ರಾಯ್ಪುರ: ಜಾತಿ, ಸಂಪತ್ತು, ಭಾಷೆಯಿಂದ ಜನರನ್ನು ತಾರತಮ್ಯ ಮಾಡಬೇಡಿ, ಎಲ್ಲರೂ ನಿಮ್ಮವರೆಂದು ಭಾವಿಸಿ, ಭಾರತ ಎಲ್ಲರಿಗೂ ಸೇರಿದ್ದು ಎಂದು ದೇಶದ ಏಕತೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಕರೆ ನೀಡಿದ್ದಾರೆ.
ಛತ್ತೀಸ್‌ಗಢದ ಸೋನ್‌ಪೈರಿ ಗ್ರಾಮದಲ್ಲಿ ಡ.31ರಂದು ನಡೆದ ಸಮಾರಂಭದಲ್ಲಿ ಮಾತನಾಡಿದರು. ದೇಶದಲ್ಲಿ ವಲಸೆಗಾರರ ಮೇಲಿನ ದಾಳಿಗಳು ಹೆಚ್ಚುತ್ತಿರುವ ಹೊತ್ತಲ್ಲಿ ಮತ್ತು ಡೆಹ್ರಾಡೂನ್‌ನಲ್ಲಿ ತ್ರಿಪುರ ಮೂಲದ ವಿದ್ಯಾರ್ಥಿಯೊಬ್ಬನ ಮೇಲೆ ದೌರ್ಜನ್ಯ ನಡೆಸಿ, ಸಾವನ್ನಪ್ಪಿರುವ ಸಂಬಂಧ ಮಾತನಾಡಿ, ಜಾತಿ, ಸಂಪತ್ತು, ಭಾಷೆ ಅಥವಾ ಪ್ರದೇಶದಿಂದ ಜನರನ್ನು ನೋಡಬೇಡಿ. ಎಲ್ಲರನ್ನೂ ನಿಮ್ಮವರೆಂದು ಭಾವಿಸಿ. ಇಡೀ ಭಾರತ ನನ್ನದು ಎಂದು ಭಾವಿಸಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದೆಲ್ಲೆಡೆ ಹೊಸ ವರ್ಷದ ಸಂಭ್ರಮ; ದೇವಾಲಯಗಳಿಗೆ ಭಕ್ತರ ದಂಡು – ವಿಶೇಷ ಪೂಜೆ ಸಲ್ಲಿಕೆ
ತ್ರಿಪುರ ಮೂಲದ ಅಂಜೆಲ್ ಚಕ್ಮಾ ಎಂಬ ಎಂಬಿಎ ಅಂತಿಮ ವರ್ಷದ ವಿದ್ಯಾರ್ಥಿ ಡೆಹ್ರಾಡೂನ್‌ನಲ್ಲಿ ರಸ್ತೆಬದಿಯ ಕ್ಯಾಂಟೀನ್‌ನಲ್ಲಿ ಕುಳಿತಿದ್ದಾಗ ದಾಳಿ ನಡೆಸಲಾಗಿತ್ತು. ಅದಾದ ಬಳಿಕ 17 ದಿನಗಳ ಕಾಲ ಚಿಕಿತ್ಸೆ ಪಡೆದು, ಡಿ.26ರಂದು ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಸಾಮರಸ್ಯದ ಮೊದಲ ಹೆಜ್ಜೆಯಾಗಿ ಭೇದಭಾವ ಮತ್ತು ವಿಭಜನೆಯ ಭಾವನೆಗಳನ್ನು ಮನಸ್ಸಿನಿಂದ ತೆಗೆದುಹಾಕಬೇಕು. ಎಲ್ಲರನ್ನೂ ನಮ್ಮವರೆಂದು ಭಾವಿಸುವುದು ನಿಜವಾದ ಸಾಮಾಜಿಕ ಸಾಮರಸ್ಯ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಹೆಚ್ಚಳದ ಹಿನ್ನೆಲೆ ಆತ್ಮಾವಲೋಕನ ಮತ್ತು ರಚನಾತ್ಮಕ ಪರಿಹಾರಗಳ ಅಗತ್ಯವಿದೆ. ನಾವು ಹಿಂದೂಗಳು. ಯಾವಾಗಲೂ ಪರಿಹಾರಗಳ ಬಗ್ಗೆ ಯೋಚಿಸಬೇಕು. ನಾವು ಸ್ಥಿರರಾಗಿದ್ದರೆ ಯಾವ ಸಂಕಷ್ಟವೂ ನಮ್ಮನ್ನು ಮುಟ್ಟಲಾರದು. ಹಿಂದೂ ಸಮಾಜಕ್ಕೆ ಅಂತಹ ಬುದ್ಧಿಶಕ್ತಿ ಇದೆ. ಯಾವ ಹಿಂದೂವೂ ತನ್ನೊಳಗೆ ತಾರತಮ್ಯ ಮಾಡಬಾರದು ಎಂದು ಒತ್ತಿಹೇಳಿದರು.
ಧಾರ್ಮಿಕ ಮತಾಂತರದ ಬಗ್ಗೆ ಮಾತನಾಡಿದ ಅವರು, ಸಮಾಜದಲ್ಲಿ ವಿಶ್ವಾಸದ ಕೊರತೆಯೇ ಇದಕ್ಕೆ ಕಾರಣ. ಮೂಲ ಮಟ್ಟದಲ್ಲಿ ಜನರೊಂದಿಗೆ ಮರುಸಂಪರ್ಕ ಸಾಧಿಸುವುದು ಇದನ್ನು ತಡೆಗಟ್ಟಲು ಅಗತ್ಯ. ವಿಶ್ವಾಸ ಮತ್ತು ಅರ್ಥೈಸುವಿಕೆಯೇ ಸಮಾಜದ ಒಗ್ಗಟ್ಟಿನ ಮೂಲಾಧಾರ ಎಂದರು.ಇದನ್ನೂ ಓದಿ: ಹೊಸ ವರ್ಷಕ್ಕೆ LPG ಶಾಕ್ – ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 111 ರೂ. ಏರಿಕೆ

