ಗುಂಪು ಘರ್ಷಣೆ ಭಾರತೀಯ ಮೂಲದ್ದಲ್ಲ, ಭಾರತವನ್ನು ಅವಮಾನಿಸಲು ಇದನ್ನು ಬಳಸಬೇಡಿ – ಮೋಹನ್ ಭಾಗವತ್

Public TV
3 Min Read
mohan bhagavat web

ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂದು ವಿಜಯದಶಮಿಯ ಅಂಗವಾಗಿ ಮಹಾರಾಷ್ಟ್ರದ ನಾಗಪುರದ ಕೇಂದ್ರ ಕಚೇರಿಯಲ್ಲಿ ಆಯುಧ ಪೂಜೆಯನ್ನು ನೆರವೇರಿಸಿದರು.

ಸ್ವಯಂ ಸೇವಕರು ಡ್ರಿಲ್ ಮೂಲಕ ಪಥಸಂಚಲನ ನಡೆಸಿದ ನಂತರ ಮೋಹನ್ ಭಾಗವತ್ ಅವರು ಆಯುಧ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಪೂಜೆಯ ಬಳಿಕ ರೇಶಿಂಬಾಗ್ ಮೈದಾನದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮೋಹನ್ ಭಾಗವತ್ ಭಾಷಣ ಮಾಡಿದರು.

ಗುಂಪು ಘರ್ಷಣೆ(ಲಿಂಚಿಂಗ್) ಭಾರತದಲ್ಲ. ಇದು ಕೇವಲ ಒಂದು ನಿರ್ಧಿಷ್ಟ ಸಮುದಾಯದ ಜನರನ್ನು ಮಾತ್ರ ಗುರಿಯಾಗಿಸುವುದಿಲ್ಲ. ಹಿಮ್ಮುಖವಾಗಿಯೂ ಪರಿಣಾಮ ಬೀರುತ್ತದೆ. ಅಭಿಪ್ರಾಯ ಬೇಧ ಏನೇ ಇರಲಿ ಅಥವಾ ಯಾವುದೇ ಪ್ರಚೋದನಕಾರಿ ಕ್ರಮಗಳು ನಡೆದಿರಲಿ. ಇದರ ಹೊರತಾಗಿಯೂ ಸಮಾಜ ಸಂವಿಧಾನದ ಮಿತಿಯಲ್ಲಿ ಉಳಿಯಬೇಕು ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.

ಗುಂಪು ಘರ್ಷಣೆ ಎಂಬುದು ಭಾರತೀಯ ಮೂಲದ ಪದವಲ್ಲ. ಅದರ ಮೂಲವು ಪ್ರತ್ಯೇಕ ಧಾರ್ಮಿಕ ಪಠ್ಯದಲ್ಲಿನ ಕಥೆಯಿಂದ ಬಂದಿದೆ. ನಾವು ಭಾರತೀಯರು ಸಹೋದರತ್ವವನ್ನು ನಂಬುತ್ತೇವೆ. ಭಾರತೀಯರ ಮೇಲೆ ಅಂತಹ ನಿಯಮಗಳನ್ನು ಹೇರಬೇಡಿ. ಲಿಂಚಿಂಗ್ ಸ್ವತಃ ಪಾಶ್ಚಿಮಾತ್ಯ ಮೂಲದ್ದಾಗಿದೆ. ದೇಶವನ್ನು ಅವಮಾನಿಸಲು ಭಾರತೀಯರ ವಿಷಯದಲ್ಲಿ ಇದನ್ನು ಬಳಸಬಾರದು ಎಂದು ಮನವಿ ಮಾಡಿಕೊಂಡರು.

ಜಮ್ಮು ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿರುವ ಸರ್ಕಾರದ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದರು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಭಾರತ ಸದೃಢವಾಗಿರುವುದನ್ನು ಬಯಸುವುದಿಲ್ಲ. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಸರ್ಕಾರವು ನಮ್ಮ ನಿರೀಕ್ಷೆಗಳನ್ನು ಈಡೇರಿಸುವ ಧೈರ್ಯವನ್ನು ಹೊಂದಿದೆ ಎಂದು ತೋರಿಸಿದೆ. ದೇಶ ಹಿತದೃಷ್ಟಿಯಿಂದ ಜನರ ಭಾವನೆ ಹಾಗೂ ಆಶಯಗಳನ್ನು ಗೌರವಿಸುತ್ತದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ವ್ಯಕ್ತಿಯೂ ಕಾನೂನಿನಡಿಯಲ್ಲಿ ಬದುಕಬೇಕು, ಸಾಮರಸ್ಯ ಮೂಡಿಸಬೇಕು. ಆ ಸಂಸ್ಕಾರದೊಂದಿಗೆ ಸ್ವಯಂ ಸೇವಕರನ್ನು ಬೆಳೆಸಲಾಗುತ್ತದೆ ಎಂದು ತಿಳಿಸಿದರು.

ಕಳೆದ ಕೆಲವು ವರ್ಷಗಳಿಂದ ಭಾರತದ ಚಿಂತನೆ ಪ್ರಕ್ರಿಯೆಯ ದಿಕ್ಕಿನಲ್ಲಿ ಪರಿವರ್ತನೆ ಕಂಡುಬಂದಿದೆ. ಜಗತ್ತಿನಲ್ಲಿ ಹಾಗೂ ದೇಶದಲ್ಲಿನ ಹಲವರು ಇದನ್ನು ಬಯಸುವುದಿಲ್ಲ. ಅಭಿವೃದ್ಧಿ ಹೊಂದಿದ ಭಾರತ ಪಟ್ಟಭದ್ರ ಹಿತಾಸಕ್ತಿಗಳ ಮನಸ್ಸಿನಲ್ಲಿ ಭಯವನ್ನುಂಟು ಮಾಡುತ್ತದೆ. ಅಂತಹ ಶಕ್ತಿಗಳು ಭಾರತ ಬಲಶಾಲಿಯಾಗುವುದನ್ನು ಬಯಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಮತ್ತು ಆಡಳಿತದಲ್ಲಿ ವ್ಯಕ್ತಿಗಳು ಹೊರಡಿಸಿದ ಹೇಳಿಕೆಗಳನ್ನು ಸಹ ಪಟ್ಟಭದ್ರ ಹಿತಾಸಕ್ತಿಗಳಿಂದ ಕೆಟ್ಟದಕ್ಕೆ ಅನುಕೂಲವಾಗುವಂತೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇಂತಹವುಗಳನ್ನು ನಾವು ಗುರುತಿಸುವಲ್ಲಿ ನಾವು ಜಾಗರೂಕರಾಗಿರಬೇಕು ಮತ್ತು ಅವುಗಳನ್ನು ಬೌದ್ಧಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ಎದುರಿಸಬೇಕು ಎಂದು ಎಚ್ಚರಿಸಿದ್ದಾರೆ.

2019ರ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಅವರು, ಇಷ್ಟು ದೊಡ್ಡ ದೇಶದಲ್ಲಿ ಮತದಾನ ಸುಗಮವಾಗಿ ನಡೆಯುತ್ತದೆಯೇ ಎಂದು ತಿಳಿಯಲು ಅಂತರಾಷ್ಟ್ರೀಯ ಸಮುದಾಯ ಆಸಕ್ತಿ ಹೊಂದಿದೆ. ಭಾರತದ ಪ್ರಜಾಪ್ರಭುತ್ವ ಯಾವುದೇ ದೇಶದಿಂದ ಆಮದು ಮಾಡಿಕೊಂಡಿದ್ದಲ್ಲ, ಶತಮಾನಗಳಿಂದಲೂ ಇಲ್ಲಿ ಪ್ರಚಲಿತದಲ್ಲಿದ್ದದ್ದು ಎಂದು ಭಾಗವತ್ ತಿಳಿಸಿದರು.

ಭಾರತದ ಗಡಿಗಳು ಹಿಂದೆಂದಿಗಿಂತಲೂ ಸುರಕ್ಷಿತವಾಗಿವೆ. ಆದರೆ ಕರಾವಳಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. ಭೂ ಗಡಿಗಳಲ್ಲಿ ಸೈನಿಕರು ಹಾಗೂ ಚೆಕ್ ಪೋಸ್ಟ್ ಗಳ ಸಂಖ್ಯೆ ಮತ್ತು ಕಡಲ ಗಡಿಯುದ್ದಕ್ಕೂ ವಿಶೇಷ ದ್ವೀಪಗಳಲ್ಲಿ ಕಣ್ಗಾವಲು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಆರ್ಥಿಕ ಕ್ಷೇತ್ರದ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ವಿಶ್ವ ಆರ್ಥಿಕತೆಯ ನಿಧಾನಗತಿಯು ಇತರ ಎಲ್ಲ ದೇಶಗಳ ಮೇಲೆ ಪರಿಣಾಮ ಬೀರಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮ ಸಮಾಜ ಉದ್ಯಮಶೀಲವಾಗಿದ್ದು, ಈ ಸವಾಲನ್ನು ನಿವಾರಿಸುವ ಸಾಮಥ್ರ್ಯ ಹೊಂದಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಮೋಹನ್ ಭಾಗವತ್ ಅವರ ಭಾಷಣವನ್ನು ಆರ್ ಎಸ್‍ಎಸ್ ತನ್ನದೇ ಆದ ಇಂಟರ್ನೆಟ್ ಆಧಾರಿತ ರೇಡಿಯೋ ಚಾನೆಲ್ ಪ್ರಸಾರ ಮಾಡಿದೆ. ಅಲ್ಲದೆ ಸರಸಂಘಚಾಲಕರಿಗೆ ದಸರಾ ಹಬ್ಬ ಮಹತ್ವದ್ದಾಗಿದ್ದು, 1925ರಲ್ಲಿ ಇದೇ ದಿನದಂದು ಆರ್‍ಎಸ್‍ಎಸ್ ಸ್ಥಾಪನೆಯಾಗಿದೆ. ಹೀಗಾಗಿ ಆರ್ ಎಸ್‍ಎಸ್ ಕಾರ್ಯಕರ್ತರಿಗೆ ಇದು ವಿಶೇಷ ದಿನವಾಗಿದೆ.

ಈ ವರ್ಷದ ಆರ್ ಎಸ್‍ಎಸ್ ದಸರಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಐಟಿ ಕಂಪನಿ ಎಚ್‍ಸಿಎಲ್ ಟೆಕ್ನಾಲಜೀಸ್‍ನ ಸಂಸ್ಥಾಪಕ ಶಿವ ನಾಡರ್ ಭಾಗವಹಿಸಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ, ಜನರಲ್ ವಿ.ಕೆ. ಸಿಂಗ್(ನಿವೃತ್ತ) ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಇತರರು ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *