ಈ ವರ್ಷದ ಆರಂಭದಲ್ಲಿಯೇ ಕನ್ನಡ ಚಿತ್ರರಂಗದ ದಿಕ್ಕಿಂದ ಹೊಸತನದ ಗಾಳಿ ಬಲವಾಗಿ ಬೀಸಲಾರಂಭಿಸಿದೆ. ಮಾಮೂಲು ಹಾದಿಯಾಚೆ ಹೆಜ್ಜೆಯಿಡುವ ಛಾತಿ ಹೊಂದಿರುವ ಒಂದಷ್ಟು ಯುವ ಪ್ರತಿಭಾನ್ವಿತರು ಅಚ್ಚರಿ ಮೂಡಿಸಲು ಸಜ್ಜುಗೊಂಡಿದ್ದಾರೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು `ರುದ್ರ ಗರುಡ ಪುರಾಣ’ (Rudra Garuda Purana) ಚಿತ್ರದ ನಿರ್ದೇಶಕ ನಂದೀಶ್. ರಿಷಿ ನಾಯಕನಾಗಿ ನಟಿಸಿರುವ ರುದ್ರ ಗರುಡ ಪುರಾಣ ಇದೇ ಜ.24 ರಂದು ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಈ ಮೂಲಕ ಜೇಕಬ್ ವರ್ಗಿಸ್ ಗರಡಿಯಲ್ಲಿ ಪಳಗಿಕೊಂಡಿರುವ ನಂದೀಶ್ ಭಿನ್ನ ಕಥಾನಕದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ.
ಪೃಥ್ವಿ ಸೇರಿದಂತೆ ಒಂದಷ್ಟು ಚೆಂದದ ಚಿತ್ರಗಳನ್ನು ಕನ್ನಡಕ್ಕೆ ಕೊಡಮಾಡಿರುವವರು ಜೇಕಬ್ ವರ್ಗೀಸ್. ಅವರ ನಿರ್ದೇಶನದ ಶೈಲಿಯಿಂದ ಪ್ರೇರಣೆಗೊಂಡು, ಹೊಸ ಬಗೆಯ ಕಲಿಕೆಯ ಉದ್ದೇಶದಿಂದಲೇ ದಶಕದ ಹಿಂದೆ ಜೇಕಬ್ ಅವರೊಂದಿಗೆ ಸೇರಿಕೊಂಡಿದ್ದವರು ನಂದೀಶ್. ಹಾಸನ ಮೂಲದ ನಂದೀಶ್ ಹೀಗೊಂದು ಹದಿನೇಳು ವರ್ಷದಿಂದೀಚೆಗೆ ಚಿತ್ರರಂಗದ ಭಾಗವಾಗಿದ್ದಾರೆ. ಒಂದು ಸಿನಿಮಾವನ್ನು ಯಶಸ್ವಿಯಾಗಿಸಲು ಬೇಕಾಗಿರುವ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಮನದಟ್ಟು ಮಾಡಿಕೊಂಡಿದ್ದಾರೆ. ಎಲ್ಲ ಭ್ರಮೆಗಳನ್ನು ಕಳಚಿಟ್ಟು ಇಷ್ಟೂ ವರ್ಷಗಳ ಕಾಲ ನಿಖರವಾದ ಅನುಭವವನ್ನು ದಕ್ಕಿಸಿಕೊಂಡಿದ್ದಾರೆ. ನಿರ್ದೇಶನ ಎಂದರೆ ಕಥೆಯೊಂದಕ್ಕೆ ದೃಶ್ಯರೂಪ ನೀಡುವ ಕುಸುರಿ ಕಲೆ ಅನ್ನೋದು ನಿಜ. ಆದರೆ, ನಿಜವಾದ ನಿರ್ದೇಶನವೆಂಬುದು ಬರೀ ಅಷ್ಟಕ್ಕೆ ಮಾತ್ರವೇ ಸೀಮಿತವಾದುದಲ್ಲ. ಶೇಖಡಾ ತೊಂಬತೈದು ಪರ್ಸೆಂಟಿನಷ್ಟು ಎಲ್ಲವನ್ನೂ ಸಂಭಾಳಿಸೋ ಕಲೆ ಸಿದ್ಧಿಸಿರಬೇಕಾಗುತ್ತೆ. ಅದು ಸಾಧ್ಯವಾದರೆ ನಿರ್ದೇಶನ ಎನ್ನುವುದು ಬರಿ ಐದು ಪರ್ಸೆಂಟ್ ಕೆಲಸವಷ್ಟೇ ಎಂಬ ಪ್ರಸಿದ್ಧ ಹಾಲಿವುಡ್ ನಿರ್ದೇಶಕರೊಬ್ಬರ ಮಾತಿನಿಂದ ಪ್ರಭಾವಿತರಾದವರು ನಂದೀಶ್. ಇದನ್ನೂ ಓದಿ: ಬಿಡುಗಡೆಯಾಯ್ತು `ರುದ್ರ ಗರುಡ ಪುರಾಣ’ದ ನಶೆಯೇರಿಸೋ ಸಾಂಗು!
