ಸರ್ಕಸ್ ಎಲ್ಲಾ ಮುಗೀತು ಇನ್ನೇನಿದ್ರೂ ಸುನಾಮಿನೇ ಹೀಗಂತ ರೂಪೇಶ್ ಶೆಟ್ಟಿ (Rupesh Shetty) ಹೇಳುವ ಮೊದಲೇ ಅವರ ಅಭಿಮಾನಿ ಬಳಗ ಸಾರಿ ಸಾರಿ ಹೇಳ್ತಿದೆ. ‘ಶೆಟ್ರೆ ಅಖಾಡನೂ ನಿಮ್ದೆ, ಆಟನೂ ನಿಮ್ದೆ ನುಗ್ತಾಯಿರಿ’ ಅಂತ ಧೈರ್ಯ ತುಂಬುತ್ತಿದೆ. ಭಕ್ತಬಳಗ ಇಷ್ಟೊಂದು ಸ್ಫೂರ್ತಿ ತುಂಬುವಾಗ, ಅಭಿಮಾನಿ ದೇವರುಗಳು ಇಷ್ಟೊಂದು ಸ್ಥೈರ್ಯ ಹೇಳುವಾಗ ಶೆಟ್ರು ಸುಮ್ನಿರೋದಕ್ಕೆ ಸಾಧ್ಯಾವಾ? ಯಾವುದೇ ಕಾರಣಕ್ಕೂ ಇಲ್ಲ. ಹೀಗಾಗಿಯೇ ರಾಕ್‍ಸ್ಟಾರ್ ರೂಪೇಶ್ ಶೆಟ್ರು ಮೈ ಕೊಡವಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಹೊಸ ಹುರುಪಿನಿಂದ, ಹೊಸ ಹುಮ್ಮಸ್ಸಿನಿಂದ ಹುಟ್ಟುಹಬ್ಬದಂದೇ (Birthday) ಕಣಕ್ಕಿಳಿದಿದ್ದಾರೆ. ಅದು `ಅಧಿಪತ್ರ’ ಹೆಸರಿನ ಹೊಸ ಚಿತ್ರದ ಮೂಲಕ ಎನ್ನುವುದು ವಿಶೇಷ
Advertisement
ಅಂದ್ಹಾಗೇ, ಇವತ್ತು ರಾಕ್‍ಸ್ಟಾರ್ ರೂಪೇಶ್ ಶೆಟ್ಟಿಯವರ ಹುಟ್ಟುಹಬ್ಬ. ಬರ್ತ್‍ಡೇ ಸಂಭ್ರಮದಲ್ಲಿರೋ ಶೆಟ್ರಿಗೆ `ಅಧಿಪತ್ರ’ (Adhipatra) ಉಡುಗೊರೆಯಾಗಿ ಸಿಕ್ಕಿದೆ. ಹುಟ್ಟುಹಬ್ಬದಂದು ಅಧಿಕೃತವಾಗಿ ಚಿತ್ರ ಘೋಷಣೆಯಾಗಿದೆ. ಚಯನ್ ಶೆಟ್ಟಿ (Chayan Shetty) ಅನ್ನೋರು ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಕೆ.ಆರ್ ಸಿನಿಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಕನ್ನಡದಲ್ಲಿ ಈ ಚಿತ್ರ ಮೂಡಿಬರಲಿದೆ. ಸದ್ಯಕ್ಕೆ ಇಷ್ಟು ಮಾಹಿತಿಯನ್ನ ಪೋಸ್ಟರ್ ಮೂಲಕ ಹಂಚಿಕೊಂಡಿರುವ ಚಿತ್ರತಂಡ, ಶೀರ್ಷಿಕೆಯಿಂದಲೇ ಚಿತ್ರಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಮಗೆಲ್ಲ ಅಧಿಪತಿ ಬಗ್ಗೆ ಗೊತ್ತಿದೆ, ಇದೇನಿದು `ಅಧಿಪತ್ರ’ ಅಂತ ಕಲಾಭಿಮಾನಿಗಳು ಕುತೂಹಲದ ಹುಳಬಿಟ್ಕೊಂಡು ತಲೆಕೆಡಿಸಿಕೊಳ್ಳುವಂತಾಗಿದೆ.
