ಓರ್ವ ನಟ ಒಂದು ಬಗೆಯಲ್ಲಿ ಸದ್ದು ಮಾಡಿದರೆ, ಆತನಿಗಾಗಿ ಅಂಥಾದ್ದೇ ಪಾತ್ರ ಸೃಷ್ಟಿಸಿ ಸೀಮಿತ ಚೌಕಟ್ಟಿನಲ್ಲಿ ಕಟ್ಟಿ ಹಾಕುವ ಪ್ರಯತ್ನ ನಡೆಯೋದೇ ಹೆಚ್ಚು. ಕನ್ನಡದಲ್ಲಿಯೂ ಕೂಡಾ ಅಂಥಾ ಒಂದಷ್ಟು ಉದಾಹರಣೆಗಳಿದ್ದಾವೆ. ಇದೆಲ್ಲದರಾಚೆಗೆ ಪ್ರತೀ ಕಲಾವಿದರೊಳಗೂ ಸಿನಿಮಾದಿಂದ ಸಿನಿಮಾಕ್ಕೆ ಚಹರೆ ಬದಲಿಸುವ, ಬೇರೆ ಬೇರೆ ಪಾತ್ರಗಳಿಗೆ ಒಡ್ಡಿಕೊಳ್ಳುವ ತುಡಿತವಿರುತ್ತದೆ. ಅದನ್ನು ನಿರ್ದೇಶಕರಾದವರು ಅರ್ಥ ಮಾಡಿಕೊಂಡುಬಿಟ್ಟರೆ ಪ್ರೇಕ್ಷಕರ ಪಾಲಿಗೆ ಅಚ್ಚರಿ ನಿಕ್ಕಿ. ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ರುದ್ರ ಗರುಡ ಪುರಾಣ ಚಿತ್ರದ ನಿರ್ದೇಶಕ ನಂದೀಶ್ ಅಂಥಾದ್ದೊಂದು ಸೂಕ್ಷ್ಮ ನಡೆ ಅನುಸರಿಸಿದ್ದಾರೆ. ಅದರ ಫಲವಾಗಿಯೇ ಹಾಸ್ಯ ಪಾತ್ರಗಳಿಗೆ ಬ್ರ್ಯಾಂಡ್ ಆಗಿರುವ ಶಿವರಾಜ್ ಕೆ.ಆರ್ ಪೇಟೆ ಹೊಸ ಬಗೆಯ ಪಾತ್ರವೊಂದರಲ್ಲಿ ಪ್ರೇಕ್ಷಕರನ್ನು ಬೆರಗಾಗಿಸಲಿದ್ದಾರೆ!
ಶಿವರಾಜ್ ಕೆ.ಆರ್. ಪೇಟೆ (Shivaraj K R Pete) ಬಹುಮುಖ ಪ್ರತಿಭೆ. ಆದರೆ, ಅವರೊಳಗಿನ ನಟ ಹೊರಜಗತ್ತನ್ನು ಆವರಿಸಿಕೊಂಡಿದ್ದದ್ದು ಕಾಮಿಡಿ ಕಿಲಾಡಿಗಳು ಶೋ ಮೂಲಕ. ಆ ನಂತರದಲ್ಲಿ ತಮ್ಮಿಚ್ಚೆಯಂತೆಯೇ ಚಿತ್ರರಂಗಕ್ಕೆ ಆಗಮಿಸಿದ್ದ ಅವರಿಗೆ ಸಾಲು ಸಾಲು ಅವಕಾಶಗಳು ಸಿಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಅವರು ಹಾಸ್ಯದಾಚೆಯ ಪಾತ್ರಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ರುದ್ರ ಗರುಡ ಪುರಾಣದಲ್ಲಿಯೂ (Rudra Garuda Purana) ಅಂಥಾದ್ದೇ ಒಂದು ಮಹತ್ವದ ಪಾತ್ರ ಸಿಕ್ಕ ಖುಷಿ ಶಿವರಾಜ್ ಅವರಲ್ಲಿದೆ. ಈ ಪಾತ್ರದ ಗುಣ ಲಕ್ಷಣಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಆದರೆ, ಶಿವರಾಜ್ ಇಲ್ಲಿ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದಾರೆಂಬ ಸಣ್ಣ ಸುಳಿವನ್ನಷ್ಟೇ ಜಾಹೀರು ಮಾಡಲಾಗಿದೆ. ಇದನ್ನೂ ಓದಿ: ನಿರ್ಮಾಪಕರ ಕಣ್ಣಲ್ಲಿ ಮಿನುಗಿದ ರುದ್ರ ಗರುಡ ಪುರಾಣ!
