ಧಾರವಾಡ: ಕಳೆದ ವರ್ಷ ಜುಲೈನಲ್ಲಿ ಕಳಸಾ ಬಂಡೂರಿ ಯೋಜನೆಗಾಗಿ ಬೀದಿಗಿಳಿದಿದ್ದ ರೈತರ ಮೇಲೆ ಪೊಲೀಸರು ಅಮಾನವೀಯವಾಗಿ ಲಾಠಿ ಬೀಸಿದ್ರು. ಧಾರವಾಡದ ನವಲಗುಂದದ ಯಮನೂರ ಗ್ರಾಮಸ್ಥರ ಮೇಲೆ ಯಮನಂತೆ ಎರಗಿದ್ದ ಪೊಲೀಸರು ಮಹಿಳೆಯರು, ಮಕ್ಕಳು ಎನ್ನದೇ ಲಾಠಿ ಬೀಸಿದ್ರು. ಈಗ ಲಾಠಿ ಏಟು ತಿಂದ ರೈತರಿಗೆ ಸರ್ಕಾರ ಪರಿಹಾರವೇನೋ ಕೊಟ್ಟಿದೆ. ಆದರೆ ಇಲ್ಲಿಯ ಜನರು ತಿಂದ ಲಾಠಿ ಏಟಿಗೆ ಸರ್ಕಾರ 100 ರೂಪಾಯಿ ಬೆಲೆ ಕಟ್ಟಿದೆಯೇ ಎಂಬ ಅನುಮಾನ ಮೂಡಿದೆ
ಕಳೆದ ವರ್ಷ ಜುಲೈನಲ್ಲಿ ಕಳಸಾ ಬಂಡೂರಿ ನಾಲಾ ಜೋಡಣೆಗೆ ಆಗ್ರಹಿಸಿ ಧಾರವಾಡ ಜಿಲ್ಲೆಯಲ್ಲಿ ನಡೆದ ಹೋರಾಟದ ವೇಳೆ, ಪೊಲೀಸರು ನವಲಗುಂದ ತಾಲೂಕಿನ ಯಮನೂರ ಗ್ರಾಮಸ್ಥರ ಮೇಲೆ ನಡೆಸಿದ ದೌರ್ಜನ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ಈ ಘಟನೆಯಲ್ಲಿ ಗ್ರಾಮದ ಎಷ್ಟೋ ಜನರು ಲಾಠಿ ಏಟಿನಿಂದ ಬಳಲಿ ಹೋಗಿದ್ದರು. ಮಹದಾಯಿ ನೀರಿಗಾಗಿ ನಡೆದಿದ್ದ ಈ ಹೋರಾಟದ ವೇಳೆ ಮಹಿಳೆಯರು, ವೃದ್ಧರು ಎನ್ನದೇ ಪೊಲೀಸರು ಲಾಠಿಯಿಂದ ಬಡಿದಿದ್ದರು. ಘಟನೆ ನಂತರ ಎಷ್ಟೋ ಜನಾ ಏಳೊಕೂ ಆಗದೇ ಮನೆಯಲ್ಲೇ ಚಿಕಿತ್ಸೆ ಮಾಡಿಸಿದ್ದರು. ಅದಕ್ಕೆ ಸರ್ಕಾರ ಈಗ ಬೆಲೆ ಕಟ್ಟಿದೆ. ಗ್ರಾಮದಲ್ಲಿ 165 ಜನರಿಗೆ ಲಾಠಿ ಏಟು ಬಿದ್ದಿತ್ತು. ಅವರಿಗೆ ಸರ್ಕಾರ 500, 1 ಸಾವಿರ, 2 ಸಾವಿರ ಹಾಗೂ 3 ಸಾವಿರ ರೂ. ಪರಿಹಾರ ನೀಡಿದೆ. ಇನ್ನು ಪ್ರತಿ ಏಟಿಗೆ ನೂರು ರೂಪಾಯಿಯಂತೆ ಬೆಲೆ ಕಟ್ಟಿರುವ ಸರ್ಕಾರ, 5 ಏಟು ತಿಂದವನಿಗೆ 500 ರೂಪಾಯಿ ಹಾಗೂ 14 ಏಟು ತಿಂದವನಿಗೆ 1400 ರೂಪಾಯಿ ಚೆಕ್ ನೀಡಿದೆ.
ಗ್ರಾಮದ ಇಬ್ಬರಿಗೆ ಮಾತ್ರ 10 ಸಾವಿರ ರೂ. ಹಾಗೂ ಓರ್ವ ವೃದ್ಧರಿಗೆ 25 ಸಾವಿರ ರೂ. ಪರಿಹಾರ ನೀಡಿದ್ದು ಬಿಟ್ಟರೆ ಉಳಿದವರಿಗೆಲ್ಲಾ ಬಿಡಿಗಾಸಿನ ಚೆಕ್ ನೀಡಿದೆ. ಶಿವಾನಂದ ಎಂಬವರ ಮನೆಯೊಂದರಲ್ಲೇ 3 ಜನರಿಗೆ ಲಾಠಿ ಏಟು ಕೊಟ್ಟಿದ್ದರು. ಅದರಲ್ಲಿ ಶಿವಪ್ಪ ಚುಳುಕಿ ಹಾಗೂ ಅವರ ತಂದೆ ಜೈಲು ಸೇರಿದ್ದರು. ಆದರೆ ಜೈಲಿನಿಂದ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದ್ದೇ 30 ರಿಂದ 40 ಸಾವಿರ ರೂ. ಬಿಲ್ ಆಗಿದೆ. ಆದರೆ ಅವರ ಮನೆಗೆ 2700 ರೂ. ಚೆಕ್ ಮಾತ್ರ ಬಂದಿದೆ. ಹೀಗಾಗಿ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸುವ ಗ್ರಾಮಸ್ಥರು, ಪೊಲೀಸರ ಲಾಠಿ ಏಟು ಇನ್ನೂ ಮಾಸಿಲ್ಲ ಅಂತಾರೆ.
ಸರ್ಕಾರ ನ್ಯಾಯಯುತವಾಗಿ ಪರಿಹಾರ ನೀಡಬೇಕಿತ್ತು. ಅದನ್ನ ಬಿಟ್ಟು ಲಾಠಿ ಏಟಿಗೆ ಬೆಲೆ ಕಟ್ಟಿದೆ ಎಂಬುದು ಇಲ್ಲಿನ ಜನರ ಆಕ್ರೋಶವಾಗಿದೆ. ಇನ್ನು ಕೆಲವರು ಜೈಲಿಗೆ ಹೋದ ಕಾರಣ ಅವರ ಹೊಲದಲ್ಲಿದ್ದ ಬೆಳೆ ಕೂಡ ನಾಶವಾಗಿತ್ತು. ಅದು ಕೂಡ ರೈತರಿಗೆ ನಷ್ಟ ಉಂಟು ಮಾಡಿತ್ತು.