ಚಿಕ್ಕಬಳ್ಳಾಪುರ/ಬಾಗಲಕೋಟೆ/ಬೆಳಗಾವಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ರಾಜ್ಯದಲ್ಲಿ ದಾಖಲೆ ಇಲ್ಲದ ಹಣ ಸಾಗಾಣೆ ಹೆಚ್ಚಾಗುತ್ತಿದ್ದು, ಇಂದು ಪ್ರತ್ಯೇಕ ಮೂರು ಘಟನೆಗಳಲ್ಲಿ 74 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ.
1.ಬಾಗಲಕೋಟೆ:
ಬಾಗಲಕೋಟೆ ಜಿಲ್ಲೆಯ ಹೊನ್ನಾಕಟ್ಟಿ ಕ್ರಾಸ್ ಚೆಕ್‍ಪೋಸ್ಟ್ ಬಳಿ ಕೆಎ 29, ಎನ್2053 ನಂಬರ್ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 50 ಲಕ್ಷ ರೂ. ಹಣವನ್ನು ಬಾಗಲಕೋಟೆ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಫ್ಲೈಯಿಂಗ್ ಸ್ಕ್ವಾಡ್, ಬಾಗಲಕೊಟೆ ತಹಶೀಲ್ದಾರ್ ಹಾಗೂ ಗ್ರಾಮೀಣ ಪೊಲೀಸರ ತಂಡ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಅಕ್ರಮ ಹಣ ಪತ್ತೆಯಾಗಿದೆ. ಸದ್ಯ ಪೊಲೀಸರು ಹಣ ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ. ಈ ಹಣ ಇಳಕಲ್ ಡಿಸಿಸಿ ಬ್ಯಾಂಕ್ ಸೇರಿದ್ದು ಎನ್ನಲಾಗಿದೆ.
2.ಬೆಳಗಾವಿ:
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಇರುವ ಗಡಿ ಗ್ರಾಮ ಕುಗನೊಳಿ ಚೆಕ್ ಫೋಸ್ಟ್ ನಲ್ಲಿ ಮಹಾರಾಷ್ಟ್ರದಿಂದ ಬೆಳಗಾವಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 20 ಲಕ್ಷ ರೂ. ಹಣವನ್ನ ಚುಣಾವಣಾ ಅಧಿಕಾರಿಗಳು ಮತ್ತು ನಿಪ್ಪಾಣಿ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕ್ರೇಟಾ ಕಾರ್ ಡಿಕ್ಕಿಯಲ್ಲಿ ದಾಖಲೆ ಇಲ್ಲದ 20 ಲಕ್ಷ ಹಣವನ್ನ ಸಾಗಾಟ ಮಾಡುತ್ತಿದ್ದ ಅರುಣ್ ಸಿಕ್ರೆ ಎಂಬಾತ ಸೇರಿದಂತೆ ಮೂವರನ್ನು ನಿಪ್ಪಾಣಿ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಇದೇ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ 7 ಲಕ್ಷ ರೂ. ಹಣ ಜಪ್ತಿ ಮಾಡಲಾಗಿತ್ತು.
3.ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಮಾಡಿಕೆರೆ ಕ್ರಾಸ್ ಚೆಕ್ ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ದಾಖಲೆ ಇಲ್ಲದೇ ಸಾಗಾಟ ನಡೆಸಿದ್ದ 4 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರದ ನೆಲ್ಲೂರು ಮೂಲದ ಸಿವಿಲ್ ಕಂಟ್ರ್ಯಾಕ್ಟರ್ ಚೆಲ್ಲಮಾರೆಡ್ಡಿ ಎಂಬಾತ ತನ್ನ ಕಾರಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದ. ಚೆಕ್ ಪೋಸ್ಟ್ ನಲ್ಲಿ ಕಾರು ತಪಾಸಣೆ ವೇಳೆ ಕಾರಿನಲ್ಲಿ ನಗದು ಪತ್ತೆಯಾಗಿದ್ದು, ಸೂಕ್ತ ದಾಖಲೆಗಳಿಲ್ಲದ ಕಾರಣ ಹಣವನ್ನ ಚುನಾವಣಾಧಿಕಾರಿಗಳು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ.