ಬೆಂಗಳೂರು: ಬಣಗಳ ಗುದ್ದಾಟ, ರಾಮುಲು-ರೆಡ್ಡಿ ಗಲಾಟೆಯಿಂದ ಕರ್ನಾಟಕ ಬಿಜೆಪಿಗೆ ಆಗುತ್ತಿರುವ ಡ್ಯಾಮೇಜ್ ಅನ್ನು ಕಡಿಮೆ ಮಾಡಲು ಕೊನೆಗೆ ಆರ್‌ಎಸ್‌ಎಸ್ ಮಧ್ಯಪ್ರವೇಶ ಮಾಡಲು ಮುಂದಾಗಿದೆ.
ರಾಜೇಶ್ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ನೇಮಕಕ್ಕೆ ಆರ್‌ಎಸ್‌ಎಸ್ ನಿರ್ಧರಿಸಿದೆ.
ಕಳೆದ ಒಂದು ವರ್ಷದಿಂದಲೂ ತೆರವಾಗಿದ್ದ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಿರಲಿಲ್ಲ. ಬಿಜೆಪಿ ಹೈಕಮಾಂಡ್, ಆರ್‌ಎಸ್‌ಎಸ್‌ನಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಇದನ್ನೂ ಓದಿ: ಭಾರತಕ್ಕೆ ಜಯ – ಮುಂಬೈ ದಾಳಿಕೋರ ತಹಾವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಅನುಮತಿ
ರಾಜ್ಯ ಬಿಜೆಪಿಯಲ್ಲಿ ಕಚ್ಚಾಟ ಹೆಚ್ಚಾಗುತ್ತಿದ್ದಂತೆ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ನೇಮಕ ಮಾಡಲು ಹೈಕಮಾಂಡ್ ಮುಂದಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಬಳಿ ಹೇಳಲು ಸಾಧ್ಯವಾಗದ ದೂರನ್ನ ಸಂಘಟನಾ ಕಾರ್ಯದರ್ಶಿ ಬಳಿ ಹೇಳಿ ಸರಿಪಡಿಸಿಕೊಳ್ಳುವಂತೆ ಹೈಕಮಾಂಡ್ ಸೂಚಿಸುವ ಸಾಧ್ಯತೆಯಿದೆ.
2024ರ ಮೇ ತಿಂಗಳಿನಲ್ಲಿ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ. ರಾಜೇಶ್ ಅವರನ್ನು ದಿಢೀರ್ ಎತ್ತಂಗಡಿ ಮಾಡಿ ರಾಷ್ಟ್ರೀಯ ಸ್ವಯಸೇವಕ ಸಂಘದ ಸಹ ಸಂಸ್ಥೆ ‘ಸಾಮರಸ್ಯ’ದ ಹೊಣೆಯನ್ನು ನೀಡಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನವರಾದ ರಾಜೇಶ್, ಆರ್‌ಎಸ್‌ಎಸ್ ಪ್ರಚಾರಕರಾಗಿ ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 2022ರ ಜುಲೈನಲ್ಲಿ ಅವರನ್ನು ‘ಸಂಘ’ವು ಪಕ್ಷದ ಕೆಲಸಕ್ಕೆ ನಿಯೋಜಿಸಿತ್ತು. ಪ್ರಚಾರಕ ಹುದ್ದೆಯಿಂದ ಸಂಘಟನಾ ಕಾರ್ಯದರ್ಶಿಯಂತಹ ಅತ್ಯಂತ ಜವಾಬ್ದಾರಿಯ, ಮಹತ್ವದ ಹುದ್ದೆಗೆ ಬಂದವರ ಅವಧಿ ಸಾಮಾನ್ಯವಾಗಿ ಮೂರು ವರ್ಷ ಇರುತ್ತದೆ. ಅವಧಿಪೂರ್ಣವೇ ಅವರನ್ನು ಬದಲಾವಣೆ ಮಾಡಿರುವುದು ಪಕ್ಷದೊಳಗೆ ಹಲವು ಚರ್ಚೆಯನ್ನು ಹುಟ್ಟುಹಾಕಿತ್ತು.