ಸಿನಿಮಾ ನೋಡೋದಕ್ಕೆ ಕೆಲ ಗಂಡಸ್ರು ಎಣ್ಣೆ ಹೊಡ್ಕೊಂಡು ಥಿಯೇಟರ್‍ಗೆ ಬರೋದನ್ನು ನೋಡಿದ್ವಿ. ಆದರೆ ಕಳೆದೊಂದು ವಾರದಿಂದ 90 ಬಿಡೋದಕ್ಕೆ ಥಿಯೇಟರ್ ಒಳಗಡೆನೇ ಬರುತ್ತಿದ್ದಾರೆ. ಅವ್ರಲ್ಲಿ ಡೈಲಿ ಗುಂಡಾಕೋರು ಇದ್ದಾರೆ, ವೀಕ್ಲಿ ಡ್ರಾಪ್ಸ್ ತಗೊಳ್ಳೋರು ಇದ್ದಾರೆ, ಅಕೇಷನಲಿ ಕರುಳು ತಂಪು ಮಾಡೋರು ಇದ್ದಾರೆ, ಇಲ್ಲಿತನಕ ಬಾಟ್ಲು ತಳಕುಟ್ಟದೇ ಇರೋರು ಇದ್ದಾರೆ. ಅಚ್ಚರಿ ಅಂದರೆ ಇವರಲ್ಲಿ ಎಷ್ಟೋ ಮಂದಿ ಥಿಯೇಟರ್ ಗೆ ಬಂದು ಹೋದ್ಮೇಲೆ ಇನ್ಮೇಲೆ ಕುಡಿಬಾರದು ಅಂತ ಡಿಸೈಡ್ ಮಾಡಿದ್ದಾರೆ. ಸಂಜೆ ಏಳೂವರೆ ಆದ ತಕ್ಷಣ ತುಟಿ ಒಣಗ್ತು ಅನ್ನೋ ಕಾರಣಕ್ಕೆ ಬಾರ್ ಕಡೆ ಹೋಗಬಾರದು ಅಂತ ಫಿಕ್ಸ್ ಆಗಿದ್ದಾರೆ. ಅಷ್ಟಕ್ಕೂ, ಈ ಗುಂಡೈಕ್ಳು ದಿಢೀರ್ ಇಂತಹದ್ದೊಂದು ದೃಢ ನಿರ್ಧಾರ ಕೈಗೊಳ್ಳೋದಕ್ಕೆ ಕಾರಣ `90 ಬಿಡಿ ಮನೀಗ್ ನಡಿ’ ಚಿತ್ರ.
Advertisement
`90 ಬಿಡಿ ಮನೀಗ್ ನಡಿ’ (90 Bidi Manega Nadi) ವೈಜನಾಥ್ ಬಿರಾದರ್ ನಾಯಕನಾಗಿ ಅಭಿನಯಿಸಿರುವಂತಹ ಚಿತ್ರ. ಇದು ಇವರ 500ನೇ ಚಿತ್ರ ಎಂಬುದು ಮತ್ತೊಂದು ವಿಶೇಷ. 70ರ ದಶಕದಲ್ಲಿ ಬಣ್ಣದ ಜಗತ್ತಿಗೆ ಎಂಟ್ರಿಕೊಟ್ಟರು. ಈಗ 70ನೇ ವಯಸ್ಸಲ್ಲಿ ಹೀರೋ ಆಗಿ ಗಾಂಧಿನಗರದಲ್ಲಿ ಕಟೌಟ್ ಹಾಕಿಸಿಕೊಂಡಿದ್ದಾರೆ. ಸಣ್ಣಪುಟ್ಟ ಅವಕಾಶ ಸಿಕ್ಕರೆ ಸಾಕು ಸಿಲಿಕಾನ್ ಸಿಟಿಯಲ್ಲಿ ಜೀವನ ಮಾಡ್ತೀನಿ ಅಂತ ಬೀದರ್ ನಿಂದ ಬೆಂಗಳೂರಿಗೆ ಬಂದ ಬಿರಾದರ್ (Vaijnath Biradar), ಸಿನಿಮಾಲೋಕದಲ್ಲಿ ಯಾರೂ ತಿಕ್ಕಿ ಅಳಿಸಲಾಗದ ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ 40 ವರ್ಷದಲ್ಲಿ ಭಿಕ್ಷುಕ, ಕುಡುಕ, ಪೊಲೀಸ್ ಹೀಗೆ ತರಹೇವಾರಿ ಪೋಷಕ ಪಾತ್ರಗಳಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಂದು 4 ದಶಕಗಳು ಕಳೆದ್ರೂ, ಬೇಡಿಕೆ ಕಳೆದುಕೊಳ್ಳದೇ ಸಿನಿದುನಿಯಾದಲ್ಲಿ ನಾಗಾಲೋಟ ಮುಂದುವರೆಸಿದ್ದಾರೆ. ಕೊನೆಗೆ `90 ಬಿಡಿ ಮನೀಗ್ ನಡಿ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಟಿದ್ದಾರೆ. ಬೆಳ್ಳಿಭೂಮಿ ಮೇಲೆ ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿರುವ ಖುಷಿಯಲ್ಲಿರುವ ಬಿರಾದರ್, ನನ್ನನ್ನು ನಂಬಿ ದುಡ್ಡುಹಾಕಿದ ನಿರ್ಮಾಪಕರು ಸೇಫ್ ಆಗ್ಬೇಕು. ಅವರು ಹಾಕಿದ ಬಂಡವಾಳ ವಾಪಾಸ್ ಆಗಿ ಲಾಭ ಬಂದರೆ ಅದಕ್ಕಿಂತ ಯಶಸ್ಸು ಮತ್ತೊಂದಿಲ್ಲ ಅಂತಾರೆ.
Advertisement
Advertisement
ನಾಗರಾಜ್ ಅರೆಹೊಳೆ (Nagaraj Arehole) ಹಾಗೂ ಉಮೇಶ್ ಬಾದರದಿನ್ನಿ (Umesh Badardinni) ಈ ಭಾರಿ ಜಂಟಿಯಾಗಿ `90 ಬಿಡಿ ಮನೀಗ್ ನಡಿ’ ಚಿತ್ರ ನಿರ್ದೇಶನ ಮಾಡಿದ್ದಾರೆ. ರತ್ನಮಾಲ ಬಾದರದಿನ್ನಿ ಅವ್ರು ಅಮ್ಮ ಟಾಕೀಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿಯೇ ಚಿತ್ರ ತೆರೆಗೆ ತಂದಿದ್ದಾರೆ. ಜೂನ್ 29ರಂದು ಈ ಮೂವೀ ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ಕನ್ನಡ ಕಲಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕುಡಿತದಿಂದ ಏನೆಲ್ಲಾ ದುಷ್ಪರಿಣಾಮಗಳಾಗುತ್ತವೆ ಎಂಬುದನ್ನು ತೋರಿಸಿಕೊಟ್ಟ ಈ ಸಿನಿಮಾಗೆ ಮಹಿಳೆಯರು ಜೈಕಾರ ಹಾಕ್ತಿದ್ದಾರೆ. `ಇವತ್ತೆ ಲಾಸ್ಟು ಗುರು, ನಾಳೆಯಿಂದ ನಾನು ಎಣ್ಣೆ ಹೊಡಿಯಲ್ಲ ಅಂತ’ ಕೆಲ ಸುರಪಾನ ಪ್ರಿಯರು ಷರಾ ಬರೆದು ಥಿಯೇಟರ್ ನಿಂದ ಹೊರನಡೆಯುತ್ತಿದ್ದಾರೆ. ಒಂದು ಸಿನಿಮಾದ ಗೆಲುವಿಗೆ ಇದಕ್ಕಿಂತ ಇನ್ನೇನು ಬೇಕು. ಇದನ್ನೂ ಓದಿ:ಡೆವಿಲ್ ಕಥೆ ಹೇಳಲು ಸಜ್ಜಾದ ತೆಲುಗಿನ ನಟ ಕಲ್ಯಾಣ್ ರಾಮ್
Advertisement
ನಮ್ಮ ಸಿನಿಮಾ ಬರೀ ಮನರಂಜನೆಗೆ ಸೀಮಿತವಾಗಬಾರದು, ನಮ್ಮ ಚಿತ್ರದಿಂದ ಸಮಾಜಕ್ಕೆ ಏನಾದರೊಂದು ಸಂದೇಶ ಕೊಡಬೇಕು. ಅದರಿಂದ ನಾಲ್ಕಾರು ಜನ ಬದಲಾಗಬೇಕು ಎನ್ನುವ ಉದ್ದೇಶವಿಟ್ಟುಕೊಂಡು ನಾಗರಾಜ್ ಅರೆಹೊಳೆ, ಉಮೇಶ್ ಬಾದರದಿನ್ನಿ ಹಾಗೂ ರತ್ನಮಾಲ ಬಾದರದಿನ್ನಿಯವರು (Ratnamala Badaradinni) `90 ಬಿಡಿ ಮನೀಗ್ ನಡಿ’ ಚಿತ್ರ ಮಾಡಿದ್ದರು. ಯಾವ ಕಮರ್ಷಿಯಲ್ ಚಿತ್ರಕ್ಕೂ ಕಮ್ಮಿಯಿಲ್ಲದಂತೆ ತೆರೆಮೇಲೆ ಕಟ್ಟಿಕೊಟ್ಟಿದ್ದರು. ಸಿನಿಮಾ ಉತ್ತರ ಕರ್ನಾಟಕ ಸೊಗಡಿನಲ್ಲಿದ್ದಿದ್ದರಿಂದ ಎಲ್ಲಾ ಭಾಗದ ಜನರಿಗೂ ರೀಚ್ ಆಗುತ್ತೋ, ಇಲ್ಲವೋ ಎನ್ನುವ ಸಣ್ಣ ಅಳುಕು ಚಿತ್ರತಂಡದೊಳಗೆ ಮನೆಮಾಡಿದ್ದುಂಟು. ಆದರೆ, ಆ ಆತಂಕ ಈಗ ದೂರವಾಗಿದೆ. ಎಲ್ಲಾ ಕಡೆಯಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಥಿಯೇಟರ್ ಮಾಲೀಕರು ಸಿನಿಮಾ ಹಾಕುವಂತೆ ಕೇಳ್ತಿದ್ದಾರಂತೆ. ಹೀಗಾಗಿ, ಎ ಮತ್ತು ಬಿ ಸೆಂಟರ್ ಅಷ್ಟೇ ಅಲ್ಲದೇ ಸಿ ಸೆಂಟರ್ ನಲ್ಲೂ ಸಿನಿಮಾವನ್ನೂ ಚಿತ್ರಪ್ರೇಮಿಗಳಿಗೆ ತಲುಪಿಸ್ಬೇಕು ಎನ್ನುವ ಪ್ಲ್ಯಾನ್ ನಮಗಿದೆ ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಅರೆಹೊಳೆ
ಅಂದ್ಹಾಗೇ, ಮೊದಲ ವಾರ ಈ ಚಿತ್ರ 60 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಎರಡನೇ ವಾರಕ್ಕೆ 20 ಚಿತ್ರಮಂದಿರಗಳು ಹೊಸದಾಗಿ ಸೇರ್ಪಡೆಯಾಗಿದ್ದು, ಒಟ್ಟು 80ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ `90 ಬಿಡಿ ಮನೀಗ್ ನಡಿ’ ಸಿನಿಮಾ ಪ್ರದರ್ಶನ ಕಾಣ್ತಿದೆ. ಒಂದೇ ವಾರಕ್ಕೆ ಥಿಯೇಟರ್ ನಿಂದ ನಮ್ಮ ಸಿನಿಮಾನ ಎತ್ತಂಗಡಿ ಮಾಡ್ಬಿಟ್ಟರು ಅಂತ ಕೆಲ ಸಿನಿಮಾ ಟೀಮ್‍ಗಳು ಗೋಳಾಡೋ ಸುದ್ದಿಯನ್ನ ಕೇಳ್ತಿದ್ವಿ. ಆದರೆ, `90 ಬಿಡಿ ಮನೀಗ್ ನಡಿ’ ಚಿತ್ರತಂಡ ಥಿಯೇಟರ್ ಹೆಚ್ಚುವರಿ ಆಗಿರುವ ಬಗ್ಗೆ ಖುಷಿ ಹಂಚಿಕೊಂಡಿದೆ. ಫ್ಯಾಮಿಲಿ ಆಡಿಯನ್ಸ್ ಥಿಯೇಟರ್ ಗೆ ಎಂಟ್ರಿಯಾಗ್ತಿದ್ದು ಚಿತ್ರಕ್ಕೆ ಬಲ ಬಂದಂತಾಗಿದೆ. ಮಹಿಳೆಯರು ಥಿಯೇಟರ್‍ಗೆ ಬಂದು ಸಿನಿಮಾ ನೋಡ್ತಿರುವುದು, ಗುಂಡೈಕ್ಳು ಇನ್ಮೇಲೆ ಕುಡಿಯೋದು ಬಿಡ್ತೀವಿ ಅಂತೇಳ್ತಿರುವುದು ಮಹಿಳಾ ನಿರ್ಮಾಪಕಿ ರತ್ನಮಾಲ ಬಾದರದಿನ್ನಿಯವರಿಗೆ ಸಾರ್ಥಕ ಭಾವನೆ ಮೂಡುವಂತೆ ಮಾಡಿದೆ.
ಕೈ ಹಿಡಿದ ಪ್ರೇಕ್ಷಕರಿಗೆ ಧನ್ಯವಾದ ಹೇಳುವ ಸಲುವಾಗಿ ಚಿತ್ರತಂಡ ರಾಜ್ಯದ ಕೆಲವು ಚಿತ್ರಮಂದಿರಗಳಿಗೆ ಭೇಟಿ ನೀಡ್ತಿದೆ. ಇದೇ ಶುಕ್ರವಾರ ಮೈಸೂರು ಹಾಗೂ ತುಮಕೂರಿಗೆ ವಿಸಿಟ್ ಮಾಡಿ ಸಿನಿಮಾಪ್ರೇಮಿಗಳಿಗೆ ಥ್ಯಾಂಕ್ಸ್ ಹೇಳಲಿರುವ `90 ಬಿಡಿ ಮನೀಗ್ ನಡಿ’ ಚಿತ್ರತಂಡ, ಶನಿವಾರದಂದು ಚಿತ್ರದುರ್ಗ, ದಾವಣಗೆರೆ, ಭದ್ರಾವತಿಗೆ ಭೇಟಿನೀಡುವ ಯೋಜನೆ ಹಾಕಿಕೊಂಡಿದೆ. ಒಳ್ಳೆ ಸಿನಿಮಾ ಮಾಡಿದರೆ ಕನ್ನಡಿಗರು ಕೈ ಬಿಡಲ್ಲ ಎನ್ನುವ ಭರವಸೆ ಈ ಸಿನಿಮಾದಿಂದ ಮತ್ತೆ ಚಿಗುರೊಡೆದಿದೆ.
Web Stories