1 ಕಿ.ಮಿಗೆ 1.59 ಲಕ್ಷ, ದಿನಕ್ಕೆ 50 ಲಕ್ಷ – ಭಾರತ್‌ ಜೋಡೋ ಯಾತ್ರೆಗೆ ಬರೋಬ್ಬರಿ 71 ಕೋಟಿ ಖರ್ಚು

Public TV
2 Min Read
Bharat Jodo Yatra 2

ನವದೆಹಲಿ: ಕಳೆದ ವರ್ಷ ರಾಹುಲ್‌ ಗಾಂಧಿ (Rahul Gandhi) ನಡೆಸಿದ್ದ ಭಾರತ್‌ ಜೋಡೋ (Bharat Jodo) ಯಾತ್ರೆಗೆ ಕಾಂಗ್ರೆಸ್‌ ಬರೋಬ್ಬರಿ 71.8 ಕೋಟಿ ರೂ. ಖರ್ಚು ಮಾಡಿದೆ.

ಕಾಂಗ್ರೆಸ್‌ (Congress) ಪಕ್ಷ ಚುನಾವಣಾ ಆಯೋಗಕ್ಕೆ 2022-23ನೇ ಹಣಕಾಸು ವರ್ಷದ ವಾರ್ಷಿಕ ಲೆಕ್ಕಪರಿಶೋಧನಾ ವರದಿ ಸಲ್ಲಿಸಿದೆ. 2022- 23ನೇ ಸಾಲಿನಲ್ಲಿ ಕಾಂಗ್ರೆಸ್‌ 452 ಕೋಟಿ ರೂ. ಆದಾಯಗಳಿಸಿದ್ದರೆ 467 ಕೋಟಿ ರೂ. ಖರ್ಚು ಮಾಡಿದೆ.

Rahul Gandhi Bharat Jodo Yatra

ತಮಿಳುನಾಡಿನ ಕನ್ಯಾಕುಮಾರಿಯಿಂದ 2022ರ ಸೆಪ್ಟೆಂಬರ್ 7 ರಂದು ಆರಂಭಗೊಂಡ ಯಾತ್ರೆ 4 ಸಾವಿರ ಕಿಲೋಮೀಟರ್‌ ಕ್ರಮಿಸಿ ಜನವರಿ 30 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಂಡಿತ್ತು. ಒಟ್ಟು 145 ದಿನಗಳ ಯಾತ್ರೆಯ ವೆಚ್ಚವನ್ನು ಪರಿಗಣಿಸಿದರೆ ದಿನಕ್ಕೆ ಅಂದಾಜು 50 ಲಕ್ಷ ರೂ. ಮತ್ತು ಪ್ರತಿ ಕಿ.ಮೀಗೆ ಅಂದಾಜು 1.59 ಲಕ್ಷ ರೂ. ಹಣವನ್ನು ಕಾಂಗ್ರೆಸ್‌ ಖರ್ಚು ಮಾಡಿದೆ. ಜೋಡೋ ಯಾತ್ರೆಯ ಒಟ್ಟು ವೆಚ್ಚವು ಕಾಂಗ್ರೆಸ್ ಒಟ್ಟು ಆದಾಯದ 15.3% ರಷ್ಟಿದೆ. ಇದನ್ನೂ ಓದಿ: ಸಾಮೂಹಿಕ ವಿವಾಹದಲ್ಲಿ ಗೋಲ್ಮಾಲ್ – ಹಣಕ್ಕೆ ದಂಪತಿಯಾದ ಜೋಡಿಗಳು, 15 ಮಂದಿ ಸೇರಿ ಇಬ್ಬರು ಅಧಿಕಾರಿಗಳ ಬಂಧನ

ಹಿಂದಿನ ವರ್ಷಕ್ಕೆ ಹೋಲಿಸಿದರೆ, 2022-23ರಲ್ಲಿ ‘ಆಡಳಿತ ಮತ್ತು ಸಾಮಾನ್ಯ ವೆಚ್ಚಗಳ’ ಅಡಿಯಲ್ಲಿ ಕಾಂಗ್ರೆಸ್ ಪಕ್ಷದ ವೆಚ್ಚ 2.6% ಪಟ್ಟು ಹೆಚ್ಚಾಗಿದೆ.

Bharat Jodo Yatra

ಒಟ್ಟಾರೆ ವೆಚ್ಚ 2021-22 ಮತ್ತು 2022-23 ಹೋಲಿಕೆ ಮಾಡಿದರೆ 400 ಕೋಟಿ ರೂ. ನಿಂದ 467 ಕೋಟಿ ರೂ.ಗೆ ಏರಿಕೆಯಾಗಿದೆ. ಮತ್ತೊಂದೆಡೆ ಪಕ್ಷದ ಆದಾಯವು ಕುಸಿದಿದ್ದು, 2021-22 ರಲ್ಲಿ 541 ಕೋಟಿ ರೂ. ಇದ್ದರೆ 2022-23 ರಲ್ಲಿ 452 ಕೋಟಿ ರೂ.ಗೆ ಇಳಿದಿದೆ. ಇದನ್ನೂ ಓದಿ: ಮಲೆ ಮಹದೇಶ್ವರನಿಗೆ ಹಣದ ಮಳೆ – 1 ತಿಂಗಳಲ್ಲಿ ಕೋಟಿ ಕೋಟಿ ಆದಾಯ, ವಿದೇಶಿ ಕರೆನ್ಸಿಗಳು ಪತ್ತೆ

ಪಕ್ಷಕ್ಕೆ ನೀಡಿದ ದೇಣಿಗೆಗಳು, ಅನುದಾನಗಳು ಮತ್ತು ಕೊಡುಗೆಗಳು ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, 2021-22 ರಲ್ಲಿ 347 ಕೋಟಿ ರೂ. ಗಳಿಸಿದ್ದರೆ 2022-23 ರಲ್ಲಿ 268 ಕೋಟಿ ರೂ.ಗೆ ಕುಸಿದಿದೆ.

2022-23 ರಲ್ಲಿ 192 ಕೋಟಿ ರೂ. ಹಣವನ್ನು ಚುನಾವಣೆಗೆ ಖರ್ಚು ಮಾಡಿದ್ದರೆ ಚುನಾವಣಾ ಸರ್ವೆಗಾಗಿ 40 ಕೋಟಿ ರೂ. ವೆಚ್ಚ ಮಾಡಿದೆ. 2021-22ರಲ್ಲಿ ಕಾಂಗ್ರೆಸ್‌ 279.5 ಕೋಟಿ ರೂ. ಹಣವನ್ನು ಚುನಾವಣೆಗೆ ಖರ್ಚು ಮಾಡಿದ್ದರೆ ಸಮೀಕ್ಷೆ ನಡೆಸಲು 23 ಲಕ್ಷ ಹಣ ವೆಚ್ಚ ಮಾಡಿತ್ತು.

Share This Article