ಮದರಸಾ ತೆರೆಯಲು ಮುಂದಾದ ಆರ್‌ಎಸ್‌ಎಸ್

Public TV
2 Min Read
rss madarasa

ಡೆಹ್ರಾಡೂನ್: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಶೀಘ್ರದಲ್ಲೇ ಉತ್ತರಾಖಂಡದ ಡೆಹ್ರಾಡೂನ್‍ನಲ್ಲಿ ಮದರಸಾವನ್ನು ಸ್ಥಾಪಿಸಲು ಮುಂದಾಗಿದೆ.

ಆರ್‌ಎಸ್‌ಎಸ್ ಅಂಗ ಸಂಸ್ಥೆಯಾಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ವತಿಯಿಂದ ಧಾರ್ಮಿಕ ಶಿಕ್ಷಣ, ಶಾಲಾ ಶಿಕ್ಷಣ, ಕಂಪ್ಯೂಟರ್ ಶಿಕ್ಷಣವನ್ನೊಳಗೊಂಡಂತೆ ಡೆಹ್ರಾಡೂನ್‍ನಲ್ಲಿ ಮದರಸಾ ಸ್ಥಾಪಿಸಲು ನಿರ್ಧರಿಸಲಾಗಿದೆ. ಈವರೆಗೆ ಎಂಆರ್‌ಎಂ ನಿಂದ 5 ಮದರಸಾವನ್ನು ತೆರೆಯಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್, ಬುಲಂದ್‍ಶಹರ್, ಹಾಪುರದಲ್ಲಿ ತಲಾ ಒಂದು ಮತ್ತು ಮುಝಪ್ಫರ್ ನಗರದಲ್ಲಿ ಎರಡು ಮದರಸಾಗಳನ್ನು ಸಂಘದ ಅಡಿಯಲ್ಲಿ ನಡೆಸಲಾಗುತ್ತಿದೆ.

rss madarasa 1

ಡೆಹ್ರಾಡೂನ್‍ನಲ್ಲಿ ಮದರಸಾ ನಿರ್ಮಾಣ ಮಾಡಲು ನಿವೇಶನವನ್ನು ಈಗಾಗಲೇ ಖರೀದಿ ಮಾಡಲಾಗಿದೆ. ಹೀಗಾಗಿ 6 ತಿಂಗಳೊಳಗೆ ಮದರಸಾವನ್ನು ನಿರ್ಮಿಸಿ ಕಾರ್ಯರೂಪಕ್ಕೆ ತರಲಾಗುವುದು. ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕಗಳನ್ನು ಪಡೆದುಕೊಳ್ಳಲಾಗುವುದು. ಆರಂಭದಲ್ಲಿ 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು. ಬಳಿಕ ಮುಂದಿನ ತರಗತಿಗಳನ್ನು ವಿಸ್ತರಿಸಲಾಗುವುದು ಎಂದು ಸಂಘದ ಮೂಲಗಳು ತಿಳಿಸಿವೆ.

ನಮ್ಮ ಮದರಸಾದಲ್ಲಿ ಓದುವ ವಿದ್ಯಾರ್ಥಿಗಳು ಕೇವಲ ಖಾಜಿ (ಷರಿಯಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು), ಕಾರಿಸ್ ( ಮದರಸಾದ ಧಾರ್ಮಿಕ ಶಿಕ್ಷಕ) ಇಮಾಂ (ಸಾಮುದಾಯಿಕ ನಮಾಜ್ ನಾಯಕ), ಮೌಲಾನಾಸ್ ಮತ್ತು ಮುಫ್ತಿ (ಫತ್ವಾ ಹೊರಡಿಸುವವರು) ಆಗುವುದಿಲ್ಲ. ಎಂಜಿನಿಯರುಗಳು, ವೈದ್ಯರು, ವಿಜ್ಞಾನಿಗಳು ಮತ್ತು ಇತರ ವೃತ್ತಿಪರ ಪದವೀಧರರಾಗಿಯೂ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಗುರಿ ನಮ್ಮದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾವು ಈ ಮದರಸಾವನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಂಆರ್‌ಎಂನ ರಾಷ್ಟ್ರೀಯ ಉಪಸಂಸ್ಥೆ ಪ್ರಧಾನ ಕಾರ್ಯದರ್ಶಿ ತುಷಾರ್ ಕಾಂತ್ ಹಿಂದೂಸ್ತಾನಿ ತಿಳಿಸಿದ್ದಾರೆ.

madarasa 2

ಮಾನವತಾವಾದ ಮತ್ತು ರಾಷ್ಟ್ರೀಯತೆಯನ್ನು ಬೆಳೆಸುವುದೇ, ಹಿಂದೂಸ್ತಾನಿ ಮದರಸಾದ ಗುರಿ. ಎಲ್ಲ ಧರ್ಮದ ಜನರು, ಬಡವ, ಶ್ರೀಮಂತ ಎಂಬ ಬೇದವಿಲ್ಲದೆ ಎಲ್ಲಾ ವರ್ಗದ ಜನರು ಇಲ್ಲಿ ಪ್ರವೇಶಾತಿ ಪಡೆಯಬಹುದು. ಮಕ್ಕಳಿಗೆ ಶಿಕ್ಷಣವನ್ನು ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದರು.

madarasa students

ನಾವು ಹಿಂದೂಸ್ತಾನಿ ಮದರಸಾಗಳಲ್ಲಿ ಮಾನವೀಯತೆ, ದೇಶಭಕ್ತಿ ಹಾಗೂ ಜೀವನ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸುತ್ತೇವೆ. ಕೇವಲ ಪುಸ್ತಕದ ಜ್ಞಾನ ಮಾತ್ರವಲ್ಲದೇ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ನಾವು ಕಲಿಸುತ್ತೇವೆ. ಇಲ್ಲಿ ಕಲಿಯುವ ಮಕ್ಕಳು ಎ.ಪಿ.ಜೆ ಅಬ್ದುಲ್ ಕಲಾಂ, ಆಶ್ಫಾಕುಲ್ಲಾ ಖಾನ್ ತರಹ ಮಾದರಿ ವ್ಯಕ್ತಿಗಳು ಆಗುತ್ತಾರೆಯೇ ಹೊರತು ಅಜ್ಮಲ್ ಕಸಬ್ ರೀತಿ ಆಗುವುದಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *