ಕೋಲ್ಕತ್ತಾ: ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ಆತನ ಪತ್ನಿ, 6 ವರ್ಷದ ಮಗನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಬೊಂಧು ಪ್ರಕಾಶ್ ಪಲ್ ಕೊಲೆಯಾದ ಆರ್‌ಎಸ್‌ಎಸ್ ಕಾರ್ಯಕರ್ತ. ಪ್ರಕಾಶ್ ವೃತ್ತಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದು, ಆರ್‍ಎಸ್‍ಎಸ್ ನಲ್ಲಿಯೂ ಗುರುತಿಸಿಕೊಂಡಿದ್ದರು. ಪ್ರಕಾಶ್ ಪಲ್ ಮತ್ತು ಗರ್ಭಿಣಿ ಪತ್ನಿ ಬ್ಯೂಟಿ ಪಲ್, ಪುತ್ರ ಆನಂದ್ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಪ್ರಕಾಶ್ ಪಲ್ ಕುಟುಂಬ ಮುರ್ಷಿದಾಬಾದ್ ನಗರದ ಜಿಯಾಗಂಜ್ ಬಡಾವಣೆಯಲ್ಲಿ ವಾಸವಾಗಿತ್ತು. ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿದ ಕೆಲ ದುಷ್ಕರ್ಮಿಗಳನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರು ಕೊಲೆಗೆ ಬಳಸಲಾಗಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಸ್ಥಳೀಯರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.