ಹಾಲಸ್ವಾಮಿ ಆರ್.ಎಸ್.
ಶಿವಮೊಗ್ಗ: ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ಅವರ ವಿರುದ್ಧ ಯಡಿಯೂರಪ್ಪ ಟೀಕಾಪ್ರಹಾರ ಮಾಡಿದ ಮರು ದಿನವೇ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್ ಅವರ ಮೇಲೆ ಕ್ರಮಕೈಗೊಳ್ಳಲಾಗಿದೆ. ಇದು ಬಿಜೆಪಿ ಮತ್ತು ಆರ್‍ಎಸ್‍ಎಸ್ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದೆ. ಅಲ್ಲದೆ, ವಿವಾದ ತಾರ್ಕಿಕ ಅಂತ್ಯದತ್ತ ಬಂದು ನಿಂತಿದೆ.
Advertisement
1975ರಿಂದಲೂ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿರುವ ಮತ್ತೂರಿನ ಭಾನುಪ್ರಕಾಶ್ 1985ರಿಂದ ಇದೂವರೆಗೂ ಬಿಜೆಪಿಯಲ್ಲಿ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಆದ್ರೆ ಇದೀಗ ಸಂಘದ ಕಟ್ಟಾಳು ಭಾನುಪ್ರಕಾಶ್ ಏಕಪಕ್ಷೀಯ ಕ್ರಮಕೈಗೊಂಡಿರುವುದು ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ಹೆಚ್ಚಾಗಿದೆ.
Advertisement
ಇದನ್ನೂ ಓದಿ: ಬಿಎಸ್‍ವೈ, ಈಶ್ವರಪ್ಪ ಟೀಮ್‍ನಿಂದ ನಾಲ್ವರಿಗೆ ಕೊಕ್- ಮುರಳೀಧರ್‍ರಾವ್ ಖಡಕ್ ಆದೇಶ
Advertisement
Advertisement
ನಾಲ್ವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸುವಾಗ ಪಕ್ಷದ ಸಂವಿಧಾನದ ಪ್ರಕಾರ ನಡೆಯಬೇಕಿದ್ದ ಸ್ಪಷ್ಟನೆ, ಕೋರಿಕೆ, ಚರ್ಚೆ ಇನ್ನಿತರ ಪ್ರಕ್ರಿಯೆಗಳು ನಡೆದಿಲ್ಲ. ಇದೇ ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಇದೆ ಎಂಬುದನ್ನು ತೋರುತ್ತದೆ ಎನ್ನುತ್ತಾರೆ ಹಿರಿಯ ಕಾರ್ಯಕರ್ತರು. ಅವರ ಕಡೆಯ ಇಬ್ಬರು- ಇವರ ಕಡೆಯ ಇಬ್ಬರು ಎಂಬ ಲೆಕ್ಕಾಚಾರವೇ ಸರಿಯಲ್ಲ. ಎರಡೂ ಬಣದವರನ್ನು ಓಲೈಸುವ ಈ ನಿಲುವನ್ನು ವರಿಷ್ಠರು ಹೇಗೆ ಸಮರ್ಥಿಸುತ್ತಾರೆ ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಭಿನ್ನಮತದ ಮೂಲ ಇರುವುದು ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಅವರಲ್ಲಿ. ಇವರನ್ನು ಒಟ್ಟುಗೂಡಿಸಿ ಚರ್ಚಿಸಿ ಸಮಸ್ಯೆ ಬಗೆಹರಿಸುವ ಬದಲು ಪಕ್ಷದ ನಿಷ್ಠಾವಂತರ ಮೇಲೆ ಕ್ರಮಕೈಗೊಂಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆ ಆದ ಹಿನ್ನಲೆಯಲ್ಲಿ ಭಾನು ಪ್ರಕಾಶ್ ಅವರ ಮನೆಗೆ ಶಿವಮೊಗ್ಗ ನಗರದ ಬಿಜೆಪಿ ಪ್ರಮುಖರು ಹಾಗೂ ಸಂಘ ಪರಿವಾರದ ಪ್ರಮುಖರು ನಿರಂತರವಾಗಿ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಈ ಮಾತುಕತೆಯಲ್ಲಿ ಪಕ್ಷದ ಉಸ್ತುವಾರಿ ಮುರಳೀಧರ ರಾವ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಮುರಳಿಧರರಾವ್ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಲು ಸಿದ್ಧತೆಗಳು ನಡೆದಿವೆ.
ಇದನ್ನೂ ಓದಿ: ಆರ್ ಅಶೋಕ್ ಯಾರ ಬಣ: ಅವ್ರೇ ನೀಡಿದ ಉತ್ತರ ಇದು
ಬಿ.ಎಸ್.ಯಡಿಯೂರಪ್ಪ ಮುರಳೀಧರ ರಾವ್ ಅವರ ನಡೆ ಸಮರ್ಥಿಸಿರುವ ಹಿನ್ನಲೆಯಲ್ಲಿ ಈ ಶಿಸ್ತು ಕ್ರಮ ಪಕ್ಷದ ಕಚ್ಚಾಟ ಕಡಿಮೆ ಮಾಡುವ ಬದಲು ಇನ್ನಷ್ಟು ಹೆಚ್ಚಿಸಿದೆ. ಬಿಜೆಪಿಯ ಬೆನ್ನೆಲುಬಾಗಿರುವ ಆರ್‍ಎಸ್‍ಎಸ್ ನ ಆಕ್ರೋಶಕ್ಕೆ ಬಿ.ಎಸ್.ಯಡಿಯೂರಪ್ಪ ತುತ್ತಾಗಿದ್ದಾರೆ. ಬಿಜೆಪಿ ವ್ಯಕ್ತಿ ಕೇಂದ್ರಿತ ಪಕ್ಷವಲ್ಲ- ಸಂಘಟನೆ ಕೇಂದ್ರಿತ ಪಕ್ಷ ಎಂಬ ಮಾತನ್ನು ಮತ್ತೆ ಮುಂದೆ ತರಲು ಸಂಘ ಪರಿವಾರ ನಿರ್ಧರಿಸಿದೆ. ಬಿಜೆಪಿಯೊಳಗಿನ ಭಿನ್ನಮತ ಈಗ ಸಂಘಪರಿವಾರ ವರ್ಸಸ್ ಬಿ.ಎಸ್.ಯಡಿಯೂರಪ್ಪ ಎಂಬಂತಾಗಿದೆ. ಅಲ್ಲದೆ, ತಾರ್ಕಿಕ ಅಂತ್ಯದತ್ತ ಈ ಭಿನ್ನಮತ ಸಾಗಿದೆ.