Advertisement
Advertisement
ಈ ಕಾರಣದಿಂದಲೇ ಬಂಡವಾಳ ಹಾಕಿದ ನಿರ್ಮಾಪಕರಿಗೂ ಮೋಸವಾಗದಂತೆ, ಸಿನಿಮಾ ಕೂಡಾ ಒಳ್ಳೇ ರೀತಿಯಲ್ಲಿ ಬ್ಯುಸಿನೆಸ್ ಮಾಡುವಂತೆ ಮಾಡಬಲ್ಲ ಫಾರ್ಮುಲಾಗಳನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಸಿನಿಮಾ ಪ್ರೊಡಕ್ಷನ್, ಡಿಸ್ಟ್ರಿಬ್ಯೂಷನ್ ಸೇರಿದಂತೆ ಅನೇಕ ವಲಯಗಳಲ್ಲಿ ಕಾರ್ಯ ನಿರ್ವಹಿಸಿರುವ ನಂದೀಶ್, ಥಿಯೇಟರ್ ಗುತ್ತಿಗೆ ಪಡೆದು ನಡೆಸುವ ಮೂಲಕವೂ ಸಿನಿಮಾ ವ್ಯವಹಾರವನ್ನು ಪ್ರಾಕ್ಟಿಕಲ್ ಆಗಿಯೇ ಮನನ ಮಾಡಿಕೊಂಡಿದ್ದಾರೆ. ಹಾಸನದ ಹಳ್ಳಿಯೊಂದರಿಂದ ಬಂದಿರುವ ನಂದೀಶ್, ಜೇಕಬ್ ವರ್ಗೀಸ್ ಅವರೊಂದಿಗೆ ಸೇರಿ ನಾನಾ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಬಂದಿದ್ದರು. ಹಲವಾರು ಸಿನಿಮಾ, ಡಾಕ್ಯುಮೆಂಟರಿಗಳ ಮೂಲಕ ತಮ್ಮ ಪ್ರತಿಭೆಯನ್ನು ಸಾಣೆ ಹಿಡಿದು ಹೊಳಪುಗಟ್ಟಿಸಿಕೊಂಡಿದ್ದರು.
Advertisement
ಈ ಹಿಂದೆ ಡಿಯರ್ ವಿಕ್ರಮ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದ ನಂದೀಶ್, ಈ ಬಾರಿ ಹಾರರ್ ಧಾಟಿಯ ಮಿಸ್ಟ್ರಿ ಥ್ರಿಲ್ಲರ್ ಕಥನದ ಮೂಲಕ ರುದ್ರ ಗರುಡ ಪುರಾಣ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಇಪ್ಪತೈದು ವರ್ಷದ ಹಿಂದೆ ಬಸ್ ಅಪಘಾತದಲ್ಲಿ ಅಸುನೀಗಿದ್ದವರೆಲ್ಲ, ಅಷ್ಟು ವರ್ಷಗಳ ನಂತರ ವಾಸ್ತವಿಕವಾಗಿ ಕಾಣಿಸಿಕೊಳ್ಳುವ ರಣರೋಚಕ ಕಥನ ಈ ಸಿನಿಮಾದಲ್ಲಡಗಿದೆಯಂತೆ. ಹಾಗಂತ ಇದು ಮಾಮೂಲು ಶೈಲಿಯ ಹಾರರ್ ಸಿನಿಮಾವಲ್ಲ. ಆ ವಿಚಾರ ಈಗಾಗಲೇ ಬಿಡುಗಡೆಗೊಂಡಿರುವ ಟೀಸರ್ ಮೂಲಕ ಋಜುವಾತಾಗಿದೆ. ಕ್ಷಣ ಕ್ಷಣವೂ ಥ್ರಿಲ್ ಆಗುವಂತೆ, ಮನೋರಂಜನೆ ಸೇರಿದಂತೆ ಯಾವುದಕ್ಕೂ ಕೊರತೆ ಇಲ್ಲದಂತೆ ಈ ಚಿತ್ರವನ್ನು ರೂಪಿಸಿರುವ ತುಂಬು ಖುಷಿ ನಂದೀಶ್ ಅವರಲ್ಲಿದೆ. ಈ ಮೂಲಕ ನಿರ್ದೇಶಕನಾಗಿ ತಮ್ಮ ವೃತ್ತಿ ಬದುಕು ಮತ್ತಷ್ಟು ಮಿರುಗಲಿದೆ ಎಂಬ ಗಾಢ ನಂಬಿಕೆಯೂ ಅವರಲ್ಲಿದೆ. ಇದನ್ನೂ ಓದಿ: ‘ರುದ್ರ ಗರುಡ ಪುರಾಣ’ದಲ್ಲಿ ಮಿಸ್ ಆದ ವಿಮಾನದ ಕಥೆ ಹೇಳಲಿದ್ದಾರೆ ರಿಷಿ
