– ಎಂಡಿ ಪದ್ಮನಾಭ್ ಮತ್ತು ಲೆಕ್ಕಾಧಿಕಾರಿ ಪರಶುರಾಮ ನಾಪತ್ತೆ
– ನಾನು ಯಾವುದೇ ಮೌಖಿಕ ಆದೇಶ ನೀಡಿಲ್ಲ ಎಂದ ಸಚಿವ
ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ (Maharshi Valmiki Scheduled Tribe Development Corporation) ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ (Suicide) ಮಾಡಿಕೊಂಡ ಬೆನ್ನಲ್ಲೇ ನಿಗಮದಲ್ಲಿ ನಡೆದಿರುವ 87 ಕೋಟಿ ರೂ. ಅವ್ಯವಹಾರ (Corruption) ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ.
ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ನಾಗೇಂದ್ರ (Nagendra) ಇಷ್ಟೊಂದು ಹಣ ವರ್ಗಾವಣೆ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಬ್ಯಾಂಕ್ ಸಿಬ್ಬಂದಿ ಮತ್ತು ನಿಗಮದ ಸಿಬ್ಬಂದಿ ಯಾರು ರೀತಿ ಅಕ್ರಮ ಎಸಗಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆ ಮಾಡಿಸುತ್ತೇವೆ. ಸಿಐಡಿ (CID) ತನಿಖೆಯಲ್ಲಿ ಎಲ್ಲವೂ ಬಹಿರಂಗ ಆಗಲಿದೆ ಎಂದು ತಿಳಿಸಿದರು.
Advertisement
ನನ್ನ ಸಹಿ ನಕಲು ಮಾಡಲಾಗಿದೆ. ಇದು ನನ್ನ ಗಮನಕ್ಕೂ ಇಲ್ಲ ಎಂದು ನಿಗಮದ ಎಂಡಿ ಪದ್ಮನಾಭ್ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸಲಾಗುವುದು ಎಂದು ನಾಗೇಂದ್ರ ಹೇಳಿದರು. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯದ್ದು ಆತ್ಮಹತ್ಯೆ ಅಲ್ಲ, ಕೊಲೆ – ಆರ್. ಅಶೋಕ್
Advertisement
Advertisement
ಸಚಿವರು ಮೌಖಿಕ ಆದೇಶ ನೀಡಿದ್ದರು ಎಂದು ಡೆತ್‌ನೋಟ್‌ನಲ್ಲಿ (Death Note) ಉಲ್ಲೇಖವಾದ ಪ್ರಶ್ನೆಗೆ, ಆತ ಯಾರೆಂದೇ ನನಗೆ ಗೊತ್ತಿಲ್ಲ. ಅವರಿಗೆ ಮೌಖಿಕ ಆದೇಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ನಾಗೇಂದ್ರ ಸ್ಪಷ್ಟಪಡಿಸಿದರು.
Advertisement
ಚಂದ್ರಶೇಖರನ್ ಆತ್ಮಹತ್ಯೆ ಬೆನ್ನಲ್ಲೇ ನಿಗಮದ ಎಂಡಿ ಪದ್ಮನಾಭ್ ಮತ್ತು ಲೆಕ್ಕಾಧಿಕಾರಿ ಪರಶುರಾಮ ನಾಪತ್ತೆಯಾಗಿದ್ದಾರೆ. ಅತ್ತ, ಶಿವಮೊಗ್ಗದಲ್ಲಿ ಚಂದ್ರಶೇಖರನ್ ನಿವಾಸಕ್ಕೆ ಸಚಿವ ನಾಗೇಂದ್ರ ಅವರ ವಿಶೇಷಾಧಿಕಾರಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ, ನನ್ನ ಪತಿ ಹೇಡಿಯಲ್ಲ. ಅವರ ಸಾವಿಗೆ ನ್ಯಾಯ ಬೇಕು. ಮೂವರು ಅಧಿಕಾರಿಗಳ ವಿರುದ್ಧ ಕ್ರಮ ಆಗ್ಬೇಕು ಎಂದು ಮೃತರ ಪತ್ನಿ ಒತ್ತಾಯಿಸಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ಏನಿದು ಹಗರಣ?
