ನವದೆಹಲಿ: ಕನ್ನಡ ವಚನಕಾರ ಹಾಗೂ ಸಮಾಜ ಸುಧಾರಕ ಬಸವಣ್ಣನವರ ಜಯಂತಿಯನ್ನು (Basava Jayanti) ಸಂಸತ್ ಭವನದಲ್ಲಿ (Parliament) ಆಚರಣೆ ಮಾಡಲಾಯಿತು.
ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಕಿರಣ್ ರಿಜಿಜು, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಮತ್ತು ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ನಾಯಕರು ಬಸವಣ್ಣನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಸಹ ಬಸವ ಜಯಂತಿಗೆ ಶುಭ ಹಾರೈಸಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಜಗದ್ಗುರು ಬಸವೇಶ್ವರರ ಆಳವಾದ ಜ್ಞಾನವನ್ನು ನಾವು ಸ್ಮರಿಸುತ್ತೇವೆ. ಸಮಾಜದ ಕೆಳಹಂತದಲ್ಲಿದ್ದವರನ್ನು ಮೇಲಕ್ಕೆತ್ತಲು ಅವರು ನಡೆಸಿದ ಪ್ರಯತ್ನಗಳು ನಮಗೆ ಮಾರ್ಗದರ್ಶನ ನೀಡುತ್ತಲೇ ಇವೆ ಎಂದು ಅವರು ಬರೆದುಕೊಂಡಿದ್ದಾರೆ.
2015 ರಲ್ಲಿ ಮೋದಿಯವರು ಲಂಡನ್‌ನಲ್ಲಿ ಬಸವೇಶ್ವರರ ಪ್ರತಿಮೆಯನ್ನು ಸಹ ಅನಾವರಣಗೊಳಿಸಿದ್ದರು.
ಬಸವಣ್ಣನವರು 12 ನೇ ಶತಮಾನದ ಮಹಾನ್ ತತ್ವಜ್ಞಾನಿ. ಅವರು ಲಿಂಗಾಯತ ಸಂಪ್ರದಾಯವನ್ನು ಸ್ಥಾಪಿಸಿದರು. ಈ ಮೂಲಕ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರ ಸಮಾನತೆಗಾಗಿ ಹೋರಾಡಿದರು.
ಸಮಾನತೆಯ ಪ್ರತಿಪಾದಕ ಎಂದು ಕರೆಯಲ್ಪಡುವ ಬಸವಣ್ಣನವರು ಅನುಭವ ಮಂಟಪ (ಆಧ್ಯಾತ್ಮಿಕ ಅನುಭವದ ಸಭಾಂಗಣ) ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು. ಅಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷರು ಮತ್ತು ಮಹಿಳೆಯರು ಜೀವನದ, ಆಧ್ಯಾತ್ಮಿಕ ವಿಚಾರಧಾರೆಗಳನ್ನು ಚರ್ಚಿಸುತ್ತಿದ್ದರು. ಅವರು ಅಹಿಂಸೆಯ ಪ್ರಬಲ ಪ್ರತಿಪಾದಕರಾಗಿದ್ದರು.