Advertisement
ಈ ಹಿಂದೆ ತೆಲುಗಿನಲ್ಲಿ 9 ಅವರ್ಸ್ ಎಂಬ ವೆಬ್ ಸೀರೀಸ್ ನಿರ್ದೇಶನ ಮಾಡುವ ಮೂಲಕ ನಂದೀಶ್ ಗಮನ ಸೆಳೆದಿದ್ದರು. ಈ ಸಮಾಜದಲ್ಲಿ ಬದಲಾವಣೆ ತರುವಂಥಾ ಕಥನಗಳಿಗೆ ದೃಶ್ಯರೂಪ ಕೊಡಬೇಕೆಂಬ ತುಡಿತ ಹೊಂದಿರುವವರು ನಂದೀಶ್. ಜೇಕಬ್ ವರ್ಗೀಸ್ ನಿರ್ದೇಶನದ ಪೃಥ್ವಿ ಚಿತ್ರ ಭ್ರಷಾಚಾರದ ವಿರುದ್ಧ ಈ ಸಮಾಜವನ್ನು ಸೆಟೆದು ನಿಲ್ಲುವಂತೆ ಮಾಡಿತ್ತು. ಅದರ ಭಾಗವಾಗಿ ಅನುಭವ ಹೊಂದಿರುವ ನಂದೀಶ್ ಆ ಬಗೆಯ ಚಿತ್ರಗಳತ್ತ ವಿಶೇಷ ಒಲವು ಹೊಂದಿದ್ದಾರೆ. ರುದ್ರ ಗರುಡ ಪುರಾಣದ ಮೂಲಕ ಮತ್ತೊಂದು ದಿಕ್ಕಿನ ಕಥೆ ಹೇಳಿದ್ದಾರೆ.
ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ವಿಜಯ್ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೊಂದು ಮಿಸ್ಟ್ರಿ ಥ್ರಿಲ್ಲರ್ ಬಗೆಯ ಸಿನಿಮಾ. ಒಂದು ಘಟನೆಯ ಬಗ್ಗೆ ತನಿಖೆಗಿಳಿಯುತ್ತಾ, ಪ್ರೇಕ್ಷಕರೆದುರು ಹೊಸ ಜಗತ್ತೊಂದು ತೆರೆದುಕೊಂಡು ಹೋಗುವಂತೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಈಗಿರುವ ಕ್ರೇಜ್ ಅನ್ನು ಆಧರಿಸಿ ಹೇಳೋದಾದರೆ, ರುದ್ರ ಗರುಡ ಪುರಾಣ ಈ ವರ್ಷದ ಆರಂಭವನ್ನು ಗೆಲುವಿನ ಮೂಲಕ ಕಳೆಗಟ್ಟಿಸುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ವಿನೋದ್ ಆಳ್ವಾ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಮುಂತಾದವರು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ಕೃಷ್ಣ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.