ಎಂ.ಜಿ.ರೋಡ್‌ನ ಯೂನಿಯನ್ ಬ್ಯಾಂಕ್‌ನಲ್ಲಿ ನಿಗಮದ ಮುಖ್ಯ ಖಾತೆಯಿದ್ದು, ಅದರಲ್ಲಿ 187 ಕೋಟಿ ಹಣ ಇತ್ತು. ವಸಂತನಗರ ಶಾಖೆಯಲ್ಲಿ ವಾಲ್ಮೀಕಿ ನಿಗಮದ ಉಪಖಾತೆಯನ್ನು ಬ್ಯಾಂಕ್ ಮ್ಯಾನೇಜರ್ ಸುಚಿಸ್ಮಿತ ತೆರೆದಿದ್ದರು.
ಮಾರ್ಚ್ 24ರಂದು ನಿಗಮದ ಮುಖ್ಯ ಖಾತೆಯಿಂದ ಉಪಖಾತೆಗೆ 87 ಕೋಟಿ ಹಣ ವರ್ಗಾವಣೆಯಾಗಿತ್ತು. ಈ ವರ್ಗಾವಣೆ ವಿಚಾರ ಮೇ 21ರಂದು ನಿಗಮದ ಎಂಡಿ ಗಮನಕ್ಕೆ ಬಂದಿತ್ತು ಎನ್ನಲಾಗಿದೆ. ನಾನು ಸಹಿಯೇ ಮಾಡದೇ ಹಣ ವರ್ಗಾವಣೆ ಹೇಗೆ ಆಗಿದೆ ಎಂದು ಅಧೀಕ್ಷಕ ಚಂದ್ರಶೇಖರನ್‌ಗೆ ಪ್ರಶ್ನೆ ಮಾಡಿದ್ದಾರೆ. ಮೇ 27ರ ಒಳಗೆ 87 ಕೋಟಿ ಹಣ ವಾಪಸ್ ಮಾಡದಿದ್ರೆ ದೂರು ನೀಡುವ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಗೆ ಹೆದರಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ.
ಅಕ್ರಮ ಹಣ ವರ್ಗಾವಣೆ ಏಕೆ?
ಚುನಾವಣಾ ನೀತಿಸಂಹಿತೆ ಕಾರಣ ಸರ್ಕಾರದ ಯಾವುದೆ ಹಣ ಬಿಡುಗಡೆ ಆಗದೇ ಡೆಡ್ ಸ್ಟೋರೇಜ್‌ನಲ್ಲಿ ಇರುತ್ತದೆ. ಇಂತಹ ಹಣವನ್ನ ಇಲಾಖೆ ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಸೇರಿ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯಿದೆ. 2-3 ತಿಂಗಳ ಮಟ್ಟಿಗೆ ಹೆಚ್ಚಿನ ಬಡ್ಡಿ ಪಡೆಯಲು ಬೇರೆ ಖಾತೆಗಳಿಗೆ ಈ ಹಣ ವರ್ಗಾಯಿಸಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ನೀತಿಸಂಹಿತೆ ಮುಗಿಯುವ ಒಳಗೆ ಈ ಹಣವನ್ನು ಬಡ್ಡಿ ಸಹಿತ ಮೂಲ ಖಾತೆಗೆ ವರ್ಗಾವಣೆ ಮಾಡಿದರೆ ಹೆಚ್ಚುವರಿಯಾಗಿ ಸಿಕ್ಕಿದ ಬಡ್ಡಿ ಹಣವನ್ನು ಬ್ಯಾಂಕ್ ಅಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಹಂಚಿಕೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬೇರೆ ಬೇರೆ ಇಲಾಖೆಯಲ್ಲಿಯೂ ಇಂತಹುದೇ ಅಕ್ರಮ ನಡೆದಿರುವ ಅನುಮಾನ ಈಗ ವ್ಯಕ್ತವಾಗುತ್ತಿದೆ.