ಆನೇಕಲ್: ಕಾರಿನ ಗಾಜು ಒಡೆದು 9 ಲಕ್ಷ ರೂ. ಹಣವನ್ನು ದೋಚಿರುವ ಘಟನೆ ಆನೇಕಲ್ ನಗರದ ಉಪ ನೋಂದಾಣಾಧಿಕಾರಿಗಳ ಕಚೇರಿ ಬಳಿ ನಡೆದಿದೆ.
ನಗರದ ಜೆಪಿ ನಗರದ ನಿವಾಸಿ ದಿನಕರ್ ಎಂಬವರ ಕಾರಿನಲ್ಲಿ ಹಣ ಕಳ್ಳತನವಾಗಿದೆ. ಮನೆ ಮಾರಾಟ ಮಾಡಿ ಬಂದ ಹಣವನ್ನು ಕಾರಿನಲ್ಲಿ ಇಟ್ಟು ತೆರಳಿದ್ದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಹಣ ಕಳೆದುಕೊಂಡ ದಿನಕರ್, ಬನಹಳ್ಳಿಯಲ್ಲಿದ್ದ ಮನೆಯನ್ನು ಮಾರಾಟ ಮಾಡಿದ್ದೇವು. ಇಂದು ಮನೆ ಖರೀದಿ ಮಾಡಿದ್ದ ವ್ಯಕ್ತಿ ಕೊನೆ ಪಾವತಿಯಾಗಿ 9 ಲಕ್ಷ ರೂ. ನೀಡಿದ್ದರು. ಹಣ ಪಡೆದು ಕಾರಿನಲ್ಲಿಟ್ಟು ಕಚೇರಿ ಒಳಗೆ ತೆರಳಿ 10 ನಿಮಿಷದಲ್ಲಿ ಬಂದು ಕಾರು ನೋಡಿದರೆ ಶಾಕ್ ಆಗಿತ್ತು ಎಂದಿದ್ದಾರೆ.
ಕಾರಿನ ಗಾಜು ಒಡೆದ ದುಷ್ಕರ್ಮಿಗಳು ಹಣವನ್ನ ಕದ್ದು ಪರಾರಿಯಾಗಿದ್ದರು. ಕಾರು ನಿಲ್ಲಿಸಿದ್ದ ಸ್ಥಳದಲ್ಲೇ ಹೋಟೆಲ್ ಕೂಡ ಇತ್ತು. ಆದರೆ ಸ್ಥಳದಲ್ಲಿದ್ದ ಯಾರಿಗೂ ತಿಳಿಯದಂತೆ ಕಾರಿನ ಗಾಜು ಒಡೆದು ಹಣ ಕಳ್ಳತನ ಮಾಡಿದ್ದಾರೆ. ನನಗೆ ಈ ಸ್ಥಳದ ಪರಿಚಯ ಹೆಚ್ಚು ಇಲ್ಲ. ಸ್ಥಳೀಯವಾಗಿ ಒಂದು ಸಿಸಿಟಿವಿ ಮಾತ್ರ ಲಭ್ಯವಿದೆ. ಹಣ ಕಳ್ಳತನ ಆಗಿರುವ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ದಿನಕರ್ ತಿಳಿಸಿದ್ದಾರೆ. ದೂರು ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv