ಬೆಂಗಳೂರು: ಮಫ್ತಿಯಲ್ಲಿದ್ದ ಮುಖ್ಯ ಪೇದೆಗೆ ದುಷ್ಕರ್ಮಿಗಳು ಹೊಟ್ಟೆಯ ಭಾಗಕ್ಕೆ ಚಾಕು ಇರಿದಿರುವ ಘಟನೆ ಬೆಂಗಳೂರಿನ ಚಾಮುಂಡಿ ನಗರದಲ್ಲಿ ನಡೆದಿದೆ.
ನಾಗರಾಜ್ ದುಷ್ಕರ್ಮಿಗಳಿಂದ ಚಾಕು ಇರಿತಕೊಳಗಾದ ಮುಖ್ಯ ಪೇದೆ. ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದಲ್ಲಿ ಪುಡಾರಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು. ಚಾಮುಂಡಿ ನಗರದಲ್ಲಿ ಪುಡಾರಿಗಳನ್ನ ಮಟ್ಟ ಹಾಕಲು ನಾಗರಾಜ್ ಮಪ್ತಿಯಲ್ಲಿ ಸ್ಥಳಕ್ಕೆ ಹೋಗಿದ್ದರು. ನಾಲ್ಕೈದು ಮಂದಿ ಪುಡಾರಿಗಳು ನಿರ್ಮಾಣ ಹಂತದ ಕಟ್ಟದ ಒಳಗಡೆ ಕುಳಿತು ತಲೆ ಹರಟೆ ಮಾಡುತ್ತಿದ್ದರು.
ಕೂಡಲೇ ನಾಗರಾಜ್ ಪುಂಡರನ್ನ ಬಂಧಿಸಲು ಹೋಗಿದ್ದಾರೆ. ನಾಲ್ಕೈದು ಯುವಕರಲ್ಲಿ ಮೂವರು ನಾಗರಾಜ್ ಬಳಿ ಇದ್ದ ವಾಕಿಟಾಕಿ ನೋಡಿ ಎಸ್ಕೇಪ್ ಆಗಿದ್ದಾರೆ. ಉಳಿದ ಇಬ್ಬರನ್ನ ಬಂಧಿಸಿ ಠಾಣೆಗೆ ಕರೆತರಲು ಮುಂದಾಗಿದ್ದ ನಾಗರಾಜ್ ಹೊಟ್ಟೆಯ ಭಾಗಕ್ಕೆ ಚಾಕು ಚುಚ್ಚಿ ಎಸ್ಕೇಪ್ ಆಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ನಾಗಾರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಆರ್.ಟಿ. ನಗರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.