ಗಾಂಧಿನಗರ: ಆದಾಯ ಘೋಷಣಾ ಯೋಜನೆ(ಐಡಿಎಸ್) ಅಡಿ ಗುಜರಾತಿನಲ್ಲಿ 18 ಸಾವಿರ ಕೋಟಿ ರೂ. ಕಪ್ಪು ಹಣ ಘೋಷಣೆಯಾಗಿದೆ ಎಂದು ಆದಾಯ ತೆರಿಗೆ ಮಾಹಿತಿ ಹಕ್ಕಿನ ಅಡಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದೆ.
ಆರ್‌ಟಿಐ ಕಾರ್ಯಕರ್ತ ಭರತ್ಸಿನ್ಹ ಅವರು 2016ರ ಜೂನ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಗುಜರಾತಿನಲ್ಲಿ ಎಷ್ಟು ಪ್ರಮಾಣದ ಕಪ್ಪು ಹಣ ಘೋಷಣೆಯಾಗಿದೆ ಎನ್ನುವ ಮಾಹಿತಿಯನ್ನು ಕೇಳಿದ್ದರು. ಈ ಪ್ರಶ್ನೆಗೆ ಐಟಿ ಐಡಿಎಸ್ ಅಡಿ ದೇಶದಲ್ಲಿ ಒಟ್ಟು 62,560 ಕೋಟಿ ರೂ. ಹಣ ಘೋಷಣೆಯಾಗಿದ್ದು, ಗುಜರಾತಿನಲ್ಲಿ ಒಟ್ಟು 18 ಸಾವಿರ ಕೋಟಿ ರೂ. ಕಪ್ಪು ಹಣ ಘೋಷಣೆಯಾಗಿದೆ. ಒಟ್ಟು ಘೋಷಣೆಯಾದ ಕಪ್ಪು ಹಣದ ಪೈಕಿ ಶೇ.29 ರಷ್ಟು ಹಣ ಗುಜರಾತಿನಲ್ಲಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದೆ.
Advertisement
Advertisement
ಆರ್‌ಟಿಐ ಕಾರ್ಯಕರ್ತ ಭರತ್ಸಿನ್ಹ ಅವರು 2 ವರ್ಷದ ಹಿಂದೆ ಅಂದರೆ 2016 ಡಿಸೆಂಬರ್ 21 ರಂದು ಸರ್ಕಾರದ ಆದಾಯ ಘೋಷಣೆ ಯೋಜನೆ ಅಡಿ ಎಷ್ಟು ಪ್ರಮಾಣದ ಹಣ ಘೋಷಣೆಯಾಗಿದೆ ಎಂದು ಪ್ರಶ್ನೆ ಕೇಳಿದ್ದರು. ಈ ಅರ್ಜಿಗೆ 2 ವರ್ಷದ ಬಳಿಕ ಐಟಿ ಉತ್ತರ ನೀಡಿದೆ.
Advertisement
ಈ ಕುರಿತು ಸದ್ಯ ಮಾತನಾಡಿರುವ ಭರತ್ಸಿನ್ಹ ಅವರು, ನಾನು ಕೋರಿದ ಮಾಹಿತಿ ಪಡೆಯಲು 2 ವರ್ಷ ಕಾಲ ಹೋರಾಟ ನಡೆಸಬೇಕಾಯಿತು. ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದ ವೇಳೆ ಅಧಿಕಾರಿಗಳು ಭಾಷೆಯ ಕಾರಣ ನೀಡಿ ತಿರಸ್ಕರಿಸಿದ್ದರು. ಬಳಿಕ ಸಲ್ಲಿಸಿದ್ದ ಅರ್ಜಿಗೆ ಅನುಗುಣವಾಗಿ ಮಾಹಿತಿ ನೀಡುವಂತೆ ಸೆಪ್ಟೆಂಬರ್ 5 ರಂದು ದೆಹಲಿಯ ಮಾಹಿತಿ ಹಕ್ಕು ಮುಖ್ಯ ಆಯುಕ್ತರು ಮಾಹಿತಿ ನೀಡುವಂತೆ ಸೂಚಿಸಿದ್ದರು. ಸದ್ಯ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ಗುಜರಾತ್ ಉದ್ಯಮಿ ಮಹೇಶ್ ಶಾ ಬರೋಬ್ಬರಿ 13,860 ಕೋಟಿ ರೂ. ಕಪ್ಪು ಹಣ ಇರುವುದಾಗಿ ಘೋಷಣೆ ಮಾಡಿದ್ದರು. ಘೋಷಣೆ ಮಾಡಿದ ಬಳಿಕ ನಾಪತ್ತೆಯಾಗಿದ್ದ ಮಹೇಶ್ ರನ್ನು 2016ರ ಡಿಸೆಂಬರ್ 3ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದರು.
2016ರ ನವೆಂಬರ್8 ರಂದು 500 ಮತ್ತು 1 ಸಾವಿರ ರೂ. ಮೌಲ್ಯದ ನೋಟುಗಳ ನಿಷೇಧಕ್ಕೂ ಮೊದಲು ಆದಾಯ ಘೋಷಣಾ ಯೋಜನೆಯನ್ನು ಜಾರಿಗೆ ತಂದಿತ್ತು. 2016ರ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಾತ್ರ ಅವಧಿ ಹೊಂದಿದ್ದ ಈ ಯೋಜನೆಯ ಅಡಿ ಒಟ್ಟು 67,382 ಕೋಟಿ ರೂ. ಅಕ್ರಮ ಆದಾಯ ಘೋಷಣೆ ಆಗಿತ್ತು. ಐಡಿಎಸ್ ಅಡಿ ಬರುವ ಮಾಹಿತಿಯನ್ನು ಗೌಪ್ಯವಾಗಿಟ್ಟು, ಬೇರೆ ಯಾವುದೇ ಇಲಾಖೆಗೆ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿತ್ತು.
ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ಕಪ್ಪುಕುಳಗಳಿಗೆ ತಮ್ಮಲ್ಲಿರುವ ಆದಾಯವನ್ನು ಸಕ್ರಮಗೊಳಿಸಲು ಕೊನೆಯ ಬಾಗಿಲು ಎನ್ನುವಂತೆ ಕೇಂದ್ರ ಸರ್ಕಾರ ಪಿಎಂಜಿಕೆವೈ ಯೋಜನೆಯನ್ನು ಜಾರಿಗೆ ತಂದಿತ್ತು. ಇದನ್ನು ಓದಿ: ಪಿಎಂಜಿಕೆವೈ ಅಡಿಯಲ್ಲಿ ಎಷ್ಟು ಕೋಟಿ ಕಪ್ಪು ಹಣ ಘೋಷಣೆಯಾಗಿದೆ ಗೊತ್ತಾ?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv