– ಅಮಿತಾಬ್ ಬಚ್ಚನ್, ಆಮೀರ್ ಖಾನ್‌ರಿಂದ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದ ಉದ್ಯಮಿ
ಬೆಂಗಳೂರು: ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಹಾಗೂ ಆಮೀರ್ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರುಗಳಿಗೆ ಉದ್ಯಮಿ ಕೆಜಿಎಫ್ ಬಾಬು (KGF Babu) ಬರೋಬ್ಬರಿ 38 ಲಕ್ಷ ರೂ. ತೆರಿಗೆ ಪಾವತಿ ಮಾಡಿದ್ದಾರೆ.
ಆಮೀರ್ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರಿಗೆ (Rolls Royce Car) 19.73 ಲಕ್ಷ ರೂ. ಹಾಗೂ ಅಮಿತಾಬ್ ಬಚ್ಚನ್ ರಿಂದ ಖರೀದಿಸಿದ್ದ ಮತ್ತೊಂದು ರೋಲ್ಸ್ ರಾಯ್ಸ್ ಕಾರಿಗೆ 18.53 ಲಕ್ಷ ರೂ. ಟ್ಯಾಕ್ಸ್ (Tax) ಪಾವತಿ ಮಾಡಿದ್ದಾರೆ. ತೆರಿಗೆ ವಸೂಲಿ ಬಳಿಕ ಅಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ.
ಏನಾಗಿತ್ತು?
ಬೆಂಗಳೂರಿನ ವಸಂತನಗರದಲ್ಲಿರುವ ಉದ್ಯಮಿ ಕೆಜಿಎಫ್ ಬಾಬು ಅವರ ಮನೆ ಮೇಲೆ ಆರ್‌ಟಿಓ ಜಂಟಿ ಆಯುಕ್ತರಾದ ಶೋಭಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಬಾಬು ಅವರು ಅಮಿತಾಬ್ ಬಚ್ಚನ್, ಆಮೀರ್ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರುಗಳನ್ನು ಸೀಜ್ ಮಾಡಲು ಮುಂದಾಗಿತ್ತು. ಐಷಾರಾಮಿ ಕಾರುಗಳ ಟ್ಯಾಕ್ಸ್ ಕಟ್ಟದೇ ವಂಚಿಸಿದ್ದಾರೆ ಅನ್ನೋ ಆರೋಪದ ಮೇಲೆ ಆರ್‌ಟಿಓ ತಂಡ ಕಾರು ಜಪ್ತಿಗೆ ಮುಂದಾಗಿತ್ತು. ಈ ದಾಳಿಯ ಸಂದರ್ಭದಲ್ಲಿ, ಅಧಿಕಾರಿಗಳು ಬಾಬುಗೆ ಸೇರಿದ ಕಾರುಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದರು. ಆದ್ರೆ ಬಾಬು ಮನೆಯ ಗೇಟ್ ತೆರೆಯದಿರುವುದರಿಂದ, ಆರ್‌ಟಿಓ ತಂಡವು ಮನೆಯ ಹೊರಗಡೆಯೇ ಕಾದು ನಿಂತಿದ್ದರು. ಅಧಿಕಾರಿಗಳ ಮನವರಿಕೆ ಬಳಿಕ ಟ್ಯಾಕ್ಸ್ ಪಾವತಿ ಮಾಡಿದ್ದಾರೆ.
ಟ್ಯಾಕ್ಸ್ ಪಾವತಿ ಬಳಿಕ ಬಾಬು ಹೇಳಿದ್ದೇನು?
ಅಮೀರ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಅವರಿಂದ ಎರಡು ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದೆ. ಎರಡೂ ಕಾರುಗಳನ್ನು ಬಾಂಬೆಯಲ್ಲಿ ರಿಜೆಸ್ಟ್ರೇಷನ್ ಮಾಡಿಸಲಾಗಿತ್ತು. ಅಲ್ಲದೇ ಲೈಫ್ ಟ್ಯಾಕ್ಸ್ ಕೂಡ ಕಟ್ಟಿದೆ. ಆದ್ರೆ ಕರ್ನಾಟಕದಲ್ಲೂ ಟ್ಯಾಕ್ಸ್ ಕಟ್ಟಬೇಕು ಅಂತ ಅಧಿಕಾರಿಗಳು ಹೇಳಿದ್ರು. ನನಗೆ ಈ ಟ್ಯಾಕ್ಸ್ ವಿಚಾರ ಗೊತ್ತಿರಲಿಲ್ಲ. ಗೊತ್ತಿಲ್ಲದೇ ನಾನು ತಪ್ಪು ಮಾಡಿದ್ದೀನಿ. ಆರ್‌ಟಿಓ ಅಧಿಕಾರಿಗಳು ನನಗೆ ಈ ಬಗ್ಗೆ ಮನವರಿಕೆ ಮಾಡಿದ್ರು. ನಂತರ ಅಮೀರ್ ಖಾನ್ ಅವರಿಂದ ಖರೀದಿಸಿದ್ದ ಕಾರಿಗೆ 19.73 ಲಕ್ಷ ರೂ. ಹಾಗೂ ಬಿಗ್ ಅಮಿತಾಬ್ ಬಚ್ಚನ್ ರಿಂದ ಖರೀದಿಸಿದ ಕಾರಿಗೆ 18.53 ಲಕ್ಷ ರೂ. ತೆರಿಗೆ ಕಟ್ಟದ್ದೇನೆ ಎಂದು ವಿವರಿಸಿದ್ರು.
ಆರ್‌ಟಿಓ ಅಧಿಕಾರಿಗಳ ಪ್ರತಿಕ್ರಿಯೆ ಏನು?
ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಶೋಭ ಮಾತನಾಡಿ, ಮಹಾರಾಷ್ಟ್ರ ರಿಜಿಸ್ಟ್ರೇಷನ್ ಕಾರುಗಳು ಕರ್ನಾಟಕದಲ್ಲಿ ಸಂಚರಿಸುತ್ತಿವೆ ಅನ್ನೋ ಮಾಹಿತಿ ಇತ್ತು. ಮಾಹಿತಿ ಹಿನ್ನೆಲೆ ನಾವು ಬೆಳಗ್ಗೆ ಬಂದು ಪರಿಶೀಲನೆ ನಡೆಸಿದ್ದೇವೆ. ಟ್ಯಾಕ್ಸ್ ವಿಚಾರ ಗೊತ್ತಿರಲಿಲ್ಲ ಅಂದ್ರು, ನಾವು ಎಲ್ಲಾ ಟ್ಯಾಕ್ಸ್ ಲೆಕ್ಕ ಮಾಡಿ ಹೇಳಿದ್ವಿ, ಕೂಡಲೇ ಕೆಜಿಎಫ್ ಬಾಬು ಡಿಡಿ ಮೂಲಕ ಟ್ಯಾಕ್ಸ್ ಕಟ್ಟಿದ್ದಾರೆ ಅಂತ ತಿಳಿಸಿದ್ರು.