Advertisement
Advertisement
ಟೈಟಲ್ ಮೂಲಕವೇ ಇಷ್ಟೊಂದು ಕುತೂಹಲ ಮೂಡಿಸಿರೋ ರೂಪೇಶ್ ಶೆಟ್ರು `ಅಧಿಪತ್ರ’ನಾಗಿ ಯಾವ ಅವತಾರ ತಾಳುತ್ತಾರೋ? `ಅಧಿಪತ್ರ’ನ ಪಕ್ಕದಲ್ಲಿ ಅದ್ಯಾವ ಮುದ್ದುಬೊಂಬೆ ನಾಯಕಿಯಾಗಿ ನಿಂತು ಸೌಂಡ್ ಮಾಡುತ್ತಾಳೋ ಗೊತ್ತಿಲ್ಲ. ಆದರೆ, ಸರ್ಕಸ್ ಮೂಲಕ ರೂಪೇಶ್ ಶೆಟ್ರು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಬಿಗ್‍ಬಾಸ್ ಮನೆಯಿಂದ ಹೊರಬಂದು `ಸರ್ಕಸ್’ ಹೆಸರಿನ ಸಿನಿಮಾಗೆ ಬಣ್ಣ ಹಚ್ಚಿದ ರೂಪೇಶ್, ನಿರ್ದೇಶನ, ನಿರ್ಮಾಣದ ಜವಬ್ದಾರಿ ಹೊತ್ತುಕೊಂಡರು. ತಾನೇನು, ತನ್ನ ತಾಕತ್ತೇನು ಎಂಬುದನ್ನ ಪ್ರೂ ಮಾಡಲು ಪಣತೊಟ್ಟರು. ಅದರಂತೇ ತುಳು ಭಾಷೆಯಲ್ಲಿ `ಸರ್ಕಸ್’ ಮಾಡಿ ಸಪ್ತಸಾಗರ ದಾಟಿದ್ದಾರೆ. ಕರ್ನಾಟಕ ಮಾತ್ರವಲ್ಲ ದುಬೈ, ಅಬುದಾಬಿ, ಪುಣೆ, ಕತಾರ್ ಸೇರಿದಂತೆ ಹತ್ತಾರು ಕಂಟ್ರಿಗಳಲ್ಲಿ `ಸರ್ಕಸ್’ ರಿಲೀಸ್ ಮಾಡಿ ಸಕ್ಸಸ್ ಕಂಡಿದ್ದಾರೆ. ಇದನ್ನೂ ಓದಿ:D51: ಧನುಷ್ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ಹೀರೋಯಿನ್
Advertisement
ಅಚ್ಚರಿ ಅಂದರೆ `ಸರ್ಕಸ್’ ಬಿಡುಗಡೆಗೊಂಡು 50 ದಿನ ಕಳೆದಿದೆ, ಆದರೆ, ಥಿಯೇಟರ್ ನಲ್ಲಿ ಸಿನಿಮಾ ಈಗಲೂ ಹೌಸ್‍ಫುಲ್ ಪ್ರದರ್ಶನ ಕಾಣ್ತಿದೆ. ರೂಪೇಶ್ ಶೆಟ್ರ ಶ್ರಮಕ್ಕೆ ಯಶಸ್ಸಿನ ಜೊತೆಗೆ ಝಣಝಣ ಕಾಂಚಾಣವೂ ಹರಿದುಬರುತ್ತಿದೆ. ಇದರ ಬೆನ್ನಲ್ಲೇ ರಾಕ್‍ಸ್ಟಾರ್ ರೂಪೇಶ್ `ಅಧಿಪತ್ರ’ನಾಗಿ ಗಂಧದಗುಡಿಗೆ ಅಡಿಯಿಡಲು ರೆಡಿಯಾಗಿದ್ದಾರೆ. ತುಳು