– ಮತ್ತಷ್ಟು ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಗೆ ಭಾರತ ನಿರ್ಧಾರ
ಮಾಸ್ಕೋ: ಅಮೆರಿಕ ಸುಂಕ ಸಮರದ ನಡುವೆಯೂ ಹೆಚ್ಚಿನ S-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ (S-400 Air Defence Systems) ರಷ್ಯಾ, ಭಾರತ ಮಾತುಕತೆ ನಡೆಸುತ್ತಿವೆ ಎಂದು ವರದಿಯಾಗಿದೆ. ಇದು ಭಾರತ ಮತ್ತು ರಷ್ಯಾ (India – Russia) ನಡುವಿನ ಸಂಬಂಧ ಬಲಗೊಳ್ಳುತ್ತಿರುವುದಕ್ಕೆ ಉದಾಹರಣೆಯಾಗಿದೆ.
S-400 ವಾಯು ರಕ್ಷಣಾ ವ್ಯವಸ್ಥೆಗಳ ಪೂರೈಕೆಯನ್ನು ಹೆಚ್ಚಿಸಲು ರಷ್ಯಾ ಮತ್ತು ಭಾರತ ಮಾತುಕತೆ ನಡೆಸುತ್ತಿವೆ. ಭಾರತ ಈಗಾಗಲೇ ಎಸ್-400 (ಸುದರ್ಶನ ಚಕ್ರ) ಹೊಂದಿದ್ದರೂ ಇದರ ಪೂರೈಕೆ ಇನ್ನಷ್ಟು ಹೆಚ್ಚಿಸಲು ಮಾತುಕತೆ ನಡೆಯುತ್ತಿದೆ ಎಂದು ರಷ್ಯಾ ಮಿಲಿಟರಿ ವಿಭಾಗದ ಹಿರಿಯ ಅಧಿಕಾರಿ ಡಿಮಿಟ್ರಿ ಶುಗಾಯೆವ್ ತಿಳಿಸಿದ್ದಾರೆ.
2018ರಲ್ಲಿ ಭಾರತ ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ ರಷ್ಯಾದೊಂದಿಗೆ 5.5 ಶತಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಚೀನಾದ (China) ಮಿಲಿಟರಿ ಶಕ್ತಿಯನ್ನು ಎದುರಿಸುವ ಉದ್ದೇಶದಿಂದ ಅಂದು ಭಾರತ, ರಷ್ಯಾ ಜೊತೆ ಈ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದ್ರೆ ಈವರೆಗಿನ ಪೂರೈಕೆಯಲ್ಲಿ ವಿಳಂಬವಾಗಿತ್ತು. ಇದೀಗ ಈ ಒಪ್ಪಂದದ ಅಡಿಯಲ್ಲಿ ಕೊನೆಯ 2 ಘಟಕಗಳು 2026 ಮತ್ತು 2027ರ ವೇಳೆ ಭಾರತಕ್ಕೆ ಲಭ್ಯವಾಗಲಿದೆ ಎಂದು ವರದಿಗಳು ತಿಳಿಸಿವೆ.
ಆಪರೇಷನ್ ಸಿಂಧೂರದಲ್ಲಿ ಯಶಸ್ವಿ ಕಾರ್ಯಾಚರಣೆ
ಆಪರೇಷನ್ ಸಿಂಧೂರ ಸಮಯದಲ್ಲಿ ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದವು. ದೀರ್ಘ-ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯು ಪಾಕ್‌ನ ಮಿಸೈಲ್, ಡ್ರೋನ್‌ಗಳನ್ನು ಹೊಡೆದುರುಳಿಸಿದ್ದವು. ಇದಾದ ಬಳಿಕ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಂದಲೂ ಎಸ್-400 ಗೆ ಬೇಡಿಕೆ ಹೆಚ್ಚಾಗಿತ್ತು. ಪಾಕ್ ಕೂಡ ಭಾರತಕ್ಕೆ ನೀಡಿರುವ ವಾಯು ರಕ್ಷಣಾ ವ್ಯವಸ್ಥೆಯನ್ನ ತಮಗೆ ಕೊಡುವಂತೆ ಮನವಿ ಮಾಡಿಕೊಂಡಿತ್ತು.
ಸುದರ್ಶನ ಚಕ್ರ ವಿಶೇಷತೆ ಏನು?
IAF ಸೇವೆಯಲ್ಲಿ ಸುದರ್ಶನ ಚಕ್ರ ಎಂದು ಕರೆಯಲ್ಪಡುವ S-400 ಟ್ರಯಂಫ್, ವಿಶ್ವದ ಅತ್ಯಂತ ಮುಂದುವರಿದ ದೀರ್ಘ-ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ರಷ್ಯಾ ನಿರ್ಮಿತ ಮತ್ತು ಭಾರತದ ಕಾರ್ಯತಂತ್ರದ ವಾಯು ರಕ್ಷಣಾ ಕಮಾಂಡ್‌ಗೆ ಇದು ಸಂಯೋಜಿಸಲ್ಪಟ್ಟದೆ. ರಹಸ್ಯ ವಿಮಾನಗಳು, ಕ್ರೂಸ್ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಾಯುಗಾಮಿ ಬೆದರಿಕೆಗಳನ್ನು ಪತ್ತೆಹಚ್ಚುವ ಮತ್ತು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಏಕಕಾಲಕ್ಕೆ 80 ಗುರಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಇದಕ್ಕಿದೆ.
ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಗೆ ನಿರ್ಧಾರ
ಇನ್ನೂ ಟ್ರಂಪ್ ಸುಂಕದ ಬೆದರಿಕೆಗೆ ಡೋಂಟ್ ಕೇರ್ ಎಂದಿರುವ ಭಾರತ, ರಷ್ಯಾದಿಂದ ಇನ್ನಷ್ಟು ರಿಯಾಯಿತಿ ದರದಲ್ಲಿ ಹೆಚ್ಚಿನ ಪ್ರಮಾಣದ ಕಚ್ಚಾತೈಲ ಖರೀದಿಗೆ ನಿರ್ಧರಿಸಿದೆ. ಇದರಿಂದ ಭಾರತಕ್ಕೆ ಹೆಚ್ಚಿನ ಉಳಿತಾಯ ಆಗಲಿದೆ ಎಂದು ತಿಳಿದುಬಂದಿದೆ.