
ಹೈದರಾಬಾದ್: 50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣವನ್ನು ಸೈಬರಾಬಾದ್ ಪೊಲೀಸರು ಭೇದಿಸಿದ್ದು, ಏಳು ಜನರನ್ನು ಅರೆಸ್ಟ್ ಮಾಡಿದ್ದಾರೆ.
ದೆಹಲಿ ಮತ್ತು ಹೈದರಾಬಾದ್ ಮೂಲದ ಆರೋಪಿಗಳು ತಾಂತ್ರಿಕ ಸೇವೆಗಳನ್ನು ಒದಗಿಸುವ ನೆಪದಲ್ಲಿ ವಿದೇಶಿ ಗ್ರಾಹಕರಿಗೆ ವಂಚಿಸುತ್ತಿದ್ದರು. ಈ ಕುರಿತು ಸೈಬರಾಬಾದ್ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ತನಿಖೆ ಪ್ರಾರಂಭಿಸಿದ್ದರು. ಇದನ್ನೂ ಓದಿ: ಸಂಕ್ರಾಂತಿ ಪುಣ್ಯಸ್ನಾನ ಮಾಡಲು ಹೋಗಿ ಇಬ್ಬರು ಯುವಕರು ನೀರುಪಾಲು
ಹೈದರಾಬಾದ್‍ನ ಎಚ್‍ಡಿಎಫ್‍ಸಿ ಬ್ಯಾಂಕ್ ಕ್ರೆಡಿಟ್ ಇಂಟೆಲಿಜೆನ್ಸ್ ಮತ್ತು ಕಂಟ್ರೋಲ್ ಯೂನಿಟ್‍ನ ಅಧಿಕೃತ ಸಹಿದಾರ ಅಬ್ದುಲ್ ನಯೀಮ್ ಅವರು ಈ ಕುರಿತು ದೂರು ನೀಡಿದ್ದರು. ಈ ದೂರಿನಲ್ಲಿ ತಮಗೆ ನೀಡಿರುವ ಸ್ವೈಪಿಂಗ್ ಮಷಿನ್‍ನಲ್ಲಿ ಅನೇಕ ಅನುಮಾನಾಸ್ಪದ ವಹಿವಾಟುಗಳು ನಡೆಯುತ್ತಿದೆ. ಡಿಸೆಂಬರ್ 18 ಮತ್ತು 23, 2021 ರ ನಡುವೆ 85 ವಿವಿಧ ಅಂತರರಾಷ್ಟ್ರೀಯ ಕಾರ್ಡ್‍ಗಳ ಮೂಲಕ 64.40 ಲಕ್ಷ ರೂಪಾಯಿಗಳ ವಹಿವಾಟು ನಡೆಸಲಾಗಿದೆ. ಈ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಕೋರಿದ್ದರು.
ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ ಈ ಕುರಿತು ಮಾತನಾಡಿದ್ದು, ಈ ಆರೋಪಿಗಳು ಯುನೈಟೆಡ್ ಕಿಂಗ್‍ಡಮ್, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾದ ನಿವಾಸಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಬಂಧಿತರನ್ನು ನವೀನ್ ಭೂತಾನಿ, ಮೋಹಿತ್ ಮತ್ತು ಮೋನು ಎಂದು ಗುರುತಿಸಲಾಗಿದ್ದು, ಎಲ್ಲರೂ ನವದೆಹಲಿಯ ನಿವಾಸಿಗಳು. ನಾಗರಾಜು ಬೊಂಡದ, ದೊಂತುಲ ಶ್ರವಣ ಕುಮಾರ್, ಸಾಧನಾಲ ಮುಕ್ಕಂಟಿ ಶ್ರೀನಿವಾಸ ರಾವ್ ಮತ್ತು ಪವನ್ ವೆನ್ನೆಲಕಂಟಿ ಇವರೆಲ್ಲರೂ ಹೈದರಾಬಾದ್‍ನವರು. ಅವರಿಂದ 1.11 ಕೋಟಿ ರೂಪಾಯಿ ನಗದು, ನಾಲ್ಕು ದ್ವಿಚಕ್ರದ ವಾಹನಗಳು, ಲ್ಯಾಪ್‍ಟಾಪ್‍ಗಳು, ಮೊಬೈಲ್ ಫೋನ್‍ಗಳು, ಚೆಕ್ ಬುಕ್‍ಗಳು ಮತ್ತು ಡೆಬಿಟ್ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೃತ್ಯ ಹೇಗೆ ಎಸಗುತ್ತಿದ್ದರು?
ನವೀನ್ ಭೂತಾನಿ ಮೋನು ನೆರವಿನೊಂದಿಗೆ ಹೊಸ ದೆಹಲಿಯ ಜನಕ್‍ಪುರಿ, ಗಾಜಿಯಾಬಾದ್‍ನ ಕೌಶಾಂಬಿ ಮತ್ತು ಪಂಜಾಬ್‍ನ ಮೊಹಾಲಿಯಲ್ಲಿ ತಾಂತ್ರಿಕ ಸೇವೆಗಳನ್ನು ಒದಗಿಸುವ ನೆಪದಲ್ಲಿ ಗ್ರಾಹಕರನ್ನು ವಂಚಿಸಲು ಮೂರು ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಿದ್ದರು. ಪೇಪಾಲ್, ಅಮೆಜಾನ್, ರೂಟರ್, ಇತ್ಯಾದಿ ಟೆಕ್ ಸಮಸ್ಯೆಗಳಿಗೆ ಆಸ್ಟ್ರೇಲಿಯಾ, ಯುಕೆ ಮತ್ತು ಸಿಂಗಾಪುರದಲ್ಲಿಯೂ ಸೇವೆ ನೀಡುವುದಾಗಿ ಗೂಗಲ್‍ನಲ್ಲಿ ಜಾಹೀರಾತು ನೀಡಿದ್ದರು. ಇದನ್ನೂ ಓದಿ: ನಾವು ಆಪರೇಷನ್ ಕಮಲವನ್ನು ಬಲವಂತವಾಗಿ ಮಾಡಿಲ್ಲ: ರೇಣುಕಾಚಾರ್ಯ
ಈ ಜಾಹೀರಾತು ನೋಡಿ ಕರೆ ಮಾಡಿದವರಿಗೆ ಸೇವೆ ನೀಡಿ ನಂತರ ಮೋಹಿತ್ ಒದಗಿಸಿದ ಪಾವತಿ ಗೇಟ್‍ವೇ ಲಿಂಕ್‍ಗಳ ಮೂಲಕ ತಮ್ಮ ಸೇವೆಗೆ ಹಣ ಸಂಗ್ರಹಿಸುತ್ತಿದ್ದರು. ಆ ಲಿಂಕ್ ಸಹಾಯದಿಂದ ಇವರು ಗ್ರಾಹಕ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುತ್ತಿದ್ದರು.