಯಾಗಿದ್ದರೂ ಭಾರತ ರಷ್ಯಾದ ಜೊತೆ ವ್ಯಾಪಾರ ನಡೆಸಲು ಆಸಕ್ತಿ ತೋರಿಸಿದೆ.
ಡಾಲರ್ ಮೂಲಕ ವ್ಯವಹಾರ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗ ರುಪಿ ರೂಬೆಲ್ ಮೂಲಕ ವ್ಯವಹಾರ ನಡೆಸಲು ರಷ್ಯಾ ಮುಂದಾಗಿದೆ. ರುಪಿ ರೂಬೆಲ್ ಮೂಲಕ ವ್ಯವಹಾರಕ್ಕೆ ರಷ್ಯಾ ಈಗ ಗ್ಯಾರಂಟಿ ಕೇಳುತ್ತಿದೆ. ಇದಕ್ಕಾಗಿ ಪೇಪರ್ ಎಲ್‌ಸಿ(ಲೆಟರ್ ಆಫ್ ಕ್ರೆಡಿಟ್) ನೀಡಬೇಕೆಂದು ಪ್ರಸ್ತಾಪ ಮಾಡಿದೆ.
ಅಂತಾರಾಷ್ಟ್ರೀಯ ನಿರ್ಬಂಧ ಹೇರಿರುವ ಈ ಸಂದರ್ಭದಲ್ಲಿ ದಿ ಬ್ಯಾಂಕ್ ಆಫ್ ರಷ್ಯಾ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ. ಇದನ್ನೂ ಓದಿ: ಮತ್ತಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಿ – ರಷ್ಯಾ ಜೊತೆ ಭಾರತ ಚೌಕಾಶಿ
ಈಗಾಗಲೇ ಎರಡು ಬ್ಯಾಂಕುಗಳ ಅಧಿಕಾರಿಗಳು ಎರಡು ಬಾರಿ ಈ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆದರೆ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.
ಯುಎಸ್‌ಎಸ್‌ಆರ್ ವಿಭಜನೆಯಾದ ಬಳಿಕ ಭಾರತ ಮತ್ತು ರಷ್ಯಾ ನಡುವೆ ರುಪಿ ಮತ್ತು ರೂಬೆಲ್ ಮಧ್ಯೆ ವ್ಯವಹಾರ ನಡೆದಿತ್ತು. ಈಗ ಮತ್ತೆ ಈ ವ್ಯವಹಾರ ಆರಂಭಿಸಲು ಎರಡು ರಾಷ್ಟ್ರಗಳು ಮುಂದಾಗುತ್ತಿವೆ. ಒಂದು ವೇಳೆ ಈ ಎಲ್‌ಸಿ ಪ್ರಸ್ತಾಪವನ್ನು ಒಪ್ಪಿಕೊಂಡರೆ ರಷ್ಯಾದಿಂದ ಭಾರತಕ್ಕೆ ಆಮದು ಹೆಚ್ಚಾಗಲಿದೆ.
ರುಪಿ ರುಬೆಲ್ ವ್ಯವಹಾರ ಮಾಡಬೇಕಾದರೆ ರಷ್ಯನ್ ಬ್ಯಾಂಕು ಭಾರತದ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಬೇಕಾಗುತ್ತದೆ. ಭಾರತದ ಬ್ಯಾಂಕ್ ರಷ್ಯನ್ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಬೇಕಾಗುತ್ತದೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಮಾಧ್ಯಮಕ್ಕೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್
ಏನಿದು ಎಲ್‌ಸಿ?
ಎ ಲೆಟರ್ ಆಫ್ ಕ್ರೆಡಿಟ್ (LC) ಎನ್ನುವುದು ಮಾರಾಟಗಾರರಿಗೆ ಖರೀದಿದಾರನ ಪಾವತಿಯನ್ನು ಖಾತರಿಪಡಿಸುವ ದಾಖಲೆಯಾಗಿದೆ. ಇದನ್ನು ಬ್ಯಾಂಕು ನೀಡುತ್ತದೆ. ಇದು ಮಾರಾಟಗಾರರಿಗೆ ಸಕಾಲಿಕ ಮತ್ತು ಪೂರ್ಣ ಪಾವತಿಯನ್ನು ಖಚಿತಪಡಿಸುತ್ತದೆ. ಒಂದು ವೇಳೆ ಖರೀದಿದಾರನು ನೀಡಬೇಕಾದ ಹಣವನ್ನು ಪಾವತಿಸಲು ಸಾಧ್ಯವಾಗದೇ ಇದ್ದರೆ ಖರೀದಿದಾರನ ಪರವಾಗಿ ಬ್ಯಾಂಕ್ ಪೂರ್ಣ ಮೊತ್ತ ಅಥವಾ ಬಾಕಿ ಉಳಿಸಿಕೊಂಡ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.
ಖರೀದಿದಾರ ಮತ್ತು ಮಾರಾಟಗಾರನು ಪರಸ್ಪರ ವೈಯಕ್ತಿಕವಾಗಿ ಪರಿಚಯ ಇಲ್ಲದೇ ಇರುವಾಗ ಮತ್ತು ದೇಶಗಳಲ್ಲಿ ವಿಭಿನ್ನ ಕಾನೂನುಗಳು, ವಿಭಿನ್ನ ವ್ಯಾಪಾರ ಪದ್ಧತಿಗಳಿದ್ದಾಗ ಇದು ಜಾರಿಯಾಗುತ್ತದೆ.