ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಲು ಆರ್‌ಎಸ್‌ಎಸ್ ಮುಖಂಡರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಮೂರು ಮಂತ್ರಗಳ ಸಲಹೆಯನ್ನು ನೀಡಿದ್ದಾರೆ.
ಮಂಗಳೂರಿನ ಸಂಘನಿಕೇತನಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಬೈಠಕ್‍ನಲ್ಲಿ ಬುಧವಾರ ರಾತ್ರಿ ಭಾಗವಹಿಸಿದ್ದ ಅಮಿತ್ ಶಾ ಅವರಿಗೆ ಸಂಘದ ಮುಖಂಡರು ತಿಳಿಸಿದ ಸೂತ್ರಗಳು ಭಾರೀ ಅಸ್ತ್ರಗಳಾಗಿವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಸಂಘದ ಪ್ಲಾನ್ ಬಗ್ಗೆ ಸವಿವರವಾಗಿ ನೀಡಿದ್ದಾರೆ. ಈ ಮೂಲಕ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಹೇಗೆ ಗೆಲುವು ಸಾಧಿಸಬಹುದು ಎನ್ನುವ ರಣತಂತ್ರ ತಿಳಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಏನಿದು ಮೂರು ಮಂತ್ರಗಳು?
ಉತ್ತರ ಭಾರತದಲ್ಲಿ ಅಯೋಧ್ಯೆ ರಾಮ ಮಂದಿರ ವಿಚಾರವನ್ನು ಹೆಚ್ಚು ಪ್ರಚಾರ ಮಾಡಬೇಕು. ರಾಮಮಂದಿರ ಸ್ಥಾಪನೆಗೆ ಬಿಜೆಪಿ ಇದೂವರೆಗೆ ನಡೆಸಿದ ಹೋರಾಟದ ಬಗ್ಗೆ ಪ್ರಚಾರ ಮಾಡಬೇಕು. ದಕ್ಷಿಣ ಭಾರತದಲ್ಲಿ ಅಯ್ಯಪ್ಪ ಭಕ್ತರ ಸಂಖ್ಯೆ ಜಾಸ್ತಿಯಿದೆ. ಹೀಗಾಗಿ ಶಬರಿಮಲೆಗೆ ಮಹಿಳೆಯ ಪ್ರವೇಶ ವಿರೋಧಿಸಿ ಹೋರಾಟ ತೀವ್ರಗೊಳ್ಳಬೇಕು. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಜಾಸ್ತಿ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರಿದ್ದಾರೆ. ಶಬರಿಮಲೆಗೆ ಮಹಿಳೆಯ ಪ್ರವೇಶ ನೀಡದಂತೆ ಪ್ರತಿಭಟನೆಗೆ ರಣತಂತ್ರ ನಡೆಸಿ. ನಾಳೆಯಿಂದ ಶಬರಿಮಲೆಯಲ್ಲಿ ಅಯ್ಯಪ್ಪ ದೇಗುಲ ತೆರೆಯಲಿದ್ದು, ಹೋರಾಟ ತೀವ್ರಗೊಳಿಸಿ ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಕರಾವಳಿಯಲ್ಲಿ ಗೋವುಗಳ ಕಳ್ಳ ಸಾಗಾಣಿಕೆ ಜಾಸ್ತಿಯಾಗುತ್ತಿದ್ದು, ಅವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 28 ಲೋಕಸಭಾ ಸ್ಥಾನಗಳ ಪೈಕಿ 2014ರಲ್ಲಿ 17 ರಲ್ಲಿ ಬಿಜೆಪಿ ಜಯಗಳಿಸಿತ್ತು. ಈ ಬಾರಿ 25 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಬೇಕು. ಈ ಮೂರು ತಂತ್ರಗಳನ್ನು ಅನುಸರಿಸಿದರೆ ಕಷ್ಟದ ಕೆಲಸವಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಕೆಲಸ ಮಾಡಬೇಕು ಎಂದು ಅಮಿತ್ ಶಾಗೆ ಆರ್‍ಎಸ್‍ಎಸ್ ಮುಖಂಡರು ಸಲಹೆ ನೀಡಿದ್ದಾರೆ.
ಈ ವೇಳೆ ಬೈಠಕ್‍ನಲ್ಲಿ ಉಪಸಮರದಲ್ಲಿ ಬಿಜೆಪಿಗೆ ಆದ ಹಿನ್ನಡೆ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಸತತ ನಾಲ್ಕು ಗಂಟೆಗಳ ಕಾಲ ಆರ್‌ಎಸ್‌ಎಸ್ ಮುಖಂಡರ ಜತೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ. ಸುರೇಶ್ ಭಯ್ಯಾಜಿ ಜೋಶಿ, ಮುಕುಂದ್ ಜೀ, ಸಂತೋಷ್ ಜೀ ಸೇರಿದಂತೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ಆರ್‍ಎಸ್‍ಎಸ್ ಪ್ರಮುಖರ, ಸಂಘಟನಾ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆದಿದೆ.
ಜ್ವಲಂತ ವಿಚಾರಗಳ ಮೂಲಕ ಎಡಪಕ್ಷಗಳಿಗೆ ಏಟು ನೀಡಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸ್ಥಾನಗಳನ್ನು ಪಡೆಯಲು ಏನು ಮಾಡಬೇಕು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಸಭೆ ಬಳಿಕ ಹೊರಟ ಅಮಿತ್ ಶಾ ಓಷಿಯನ್ ಪರ್ಲ್ ಹೊಟೇಲ್‍ನಲ್ಲಿ ತಡರಾತ್ರಿಯವರೆಗೂ ಬಿಜೆಪಿ ನಾಯಕರೊಂದಿಗೆ ಸಣ್ಣ ಮಟ್ಟಿನ ಸಭೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ವಿಶೇಷ ವಿಮಾನದ ಮೂಲಕ ಅಮಿತ್ ಶಾ ದೆಹಲಿಗೆ ಪ್ರಯಾಣಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews