ಬಾಂಗ್ಲಾದೇಶದಲ್ಲಿ ನಡೆಯುತ್ತಿರುವುದು ಭಾರತದ ಹಿಂದೂಗಳಿಗೂ ಒಂದು ಪಾಠ: ಮೋಹನ್‌ ಭಾಗವತ್‌

Public TV
4 Min Read
Mohan Bhagwat 1

– ಡೀಪ್ ಸ್ಟೇಟ್, ವೋಕಿಸಂ, ಕಲ್ಬರಲ್ ಮಾರ್ಕ್ಸಿಸ್ಟ್ ದೇಶಕ್ಕೆ ಮಾರಕ

ನಾಗಪುರ: ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ (Bangladesh) ನಡೆಯುತ್ತಿರುವ ಘಟನೆ ಭಾರತದ ಹಿಂದೂಗಳಿಗೂ (Hindu) ಒಂದು ಪಾಠ. ನಾವು ದುರ್ಬಲರಾಗಿದ್ದರೆ ನಮ್ಮ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಅದಕ್ಕಾಗಿ ನಾವು ಎಲ್ಲಿದ್ದರೂ ಒಗ್ಗಟ್ಟಾಗಿ ಮತ್ತು ಸಬಲರಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಸರಸಂಚಾಲಕ ಮೋಹನ್‌ ಭಾಗವತ್‌ (Mohan Bhagwat) ಹೇಳಿದರು.

ವಿಜಯದಶಮಿ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಸ್ವಯಂ ಸೇವಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಲ್ಲಿಯವರೆಗೂ ಬಾಂಗ್ಲಾದಲ್ಲಿ ಮೂಲಭೂತವಾದಿ ಸ್ವಭಾವ ಇರುತ್ತದೆಯೋ ಅಲ್ಲಿಯವರೆಗೆ ಹಿಂದೂಗಳ ಸಹಿತ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ತಲೆಯ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ ಎಂದು ತಿಳಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಪದ್ಮಭೂಷಣ ಪುರಸ್ಕೃತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಉಪಸ್ಥಿತರಿದ್ದರು.

Mohan Bhagwat 2

ಮೋಹನ್‌ ಭಾಗವತ್‌ ಹೇಳಿದ್ದೇನು?
ವಿಶ್ವದಲ್ಲಿ ಭಾರತಕ್ಕೆ ಪ್ರಾಮುಖ್ಯತೆ ಸಿಗುತ್ತಿರುವುದರಿಂದ ಯಾರ ಸ್ವಾರ್ಥ ಹೊಡೆದುರುಳುತ್ತದೆಯೋ ಅಂತಹ ಶಕ್ತಿಗಳು ಭಾರತ ಒಂದು ಚೌಕಟ್ಟಿನೊಳಗೆ ಬೆಳೆಯುವಂತೆ ಮಾಡಲು ನಿರೀಕ್ಷೆಯಂತೆಯೇ ಶ್ರಮಿಸುತ್ತಿದೆ. ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡುವುದರಲ್ಲಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಚುನಾಯಿತ ಅಲ್ಲಿನ ಸರ್ಕಾರಗಳನ್ನು ಹಿಂಸಾತ್ಮಕ ಮಾರ್ಗದ ಮೂಲಕ ಕೆಳಗಿಳಿಸುವುದಕ್ಕೂ ಆ ಶಕ್ತಿಗಳು ಹಿಂದೇಟು ಹಾಕುವುದಿಲ್ಲ.

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ದಂಗೆಯ ತಾತ್ಕಾಲಿಕ ಕಾರಣಗಳು ಈ ಘಟನಾ ಕ್ರಮದ ಒಂದು ಮುಖ ಮಾತ್ರ. ಹಾಗೆಯೇ ಅಲ್ಲಿರುವ ಹಿಂದೂ ಸಮಾಜದ ಮೇಲೆ ಯಾವುದೇ ಕಾರಣವಿಲ್ಲದೇ ನಡೆಯುವ ಅಮಾನವೀಯ ಅತ್ಯಾಚಾರದ ಪರಂಪರೆ ಮತ್ತೆ ಮರುಕಳಿಸಿದೆ. ಆ ದೌರ್ಜನ್ಯದ ವಿರುದ್ಧ ಅಲ್ಲಿನ ಹಿಂದೂಗಳು ಈ ಬಾರಿ ಸಂಘಟಿತರಾಗಿ ತಮ್ಮನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಮನೆಯಿಂದ ಹೊರಬಂದು ವಿರೋಧಿಸಿದ್ದರಿಂದ ಸ್ವಲ್ಪ ಪಾರಾಗಿದ್ದಾರೆ. ಆದರೆ ಎಲ್ಲಿಯವರೆಗೂ ಅಲ್ಲಿ ಮೂಲಭೂತವಾದಿ ಸ್ವಭಾವ ಇರುತ್ತದೆಯೋ ಅಲ್ಲಿನ ಹಿಂದೂಗಳ ಸಹಿತ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ತಲೆಯ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ. ಆದ್ದರಿಂದ ಆ ದೇಶದಿಂದ ಭಾರತಕ್ಕೆ ಒಳನುಸುಳುತ್ತಿರುವ ಮತ್ತು ಅದರ ಕಾರಣದಿಂದಾಗಿ ಇಲ್ಲಿ ಉದ್ಭವಿಸುತ್ತಿರುವ ಜನಸಂಖ್ಯಾ ಅಸಮತೋಲನವು ಇಲ್ಲಿನ ಸಾಮಾನ್ಯ ಜನರನ್ನು ಬಾಧಿಸುವ ಚಿಂತೆಯ ವಿಷಯವಾಗಿದೆ.

 

ಈಗ ಭಾರತದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನದ ಜೊತೆ ಸೇರುವ ಮಾತುಗಳು ಕೇಳಿಬರುತ್ತಿವೆ. ಇಂತಹ ಕಥನಗಳನ್ನು ಸೃಷ್ಟಿಸಿ, ಸ್ಥಾಪಿಸುವ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಯಾವ ದೇಶಗಳು ಬಯಸುತ್ತವೆ ಎಂದು ಹೇಳಬೇಕಾಗಿಲ್ಲ. ಅದಕ್ಕೆ ಸೂಕ್ತ ಉತ್ತರಗಳು ಇಲ್ಲಿನ ಆಡಳಿತಕ್ಕೆ ಸಂಬಂಧಿಸಿದ ವಿಷಯವಾಗಿದೆ. ಆದರೆ ಸಮಾಜದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನಷ್ಟ-ಭ್ರಷ್ಟಗೊಳಿಸುವ, ವೈವಿಧ್ಯತೆಯನ್ನು ಪ್ರತ್ಯೇಕತೆಯಂತೆ ಬಿಂಬಿಸುವ, ಸಮಸ್ಯೆಗಳಿಂದ ಬಳಲುತ್ತಿರುವ ಗುಂಪುಗಳಲ್ಲಿ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಮೂಡಿಸುವ ಮತ್ತು ಆತೃಪ್ತಿಯನ್ನು ಅರಾಜಕತೆಗೆ ಪರಿವರ್ತಿಸುವ ಪ್ರಯತ್ನಗಳು ಹೆಚ್ಚಾಗಿರುವುದು ಚಿಂತೆಯ ವಿಷಯವಾಗಿದೆ.

ಡೀಪ್ ಸ್ಟೇಟ್, ವೋಕಿಸಂ, ಕಲ್ಬರಲ್ ಮಾರ್ಕ್ಸಿಸ್ಟ್ ಇಂತಹ ಶಬ್ದಗಳು ಇತ್ತೀಚೆಗಿನ ದಿನಗಳಲ್ಲಿ ಚರ್ಚೆಯಲ್ಲಿವೆ. ವಾಸ್ತವವಾಗಿ, ಅವರು ಎಲ್ಲಾ ಸಾಂಸ್ಕೃತಿಕ ಸಂಪ್ರದಾಯಗಳ ಘೋಷಿತ ಶತ್ರುಗಳು. ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು ಮತ್ತು ಯಾವುದನ್ನು ಒಳ್ಳೆಯದು ಅಥವಾ ಮಂಗಳಕರವೆಂದು ಪರಿಗಣಿಸಲಾಗಿದೆಯೋ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ಗುಂಪಿನ ಕಾರ್ಯವೈಖರಿಯ ಒಂದು ಭಾಗ.

ಸಮಾಜದ ಮನಸ್ಸನ್ನು ರೂಪಿಸುವ ವ್ಯವಸ್ಥೆಗಳು ಮತ್ತು ಸಂಸ್ಥೆಗಳು, ಉದಾ. ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳು, ಸಂವಹನ ಮಾಧ್ಯಮ. ಬೌದ್ಧಿಕ ಸಂವಾದ ಇತ್ಯಾದಿಗಳನ್ನು ತಮ್ಮ ಪ್ರಭಾವಕ್ಕೆ ತಂದು ಅವುಗಳ ಮೂಲಕ ಸಮಾಜದ ವಿಚಾರ, ಸಂಸ್ಕಾರ ಮತ್ತು ನಂಬಿಕೆಗಳನ್ನು ನಾಶಪಡಿಸುವುದು ಅವರ ಕಾರ್ಯವೈಖರಿಯ ಮೊದಲ ಹೆಜ್ಜೆಯಾಗಿದೆ.

ಪಾಶ್ಚಿಮಾತ್ಯ ಪ್ರಪಂಚದ ಮುಂದುವರಿದ ದೇಶಗಳಲ್ಲಿ ಜೀವನದ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿಯು ಬಿಕ್ಕಟ್ಟಿಗೆ ಸಿಲುಕಿರುವುದು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. ತಥಾಕಥಿತ ʼಅರಬ್ ಸ್ಟ್ರಿಂಗ್ʼ ನಿಂದ ಪ್ರಾರಂಭಿಸಿ ನೆರೆಯ ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದರವರೆಗೆ ಈ ಪದ್ಧತಿಯು ಕಾರ್ಯನಿರ್ವಹಿಸಿದ್ದನ್ನು ನಾವು ನೋಡಿದ್ದೇವೆ.

ಭಾರತದಾದ್ಯಂತ ನಾಲ್ಕೂ ದಿಕ್ಕುಗಳಲ್ಲಿ ವಿಶೇಷವಾಗಿ ಗಡಿಪ್ರದೇಶ ಮತ್ತು ಬುಡಕಟ್ಟು ಜನನಿಬಿಡ ಪ್ರದೇಶಗಳಲ್ಲಿ ಇಂತಹ ದುಷ್ಟ ಪ್ರಯತ್ನಗಳನ್ನು ನಾವು ನೋಡುತ್ತಿದ್ದೇವೆ. ನಮ್ಮ ರಾಷ್ಟ್ರೀಯ ಜೀವನವು ಸಾಂಸ್ಕೃತಿಕ ಏಕಾತ್ಮತೆ ಮತ್ತು ಶ್ರೇಷ್ಠ ನಾಗರಿಕತೆಯ ಸುದೃಢ ಅಡಿಪಾಯದ ಮೇಲೆ ನಿಂತಿದೆ. ರಾಷ್ಟ್ರೀಯ ಜೀವನಕ್ಕೆ ಹಾನಿ ಮಾಡುವ ಮತ್ತು ನಾಶಗೊಳಿಸುವ ದುಷ್ಟ ಪ್ರಯತ್ನಗಳನ್ನು ಬಹುಮುಂಚಿತವಾಗಿಯೇ ನಿಲ್ಲಿಸುವ ಅವಶ್ಯಕತೆ ಇದೆ. ಇದಕ್ಕಾಗಿ ಜಾಗೃತ ಸಮಾಜವೇ ಪ್ರಯತ್ನ ನಡೆಸಬೇಕಿದೆ. ಇದಕ್ಕಾಗಿ ನಮ್ಮ ಸಂಸ್ಕೃತಿಜನ್ಯ ಜೀವನದರ್ಶನ ಮತ್ತು ಸಂವಿಧಾನದತ್ತ ಮಾರ್ಗದ ಆಧಾರದ ಮೇಲೆ ಪ್ರಜಾತಾಂತ್ರಿಕ ಯೋಜನೆ ರೂಪಿಸಬೇಕು. ವೈಚಾರಿಕ ಮತ್ತು ಸಾಂಸ್ಕೃತಿಕ ಮಾಲಿನ್ಯವನ್ನು ಹರಡುವ ಈ ಷಡ್ಯಂತ್ರಗಳಿಂದ ಸಮಾಜವನ್ನು ಸುರಕ್ಷಿತವಾಗಿಡುವುದು ಇಂದಿನ ಅಗತ್ಯವಾಗಿದೆ.

Share This Article