ಮಾತ್ರವಲ್ಲ ಕನ್ನಡದಲ್ಲೂ ಒಳ್ಳೊಳ್ಳೆ ಸಿನಿಮಾ ಮಾಡಬೇಕು ಅದನ್ನು ಕರ್ನಾಟಕದ ಮೂಲೆಮೂಲೆಗೆ ತಲುಪಿಸಬೇಕು. ಹೊರರಾಜ್ಯ, ಹೊರದೇಶದಲ್ಲೂ ನನ್ನ ಸಿನಿಮಾಗಳು ಸದ್ದು ಮಾಡಬೇಕು ಎನ್ನುವ ಕನಸು ಕಂಡಿದ್ದಾರೆ. ಈಗಾಗಲೇ ಸರ್ಕಸ್ ಮೂಲಕ ಗಡಿದಾಟಿ ಗಹಗಹಿಸಿರೋ ರೂಪೇಶ್, ಕನ್ನಡ ಸಿನಿಮಾದ ಮೂಲಕ ಸಪ್ತಸಾಗರ ದಾಟುವ ಹಂಬಲದಲ್ಲಿದ್ದಾರೆ. ಅದನ್ನು `ಅಧಿಪತ್ರ’ದ ಮೂಲಕ ಈಡೇರಿಸಿಕೊಳ್ತಾರಾ ಕಾದುನೋಡಬೇಕಿದೆ.
ಅಧಿಪತ್ರ ಸಿನಿಮಾದ ಶೂಟಿಂಗ್ ಸೆಪ್ಟೆಂಬರ್‍ನಿಂದ ಆರಂಭಗೊಳ್ಳಲಿದೆ. ಡೇಂಜರ್ ಝೋನ್, ಸ್ಮೈಲ್ ಪ್ಲೀಸ್, ನಿಶ್ಯಬ್ದ-2, ಅನುಷ್ಕಾ ಸೇರಿದಂತೆ ಕನ್ನಡದಲ್ಲಿ ಕೆಲ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಆದರೆ, ತುಳು ಸಿನಿಮಾಗಳಿಂದ ಸಿಕ್ಕಂತಹ ಯಶಸ್ಸು ರೂಪೇಶ್‍ಗೆ ಕನ್ನಡ ಚಿತ್ರಗಳಿಂದ ಸಿಕ್ಕಿಲ್ಲ. ಹೀಗಾಗಿ, ಕನ್ನಡ ಭಾಷೆಯ ಸಿನಿಮಾದ ಮೂಲಕ ದೊಡ್ಡ ಮಟ್ಟದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಬಿಗ್‍ಬಾಸ್ ಸೀಸನ್ 9 ವಿನ್ನರ್ ಆದ್ಮೇಲೆ ರೂಪೇಶ್ ಶೆಟ್ಟಿ ಕರ್ನಾಟಕದ ಮೂಲೆ ಮೂಲೆ ತಲುಪಿದ್ದಾರೆ. ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಹೀಗಾಗಿ, ಮುಂದಿನ ಕನ್ನಡ ಸಿನಿಮಾಗಳ ಮೂಲಕ ರೂಪೇಶ್ ಶೆಟ್ಟಿ ಗೆದ್ದು ಬೀಗೋದು ಗ್ಯಾರಂಟಿ ಎನ್ನುವ ಭರವಸೆಯಿದೆ. ಹತ್ತು ವರ್ಷದ ಸರ್ಕಸ್‍ಗೆ ಸಕ್ಸಸ್ ಸಿಕ್ಕಿದೆ. ಇನ್ನೇನಿದ್ರು ಸುನಾಮಿ ಎಬ್ಬಿಸಿ ಸಾಮ್ರಾಜ್ಯ ಕಟ್ಟೋದಷ್ಟೇ ಬಾಕಿ.
Web Stories