ಬೆಂಗಳೂರು: ಕಳೆದ ವರ್ಷ ಡಿಸೆಂಬರ್ 5ರಂದು ಮೃತಪಟ್ಟ ತಮಿಳುನಾಡು ಸಿಎಂ ಜಯಲಲಿತಾ ಸಾವಿನ ಅಸಲಿ ಕಾರಣ ಈಗ ಬಯಲಾಗಿದೆ. ಬೆಂಗಳೂರಿನ ಆರ್‍ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಆರ್‍ಟಿಐನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ರೋಗಿಯ ಮಾಹಿತಿಯನ್ನು ಬಹಿರಂಗ ಪಡಿಸಿಬಾರದು ಎನ್ನುವ ಕಾಯ್ದೆ ಇದ್ರೂ ನಾನಾ ಊಹಾಪೋಹಗಳಿಗೆ ತೆರೆ ಎಳೆಯೋದಕ್ಕೆ ಈ ಮಾಹಿತಿ ನೀಡಲಾಗಿದೆ. ಆದರೆ, ಜಯಲಲಿತಾ ಚಿಕಿತ್ಸೆ ವೆಚ್ಚವನ್ನು ತಮಿಳುನಾಡು ಸರ್ಕಾರ ಇನ್ನೂ ಪಾವತಿಸಿಲ್ಲ ಎಂದು ಅಪೋಲೋ ಆಸ್ಪತ್ರೆ ಹೇಳಿದೆ.
ಆರ್‍ಟಿಐ ಅಡಿ ಸಿಕ್ಕಿದ ಮಾಹಿತಿ ಏನು?
ಸೆಪ್ಟೆಂಬರ್ 22,2016 ರಂದು ಜಯಲಲಿತಾ ಅಸ್ವಸ್ಥರಾಗಿರುವ ಸುದ್ದಿ ಆಸ್ಪತ್ರೆಗೆ ಸಿಕ್ಕಿತು. ಆಂಬುಲೆನ್ಸ್‍ನಲ್ಲಿ ಕರೆದುಕೊಂಡು ಬರುವಾಗ ಉಸಿರಾಟದ ತೀವ್ರ ತೊಂದರೆ, ಸುಸ್ತಿನಿಂದ ಬಳಲುತ್ತಿದ್ದರು. ಡಿ ಹೈಡ್ರೇಷನ್, ಹೈಪರ್ ಟೆನ್ಶನ್, ಆಸ್ತಮಾ, ಬ್ರಾಂಕೈಟಿಸ್ ಸಹ ಇತ್ತು ಎಂದು ಉತ್ತರಿಸಿದೆ.
ಕೆಲ ರಾಜಕೀಯ ನಾಯಕರು ಆರೋಪಿಸುವಂತೆ ಜಯಲಲಿತಾಗೆ ಟ್ರೌಮಾ ಸಮಸ್ಯೆ ಇರಲಿಲ್ಲ. ಜಯಲಲಿತಾರನ್ನು ಉಳಿಸಲು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಬಂದಿತ್ತು. ಲಂಡನ್‍ನ ರಿಚರ್ಡ್ ಬೆಲ್ಲೆ ಸೇರಿದಂತೆ ಸಾಕಷ್ಟು ನುರಿತ ವೈದ್ಯರು ಪ್ರಯತ್ನ ಪಟ್ಟಿದ್ದರು. ತಮಿಳುನಾಡು ಸರ್ಕಾರದ ವಿನಂತಿಯಂತೆ ಏಮ್ಸ್ ವೈದ್ಯರು ಬಂದಿದ್ದರು ಎಂದು ತಿಳಿಸಿದೆ.
ಜಯಲಿಲಿತಾ ಆಸ್ಪತ್ರೆಗೆ ದಾಖಲಾಗೋದಕ್ಕೆ ಮುಂಚಿತವಾಗಿ ತಪ್ಪು ಔಷಧಿ ನೀಡಲಾಗಿದೆ. ಅವರನ್ನುಮಹಡಿಯಿಂದ ತಳ್ಳಲಾಗಿದೆ ಅಂತೆಲ್ಲ ಆರೋಪ ಮಾಡಲಾಗಿತ್ತು. ಆದ್ರೆ ನಾವು ಪರೀಕ್ಷಿಸಿದಾಗ ಇಂತಹ ಯಾವುದು ಕಂಡು ಬಂದಿಲ್ಲ. ಆದ್ರೆ ಡಯಾಬಿಟಿಸ್ ಕಂಟ್ರೋಲ್, ಹೈಪರ್ ಟೆನ್ಶನ್‍ಗೆ ಮಾತ್ರೆ ಸೇವಿಸ್ತಿರೋದು ಗೊತ್ತಾಗಿತ್ತು. ಸ್ವಲ್ಪ ಕಾಲ ಚೇತರಿಸಿಕೊಂಡಿದ್ರು. ಕಾವೇರಿ ವಿಚಾರವಾಗಿ ಆಸ್ಪತ್ರೆಯಲ್ಲಿ ಸಭೆಯನ್ನೂ ನಡೆಸಿದ್ದರು. ಬಾಯಿಯ ಮೂಲಕವೇ ಆಹಾರ ಸೇವಿಸುತ್ತಿದ್ದರು. ಡಿಸೆಂಬರ್ ನಾಲ್ಕರಂದು ಹೃದಯಾಘಾತವಾಯ್ತು, ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆ ಉತ್ತರಿಸಿದೆ.