ಹಾಸನ: ಭಾನುವಾರ ಬೆಳಗ್ಗೆ ಆರಂಭಗೊಂಡಿದ್ದ ಹಾಸನಾಂಬೆ ದೇವಾಲಯದ ಹುಂಡಿ ಎಣಿಕೆ ಕಾರ್ಯ ಸಂಜೆ ವೇಳೆ ಮುಕ್ತಾಯಗೊಂಡಿದ್ದು, ದಾಖಲೆ ಪ್ರಮಾಣದ ಆದಾಯ ಹರಿದು ಬಂದಿದೆ. ಅಲ್ಲದೇ ಹುಂಡಿ ಎಣಿಕೆ ವೇಳೆ ಭಕ್ತರ ವಿಚಿತ್ರ ಪತ್ರಗಳು ಸಿಕ್ಕಿವೆ.
ಒಂದು ಸಾವಿರ ಬೆಲೆಯ ಟಿಕೆಟ್‍ನಿಂದ 1.3 ಕೋಟಿ ರೂಪಾಯಿ, 300 ರೂಪಾಯಿ ಟಿಕೆಟ್‍ನಿಂದ 1.2ಕೋಟಿ ರೂಪಾಯಿ ಆದಾಯ ಬಂದಿದೆ. ಇನ್ನೂ ಪ್ರಸಾದದ ಆದಾಯ 70 ಲಕ್ಷ ರೂಪಾಯಿ ಬಂದಿದೆ. ಒಟ್ಟು ಈ ಬಾರಿಯ ಜಾತ್ರೆಯಲ್ಲಿ 4.14 ಕೋಟಿ ರೂ. ಆದಾಯ ಬಂದಿದೆ.
Advertisement
ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಒಟ್ಟು 50 ಜನ ಹುಂಡಿ ಎಣಿಕೆ ಮಾಡಿದ್ದರು. 4 ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಚಿಕ್ಕದು, ದೊಡ್ಡದು ಸೇರಿ ಒಟ್ಟು 16 ಹುಂಡಿಗಳಿದ್ದು, ಎಲ್ಲಾ ಹುಂಡಿಗಳ ಎಣಿಕಾ ಕಾರ್ಯ ಮುಕ್ತಾಯವಾಗಿದೆ. ಅಹೋರಾತ್ರಿ ಹಾಸನಾಂಬೆ ದರ್ಶನ ಮತ್ತು ಶೀಘ್ರ ದರ್ಶನಕ್ಕೆ 300 ರೂ. ಜೊತೆಗೆ 1 ಸಾವಿರ ರೂ. ಶುಲ್ಕ ನಿಗದಿ ಮಾಡಿದ್ದರಿಂದ ಈ ಬಾರಿ ಸುಮಾರು 5 ಕೋಟಿ ರೂ. ಅಧಿಕ ಆದಾಯವನ್ನು ನಿರೀಕ್ಷಿಸಲಾಗಿತ್ತು.
Advertisement
ಕಳೆದ ವರ್ಷ ಹಾಸನಾಂಬೆ ಜಾತ್ರೆಯಲ್ಲಿ ಸಂಗ್ರಹವಾಗಿದ್ದ 2.36 ಕೋಟಿ ರೂ. ಈವರೆಗಿನ ಅತ್ಯಧಿಕ ಆದಾಯವಾಗಿತ್ತು. ಈ ಬಾರಿ ಒಟ್ಟು 10 ದಿನಗಳ ಕಾಲ 6 ರಿಂದ 7 ಲಕ್ಷ ಭಕ್ತರು, ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.
Advertisement
ವಿಶೇಷವಾಗಿ ಹುಂಡಿ ಎಣಿಕೆ ವೇಳೆ ಭಕ್ತರ ವಿಚಿತ್ರ ಪತ್ರಗಳು ಸಿಕ್ಕಿದ್ದು, ನಾನು ಪ್ರೀತಿಸುವ ಹುಡುಗಿ ನನಗೆ ಸಿಗುವಂತೆ ಮಾಡು. ನನ್ನ ಮುಖದ ಮೊಡವೆಗಳನ್ನ ನಿವಾರಣೆ ಮಾಡು. ನನ್ನ ಸೌಂದರ್ಯವನ್ನ ಹೆಚ್ಚಿಸು. ಅತ್ತೆ ಮನೆ ಕಿರುಕುಳದಿಂದ ಪಾರು ಮಾಡು. ನನ್ನ ರೋಗ ನಿವಾರಿಸು ಎಂಬ ನಾನಾ ಕೋರಿಕೆಗಳನ್ನು ದೇವಿ ಬಳಿ ಭಕ್ತರು ಕೇಳಿಕೊಂಡಿದ್ದಾರೆ.