Advertisement
Advertisement
ಶಿವರಾಜ್ ಕೆ.ಆರ್ ಪೇಟೆ ಬಣ್ಣದ ಲೋಕದತ್ತ ಬೆರಗಿಟ್ಟುಕೊಂಡು ಬೆಂಗಳೂರು ತಲುಪಿದ ಆರಂಭದಲ್ಲಿ ಜೊತೆಯಾಗಿದ್ದವರು ನಂದೀಶ್. ಅಂದಿನಿಂದ ಇಂದಿನವರೆಗೂ ಜೊತೆಯಾಗಿರೋ ನಂದೀಶ್ ಅವರಿಗೆ ತನ್ನ ಗೆಳೆಯನ ನಟನೆಯ ತಾಕತ್ತಿನ ಸ್ಪಷ್ಟ ಪರಿಚಯವಿತ್ತು. ಈ ಕಾರಣದಿಂದಲೇ ಅವರನ್ನು ಗಂಭೀರವಾದ, ಅತ್ಯಂತ ಮಹತ್ವದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ತರಲು ಪ್ರಯತ್ನಿಸಿದ್ದಾರೆ. ಬಹುಶಃ ರುದ್ರ ಗರುಡ ಪುರಾಣದಲ್ಲಿನ ಶಿವರಾಜ್ ಕೆ.ಆರ್ ಪೇಟೆ ಗೆಟಪ್ಪು ಕಂಡು ಎಲ್ಲರೂ ಅಚ್ಚರಿಗೀಡಾಗೋದು ಖಾತರಿ. ಇದು ತನ್ನ ಇಷ್ಟೂ ವರ್ಷಗಳ ವೃತ್ತಿ ಬದುಕಿನಲ್ಲಿ ಬೇರೆಯದ್ದೇ ಖದರ್ ಹೊಂದಿರೋ ಪಾತ್ರವೆಂಬ ಖುಷಿಯೂ ಅವರಲ್ಲಿದೆ.
Advertisement
ಸದಾ ಭಿನ್ನ ದಿಕ್ಕಿನಲ್ಲಿ ಆಲೋಚಿಸುತ್ತಾ, ಹೊಸಾ ಬಗೆಯ ಕಥೆ ಮುಟ್ಟುವ ಗುಣದವರು ನಂದೀಶ್. ಓರ್ವ ಜೊತೆಗಾರನಾಗಿ ನಂದೀಶ್ ಅವರ ಪ್ರತಿಭೆಯ ಅರಿವಿರುವ ಶಿವರಾಜ್ ಕೆ.ಆರ್ ಪೇಟೆ ಅವರಿಗೆ ಗೆಳೆಯನ ಚಿತ್ರದಲ್ಲಿ ಭಿನ್ನ ಪಾತ್ರವಾದ ಖುಷಿಯಿದೆ. ಈ ಹಿಂದೆ ದರ್ಶನ್ ನಟಿಸಿದ್ದ ರಾಬರ್ಟ್ ಚಿತ್ರದಲ್ಲಿಯೂ ಬೇರೆ ತೆರನಾದ ಪಾತ್ರ ಶಿವರಾಜ್ ಅವರಿಗೆ ಸಿಕ್ಕಿತ್ತು. ನಾನು ಮತ್ತು ಗುಂಡ ಚಿತ್ರದಲ್ಲಿಯೂ ಹಾಸ್ಯದ ಪರಿಧಿಯಾಚೆಗಿನ ಭಾವನಾತ್ಮಕ ಪಾತ್ರವಾಗಿ ಅವರು ಕಾಣಿಸಿಕೊಂಡಿದ್ದರು. ರುದ್ರ ಗರುಡ ಪುರಾಣದಲ್ಲಿಯಂತೂ ಎಲ್ಲರಿಗೂ ಆಶ್ಚರ್ಯವಾಗಬಲ್ಲ ಪಾತ್ರದಲ್ಲಿ, ಗೆಟಪ್ಪಿನಲ್ಲಿ ಶಿವರಾಜ್ ಕೆ.ಆರ್ ಪೇಟೆ ದರ್ಶನವಾಗಲಿರೋದು ಪಕ್ಕಾ! ಇದನ್ನೂ ಓದಿ: ರುದ್ರ ಗರುಡ ಪುರಾಣ; ಭಿನ್ನ ಕಥೆಯ ಚುಂಗು ಹಿಡಿದು ಬಂದ್ರು ನಂದೀಶ್!
Advertisement
ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ವಿಜಯ್ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ರುದ್ರ ಗರುಡ ಪುರಾಣ ಎಲ್ಲ ವರ್ಗಗಳ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಹಾರರ್ ಸಿನಿಮಾಗಳಿಗಾಗಿ ಹಾತೊರೆಯುವ ದೊಡ್ಡ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಹಾಗಿರುವಾಗ ಹೊಸತನದೊಂದಿಗೆ ರೂಪುಗೊಂಡಿರುವ, ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರದ ಬಗ್ಗೆ ಕುತೂಹಲ ಸಹಜವಾಗಿಯೇ ಮೂಡಿಕೊಳ್ಳುತ್ತೆ. ವಿನೋದ್ ಆಳ್ವಾ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಮುಂತಾದವರು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ಕೃಷ್ಣ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರುದ್ರ ಗರುಡ ಪುರಾಣ ಜನವರಿ 24 ರಂದು ಬಿಡುಗಡೆಗೊಳ್ಳಲಿದೆ. ಇದನ್ನೂ ಓದಿ: ಬಿಡುಗಡೆಯಾಯ್ತು `ರುದ್ರ ಗರುಡ ಪುರಾಣ’ದ ನಶೆಯೇರಿಸೋ ಸಾಂಗು!